ಸಾರಾಂಶ
ಬಿ.ಜಿ ಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 12 ವಿದ್ಯಾರ್ಥಿಗಳಿದ್ದು, ಇಲಾಖೆ ಇಬ್ಬರು ಶಿಕ್ಷಕರನ್ನು ಈ ಶಾಲೆಗೆ ಒದಗಿಸಿದೆ. ಸೌಲಭ್ಯದ ಕೊರತೆ ಇಲ್ಲ, ಪೋಷಕರ ಕಿರಿಕಿರಿ ಇಲ್ಲ , ಆದರೆ ಮುಖ್ಯ ಶಿಕ್ಷಕರದೇ ಸಮಸ್ಯೆ . ಈ ಬಡಾವಣೆ ಸಮೀಪವೇ ಖಾಸಗಿ ಶಾಲೆಗಳು ಇದ್ದರೂ ಸಹ ಪೋಷಕರು ಶಾಲೆಯ ಇಲಾಖೆಯ ಬಗ್ಗೆ ಪೂರ್ಣ ಭರವಸೆ ಇಟ್ಟು ತಮ್ಮ ಮಕ್ಕಳನ್ನು ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂದು ಕಳಿಸುತ್ತಿದ್ದಾರೆ. ಆದರೆ ಶಾಲಾ ಮುಖ್ಯ ಶಿಕ್ಷಕರೇ ಶಾಲೆಗೆ ವಿಳಂಬವಾಗಿ ಆಗಮಿಸುತ್ತಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ವಿಳಂಬವಾಗಿ ಬಂದರೂ ನಂತರ ಮನೆಯಿಂದ ತಂದ ಉಪಹಾರವನ್ನು ಸೇವಿಸುತ್ತಾ ಕೂರುತ್ತಾರೆ. ಇದು ಒಂದೆರಡು ದಿನದ ಕಥೆಯಲ್ಲ.
ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರಕ್ಕೆ ಹೊಂದಿಕೊಂಡಂತೆ ಇರುವ ಬಿ.ಜಿ ಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 12 ವಿದ್ಯಾರ್ಥಿಗಳಿದ್ದು, ಇಲಾಖೆ ಇಬ್ಬರು ಶಿಕ್ಷಕರನ್ನು ಈ ಶಾಲೆಗೆ ಒದಗಿಸಿದೆ. ಸೌಲಭ್ಯದ ಕೊರತೆ ಇಲ್ಲ, ಪೋಷಕರ ಕಿರಿಕಿರಿ ಇಲ್ಲ , ಆದರೆ ಮುಖ್ಯ ಶಿಕ್ಷಕರದೇ ಸಮಸ್ಯೆ .ಪ್ರಾಥಮಿಕ ಶಿಕ್ಷಣಕ್ಕೆ ಸರ್ಕಾರ ಸಾಕಷ್ಟು ಒತ್ತು ನೀಡುತ್ತಿದ್ದು, ಸೌಲಭ್ಯಗಳನ್ನು ನೀಡಿದೆ. ಈ ಬಣಜಾರ ಗೊಲ್ಲರಹಟ್ಟಿ ಶಾಲೆಗೂ ಇತರ ಶಾಲೆಗಳಂತೆ ಬಿಸಿ ಊಟ, ಮೊಟ್ಟೆ, ಚಿಕ್ಕಿ , ಬಾಳೆಹಣ್ಣು, ಹಾಲು, ಸಮವಸ್ತ್ರ, ಶೂ ಹಾಗೂ ಉಚಿತ ಪುಸ್ತಕ ಸೌಲಭ್ಯವನ್ನು ನೀಡಿದೆ.
