ಗಿರೀಶ್ ಮಟ್ಟಣ್ಣನವರ್, ಇತರರ ವಿರುದ್ಧ ಮಂಡ್ಯ ಎಸ್‌ಪಿಗೆ ದೂರು

| Published : Aug 21 2025, 01:00 AM IST

ಸಾರಾಂಶ

ಧರ್ಮಸ್ಥಳ ಗ್ರಾಮದಲ್ಲಿ ಅನಾಥ ಮೃತದೇಹಗಳನ್ನು ಹೂಳಿದ ವಿಚಾರಕ್ಕೆ ಸಂಬಂಸಿದಂತೆ ಅನಾಮಿಕನ ದೂರಿನ ಮೇರೆಗೆ ನಡೆಯುತ್ತಿರುವ ವಿಶೇಷ ತನಿಖಾ ತಂಡದ ತನಿಖೆಗೆ ಬಿಜೆಪಿ ಸಂಪೂರ್ಣ ಬೆಂಬಲ ಇದೆ. ಆದರೆ, ಧರ್ಮಸ್ಥಳ ಕ್ಷೇತ್ರದ ಬಗ್ಗೆ ಎಡಪಂಥೀಯರ ಸಹಿತ ಸಾಮಾಹಿತ ಜಾಲತಾಣಗಳಲ್ಲಿ ತೇಜೋವಧೆ ನಡೆಯುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಗಿರೀಶ್ ಮಟ್ಟಣ್ಣನವರ್, ಮಹೇಶ್‌ಶೆಟ್ಟಿ ತಿಮರೋಡಿ, ಸಮೀರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ಸಲ್ಲಿಸಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಗೆ ತೆರಳಿದ ಕಾರ್ಯಕರ್ತರು, ಅಪರ ಜಿಲ್ಲಾ ಪೊಲೀಸ್ ಅಧೀಕ್ಷಕ ಗಂಗಾಧರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು ಹೂಳಿದ್ದು, ತನಿಖೆ ನಡೆಸಿ ಎನ್ನುವ ಅನಾಮಿಕ ವ್ಯಕ್ತಿ ಯಾರು ಎಂಬ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ನಿರ್ದಿಷ್ಟ ಸ್ಥಳಗಳಲ್ಲಿ ಅನಾಥ ಮೃತದೇಹ ಹೂತಿದ್ದಾಗಿ ಒಂದು ತಿಂಗಳ ಹಿಂದೆ ಹೇಳಿಕೆ ನೀಡಿದ್ದು, ಅದರಂತೆ ಎಸ್‌ಐಟಿ ಮಾರ್ಗದರ್ಶನದಲ್ಲಿ ಹತ್ತಾರು ಕಡೆ ಉತ್ಕನನ ನಡೆಸಿದೆ. ಆದರೆ, ಆತನ ಆರೋಪದಲ್ಲಿ ಯಾವುದೇ ಹುರುಳು ಇದ್ದಂತೆ ಕಾಣುತ್ತಿಲ್ಲ ಎಂದು ವರದಿಯಾಗಿದೆ. ಆತ ಯಾವ ಆಧಾರದಲ್ಲಿ ಆರೋಪ ಮಾಡುತ್ತಿದ್ದಾನೆ ಎಂಬುದು ಸ್ಪಷ್ಟವಾಗಬೇಕು. ಆತನ ಹಿಂದಿರುವ ಕಾಣದ ಕೈಗಳ ಬಗ್ಗೆ ಕೂಲಂಕಷ ತನಿಖೆಯಾಗಬೇಕು. ಜೊತೆಗೆ ಗಿರೀಶ್ ಮಟ್ಟಣ್ಣನವರ್, ತಿಮರೋಡಿಯನ್ನು ಕೂಲಂಕಷವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಧರ್ಮಸ್ಥಳ ಗ್ರಾಮದಲ್ಲಿ ಅನಾಥ ಮೃತದೇಹಗಳನ್ನು ಹೂಳಿದ ವಿಚಾರಕ್ಕೆ ಸಂಬಂಸಿದಂತೆ ಅನಾಮಿಕನ ದೂರಿನ ಮೇರೆಗೆ ನಡೆಯುತ್ತಿರುವ ವಿಶೇಷ ತನಿಖಾ ತಂಡದ ತನಿಖೆಗೆ ಬಿಜೆಪಿ ಸಂಪೂರ್ಣ ಬೆಂಬಲ ಇದೆ. ಆದರೆ, ಧರ್ಮಸ್ಥಳ ಕ್ಷೇತ್ರದ ಬಗ್ಗೆ ಎಡಪಂಥೀಯರ ಸಹಿತ ಸಾಮಾಹಿತ ಜಾಲತಾಣಗಳಲ್ಲಿ ತೇಜೋವಧೆ ನಡೆಯುತ್ತಿದೆ. ಈ ರೀತಿ ಸುಳ್ಳು ವದಂತಿ ಹಬ್ಬಿಸುತ್ತಿರುವ ಜಾಲತಾಣಗಳಿಗೆ ಕೂಡಲೇ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಎಸ್‌ಐಟಿ ತನಿಖೆ ಸಂದರ್ಭ ನಡೆದಿರುವ ಅಹಿತಕರ ಘಟನೆ ಹಾಗೂ ದೇವಸ್ತಾನದ ಮೇಲೆ ತೇಜೋವಧೆ ಮಾಡುವುದರ ಹಿಂದೆ ಎಡ ಪಂಥೀಯರ ಷಡ್ಯಂತ್ರ ಕಂಡುಬರುತ್ತಿದೆ. ಎಡಪಂಥೀಯರ ಒತ್ತಾಯದ ಮೇರೆಗೆ ಧರ್ಮಸ್ಥಳ ಗ್ರಾಮದ ಕೇಸನ್ನು ಎಸ್‌ಐಟಿಗೆ ಹಸ್ತಾಂತರಿಸಿದಾಗಿ ಸಚಿವ ದಿನೇಶ್ ಗುಂಡೂರಾವ್ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಎಸ್‌ಐಟಿ ತನಿಖೆಗಾಗಿ ತಮಿಳುನಾಡಿನ ಕಾಂಗ್ರೆಸ್ ಸಂಸದರೊಬ್ಬರು ತಮ್ಮ ಪಕ್ಷದ ವರಿಷ್ಠರ ಮೂಲಕ ಒತ್ತಡ ಹಾಕಿರುವ ಸಂಗತಿಗಳು ಕೇಳಿಬರುತ್ತಿವೆ. ಇದೆಲ್ಲವೂ ಹಿಂದೂಗಳ ಶ್ರದ್ಧಾಕೇಂದ್ರಗಳನ್ನು ಧಮನಿಸುವ ಷಡ್ಯಂತ್ರದ ಭಾಗವೇ ಆಗಿದೆ ಎಂದು ಆರೋಪಿಸಿದ್ದಾರೆ.

