ಸಾರಾಂಶ
ನಮ್ಮ ಮನೆ ಮುಂದೆ ಫ್ಲೆಕ್ಸ್ ಹಾಕಬೇಡಿ ಅಂದಿದ್ದಕ್ಕೆ ಕುಟುಂಬದ ಮೇಲೆ ಹಲ್ಲೆ: ರಂಗನಾಥ್
ಕನ್ನಡಪ್ರಭ ವಾರ್ತೆ ದಾವಣಗೆರೆ
ಇಲ್ಲಿಯ ಕಾರ್ಲ್ ಮಾರ್ಕ್ಸ್ ನಗರದಲ್ಲಿ ಬುಧವಾರ ತಡರಾತ್ರಿ ಕೋಮು ಘರ್ಷಣೆಗೆ ಕಾರಣವಾಗಿದ್ದ, ಹಿಂದೂಗಳ ಮನೆ ಮುಂದೆ ಹಾಕಿದ್ದ ಐ ಲವ್ ಮಹಮ್ಮದ್ ಎಂಬ ಬರಹವಿದ್ದ ವಿವಾದಿತ ಫ್ಲೆಕ್ಸನ್ನು ಪೊಲೀಸರು ತೆರವು ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಾಗಿವೆ.ಮೊಹಮ್ಮದ್ ಸಾದಿಕ್ ಎಂಬವರು ನೀಡಿದ ದೂರಿನ ಮೇರೆಗೆ ಒಂದು ಎಫ್ಐಆರ್ ದಾಖಲಾಗಿದೆ. ಅದರಲ್ಲಿ ಮೂರು ದಿನಗಳ ಹಿಂದೆ ಐ ಲವ್ ಮಹಮ್ಮದ್ ಬರೆಹವಿದ್ದ ಫ್ಲೆಕ್ಸ್ ಅಳವಡಿಸಿದ್ದೆವು. ಈ ವೇಳೆ ಸಂಜೆ 7.30ಕ್ಕೆ ಫ್ಲೆಕ್ಸ್ ತೆರವಿಗೆ ಗಲಾಟೆ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.
ಮತ್ತೊಂದು ಕಡೆ ಅನ್ಯಕೋಮಿನ ಗುಂಪಿನವರಿಂದ ಹಲ್ಲೆಗೊಳಗಾದ ರೇಖಾ ಸಹೋದರ ರಂಗನಾಥ ನೀಡಿದ ದೂರಿನ ಮೇರೆಗೆ ಮತ್ತೊಂದು ಎಫ್ಐಆರ್ ದಾಖಲು ಮಾಡಲಾಗಿದೆ. ತಮ್ಮ ಮನೆ ಎದುರು ಫ್ಲೆಕ್ಸ್ ಅಳವಡಿಸಲು ಬಂದಾಗ ಗಲಾಟೆ ಮಾಡಿ, ತಮ್ಮ ಮೇಲೆ, ಕುಟುಂಬ ಸದಸ್ಯರ ಮೇಲೆ ಹಲ್ಲೆ ಮಾಡಲಾಗಿದೆ. ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.ಒಟ್ಟು 28 ಜನರ ಹೆಸರು ಸೇರಿದಂತೆ ಸುಮಾರು 40-50 ಜನರಿಂದ ಕೃತ್ಯ ಎಂಬುದಾಗಿ ದೂರು ದಾಖಲಿಸಲಾಗಿದೆ. ತಮ್ಮ ಸೋದರ ಮಾವನ ಮೇಲೂ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಲಾಗಿದೆ. ಆ ಎಲ್ಲರ ವಿರುದ್ಧವೂ ಪ್ರಕರಣ ದಾಖಲಿಸಿ, ಕಠಿಣ ಕಾನೂನು ಶಿಕ್ಷೆ ವಿಧಿಸುವಂತೆ ರಂಗನಾಥ ಆಗ್ರಹಿಸಿದ್ದಾರೆ.
ಇದು ಹೊರಗಿನವರ ಕೃತ್ಯ: ರೇಷ್ಮಾ
ದಾವಣಗೆರೆ: ಕಾರ್ಲ್ ಮಾರ್ಕ್ಸ್ ನಗರದಲ್ಲಿ ಹಿಂದೂ- ಮುಸ್ಲಿಮರು ನಾವೆಲ್ಲಾ ಇಲ್ಲಿ ಅನ್ಯೂನವಾಗಿದ್ದೇವೆ. ಹೊರಗಿನ ವ್ಯಕ್ತಿಗಳು ಬಂದು ಇಲ್ಲಿ ಗಲಾಟೆ ಮಾಡುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ರೇಷ್ಮಾ ಆರೋಪಿಸಿದ್ದಾರೆ. ವಿವಾದಿತ ಫ್ಲೆಕ್ಸ್ ತೆರವು ನಂತರ ಸ್ಥಳಕ್ಕೆ ಭೇಟಿ ನೀಡಿದ್ದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐ ಲವ್ ಮಹಮ್ಮದ್ ಬರಹದ ಫ್ಲೆಕ್ಸ್ ಹಾಕಿದ್ದ ವೇಳೆ ದುಗ್ಗ ಎಂಬಾತ ಬಂದು ಹೆಣ್ಣುಮಕ್ಕಳ ಬಗ್ಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ. ಮತ್ತೊಂದು ಕಡೆ ನಮ್ಮ ಮನೆ ಎದುರು ಬಂದು ಕಟ್ಟಿಗೆಗಳನ್ನು ಹಿಡಿದು, ಬೆದರಿಕೆಯೊಡ್ಡಿದ್ದಾರೆ ಎಂದು ದೂರಿದರು.