ಈ ಬಡಾವಣೆ ಸಮೀಪವೇ ಖಾಸಗಿ ಶಾಲೆಗಳು ಇದ್ದರೂ ಸಹ ಪೋಷಕರು ಶಾಲೆಯ ಇಲಾಖೆಯ ಬಗ್ಗೆ ಪೂರ್ಣ ಭರವಸೆ ಇಟ್ಟು ತಮ್ಮ ಮಕ್ಕಳನ್ನು ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂದು ಕಳಿಸುತ್ತಿದ್ದಾರೆ. ಆದರೆ ಶಾಲಾ ಮುಖ್ಯ ಶಿಕ್ಷಕರೇ ಶಾಲೆಗೆ ವಿಳಂಬವಾಗಿ ಆಗಮಿಸುತ್ತಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ವಿಳಂಬವಾಗಿ ಬಂದರೂ ನಂತರ ಮನೆಯಿಂದ ತಂದ ಉಪಹಾರವನ್ನು ಸೇವಿಸುತ್ತಾ ಕೂರುತ್ತಾರೆ. ಇದು ಒಂದೆರಡು ದಿನದ ಕಥೆಯಲ್ಲ.ಪೋಷಕರು ಮುಖ್ಯ ಶಿಕ್ಷಕಿಗೆ ಅನೇಕ ಬಾರಿ ಸಮಯ ಪಾಲನೆ ಮಾಡುವಂತೆ ಮನವಿ ಮಾಡಿದ್ದಾರೆ. ಆದರೂ ಕ್ಯಾರೆ ಎನ್ನದ ನಡವಳಿಕೆಯಿಂದಾಗಿ ಬಿಇಒ ಕಚೇರಿಗೂ ದೂರು ನೀಡುವ ಹಂತಕ್ಕೆ ಹೋಗಿದೆ. ಮೌಖಿಕವಾಗಿಯೂ ಕೆಲವು ವೇಳೆ ಸಮಯ ಪಾಲನೆ ಮಾಡುವಂತೆ ತಿಳಿಸಿದ್ದಾರಾದರೂ ಯಾವುದೇ ಬದಲಾವಣೆಯಾಗಿಲ್ಲ. ಪೋಷಕರ ದೂರುಗಳ ಹಿನ್ನೆಲೆಯಲ್ಲಿ ಸದರಿ ಶಿಕ್ಷಕಿಗೆ ನೋಟಿಸ್ ಕೊಟ್ಟು ಅಧಿಕಾರಿಗಳು ಎಚ್ಚರಿಸಿದ್ದರೂ ಮುಖ್ಯ ಶಿಕ್ಷಕರು ನಡೆದದ್ದೇ ದಾರಿ ಎಂಬಂತೆ ವರ್ತಿಸುತ್ತಿದ್ದಾರೆ.
ಪೋಷಕರ ತಾಳ್ಮೆಗೂ ಮಿತಿ ಇರುತ್ತದೆ ಎನ್ನುತ್ತಾರೆ ಪೋಷಕರು. ಕೇವಲ ನೋಟಿಸ್ ಕೊಟ್ಟು ಸುಮ್ಮನಾದರೆ ಸಮಸ್ಯೆ ಪರಿಹಾರ ಆದಂತೆ ಆಗುತ್ತದೆಯೇ. ಮಕ್ಕಳಿಗೆ ನ್ಯಾಯ ಕೊಡಿಸುವುದಾದರೂ ಹೇಗೆ? ಸ್ಥಳೀಯವಾಗಿಯೇ ದಕ್ಷ ಅಧಿಕಾರಿಗಳು ಇರಬೇಕಾದರೆ ನಾವು ಹಿರಿಯ ಅಧಿಕಾರಿಗಳೊಂದಿಗೆ ಹೋಗುವ ಪ್ರಮೇಯ ಇಲ್ಲ ಎಂದು ಸುಮ್ಮನಿದ್ದೇವೆ. ಬಿಇಒರವರು ತುರ್ತಾಗಿ ಅಗತ್ಯ ಕ್ರಮ ಕೈಗೊಂಡು ನಿಗದಿತ ವೇಳೆಯಲ್ಲಿ ಮಕ್ಕಳಿಗೆ ಪಾಠ ಪ್ರವಚನ ಆಗುವಂತೆ ಹಾಗೂ ಮುಖ್ಯ ಶಿಕ್ಷಕರು ಸಮಯ ಪಾಲನೆಗೆ ಸ್ಪಂದಿಸಬೇಕು. ಇಲ್ಲವೇ ಬದಲಿ ಶಿಕ್ಷಕರನ್ನಾದರೂ ನಮಗೆ ಹಾಕಿ ಕೊಡಲಿ, ಮಕ್ಕಳಿಗೆ ನ್ಯಾಯ ಕೊಡಿಸುವ ಸಲುವಾಗಿ ನಾವು ಹಿರಿಯ ಅಧಿಕಾರಿಗಳ ಬಳಿ ಹೋಗಬೇಕಾದೀತು ಎಂದು ಎಚ್ಚರಿಸಿದ್ದಾರೆ.ಫೋಟೋ: ತರಗತಿ ಒಳಗೆ ತಿಂಡಿ ಸೇವಿಸುತ್ತಿರುವ ಮುಖ್ಯ ಶಿಕ್ಷಕಿ.