ಅಲ್ಲಿ ಮದುವೆಯಾದ ಸಹಸ್ರಾರು ಹೆಣ್ಣುಮಕ್ಕಳಿಗೆ ಅಪಮಾನ ಮಾಡಿದ್ದಾರೆ. ಸಾವಿರಕ್ಕೂ ಹೆಚ್ಚು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿದ್ದು, ಡಿಸ್‌ಮ್ಯಾಂಟಲಿಂಗ್ ಗ್ಲೋಬಲ್ ಹಿಂದುತ್ವ ಎಂಬ ಶೀರ್ಷಿಕೆಯಡಿ ನಡೆಯುತ್ತಿರುವ ಹಿಂದು ಧರ್ಮದ ವಿರುದ್ಧ ಪಿತೂರಿಯಾಗಿದ್ದು, ಸಂಘಟಿತ ಯೋಜಿತ ಷಡ್ಯಂತ್ರವಾಗಿದೆ. ಈ ಹಿನ್ನೆಲೆಯಲ್ಲಿ ಸಮೀರ್, ಗಿರೀಶ್ ಮಟ್ಟಣ್ಣನವರ್, ಮಹೇಶ್‌ಶೆಟ್ಟಿ ತಿಮ್ಮರೋಡಿ, ಅವರನ್ನು ಕೂಲಂಕಷವಾಗಿ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮುಖಂಡರಾದ ಸಿ.ಟಿ.ಮಂಜುನಾಥ್, ಚಂದ್ರು, ಹೊಸಹಳ್ಳಿ ಶಿವು, ಮಾದರಾಜೇ ಅರಸ್, ನಾಗಣ್ಣ ಮಲ್ಲಪ್ಪ, ಗೊರವಾಲೆ ಶಿವಣ್ಣ, ಆನಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.