ಹರಿಹರ ಪಂಚಮಸಾಲಿ ಪೀಠದ ಉಚ್ಚಾಟಿತ ವಚನಾನಂದ ಸ್ವಾಮೀಜಿಗೆ ಮತ್ತೊಂದು ಹೊಸ ಸಂಕಷ್ಟ ಎದುರಾಗಿದ್ದು, ಪೀಠದಿಂದ ಪದಚ್ಯುತಿಗೊಂಡ ಬೆನ್ನಲ್ಲೇ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಮೂವರು ಮಕ್ಕಳಿಂದ ದೂರು ದಾಖಲಾಗಿದೆ.

- ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರ ತಂಡ ಹರಿಹರ ಮಠಕ್ಕೆ ಭೇಟಿ

- ದೂರುದಾರ ಮಕ್ಕಳ ಕೌನ್ಸಿಲಿಂಗ್‌, ಕೊಠಡಿ ಇತರೆಡೆಯಲ್ಲಿ ಪರಿಶೀಲನೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಹರಿಹರ ಪಂಚಮಸಾಲಿ ಪೀಠದ ಉಚ್ಚಾಟಿತ ವಚನಾನಂದ ಸ್ವಾಮೀಜಿಗೆ ಮತ್ತೊಂದು ಹೊಸ ಸಂಕಷ್ಟ ಎದುರಾಗಿದ್ದು, ಪೀಠದಿಂದ ಪದಚ್ಯುತಿಗೊಂಡ ಬೆನ್ನಲ್ಲೇ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಮೂವರು ಮಕ್ಕಳಿಂದ ದೂರು ದಾಖಲಾಗಿದೆ.

ನಗರದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಎದುರು ಮೂವರು ಮಕ್ಕಳು ಹೇಳಿಕೆ ನೀಡಿದ್ದು, ಮೂರೂ ಮಕ್ಕಳ ಪ್ರತ್ಯೇಕ ಕೌನ್ಸಿಲಿಂಗನ್ನು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿ ನಡೆಸಿದ್ದಾರೆ. ಈಗಾಗಲೇ ಒಂದು ಸೆಷನ್ ಕೌನ್ಸಿಲಿಂಗ್ ಆಗಿದ್ದು, ಇನ್ನೂ ಮೂರು ಬಾರಿ ಮಕ್ಕಳ ಕೌನ್ಸಿಲಿಂಗ್ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಮಕ್ಕಳು ಕೌನ್ಸಿಲಿಂಗ್ ವೇಳೆ ದೃಢವಾಗಿ ಹೇಳಿಕೆ ನೀಡಿದರೆ ವಚನಾನಂದ ಸ್ವಾಮೀಜಿ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ. ಎರಡು ದಿನಗಳ ಹಿಂದೆ ಮಕ್ಕಳ ಮೇಲೆ ವಚನಾನಂದ ಸ್ವಾಮೀಜಿ ಹಲ್ಲೆ ಮಾಡುವ, ದೌರ್ಜನ್ಯ ನಡೆಸುತ್ತಿದ್ದರೆಂಬ ಬಗ್ಗೆ ಪೋಷಕರು ನೀಡಿದ ಹೇಳಿಕೆಯ ವೀಡಿಯೋ ಬಿಡುಗಡೆಯಾಗಿತ್ತು.

ಉಚ್ಚಾಟನೆಗೊಂಡರೂ ಮಠವನ್ನು ವಚನಾನಂದ ಸ್ವಾಮೀಜಿ ತೆರವುಗೊಳಿಸುತ್ತಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಪಂಚಮಸಾಲಿ ಯುವ ಘಟಕ ಪದಾಧಿಕಾರಿಗಳು ಮಕ್ಕಳ ಮೇಲೆ ನಡೆದ ಹಲ್ಲೆ ಬಗ್ಗೆ ಪಾಲಕರು ಹೇಳಿಕೆ ನೀಡಿದ್ದ ವೀಡಿಯೋ ಬಿಡುಗಡೆ ಮಾಡಿದ್ದರು. ಅದರ ಬೆನ್ನಲ್ಲೇ ಮೂವರೂ ಮಕ್ಕಳು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರಾಗಿ, ತಮ್ಮ ಹೇಳಿಕೆಯನ್ನು ನೀಡಿದ್ದಾರೆ.

ಮಕ್ಕಳ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಕವಿತಾ ನೇತೃತ್ವದಲ್ಲಿ ಸದಸ್ಯರು ಹರಿಹರ ತಾ. ಹನಗವಾಡಿ ಸಮೀಪದ ಪಂಚಮಸಾಲಿ ಪೀಠಕ್ಕೆ ಭೇಟಿ ನೀಡಿ, ಮಠದಲ್ಲಿ ದೂರುದಾರರಾದ ಮೂವರೂ ಮಕ್ಕಳು ವಾಸವಿದ್ದ ಸ್ಥಳದ ಬಗ್ಗೆ ಮಾಹಿತಿ ಪಡೆದರು. ಡಿಪಿಸಿಒ ಟಿ.ಎನ್.ಕವಿತಾ ಸಹ ಮಠಕ್ಕೆ ಭೇಟಿ ನೀಡಿ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರೊಂದಿಗೆ ಪರಿಶೀಲನೆ ನಡೆಸಿದರು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಹಾಗೂ ಸದಸ್ಯರು ಮಕ್ಕಳ ಕೊಠಡಿ, ಮಕ್ಕಳ ಓದುತ್ತಿದ್ದ, ವಸತಿ ಮಾಡುತ್ತಿದ್ದ ಕೊಠಡಿಗಳ ಪರಿಶೀಲನೆಯ ನಂತರ ಶ್ರೀ ವಚನಾನಂದ ಸ್ವಾಮೀಜಿ ಅವರನ್ನು ಸುಮಾರು ಹೊತ್ತು ವಿಚಾರಣೆ ಮಾಡಿದರು. ಮಕ್ಕಳು ನೀಡಿರುವ ದೂರು, ಆರೋಪಗಳು, ಮಕ್ಕಳ ಪಾಲಕರು ಮಾಡಿರುವ ಆರೋಪಗಳ ಬಗ್ಗೆಯೂ ಸಮಿತಿ ಅಧ್ಯಕ್ಷರು, ಸದಸ್ಯರು ಸ್ವಾಮೀಜಿಗೆ ವಿಚಾರಣೆ ಮಾಡಿದರು.

ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿ ಅಧ್ಯಕ್ಷೆ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿದೆ ಮೂವರು ಮಕ್ಕಳು ಲಿಖಿತ ದೂರು ನೀಡಿದ್ದರು. ದೂರುದಾರ ಮಕ್ಕಳ ಕೌನ್ಸಿಲಿಂಗ್ ನಡೆಯುತ್ತಿದ್ದು, ಈಗ ವಚನಾನಂದ ಸ್ವಾಮೀಜಿ ಹೇಳಿಕೆ ದಾಖಲಿಸಿದ್ದೇವೆ. ಮಕ್ಕಳು ಮಲಗುವ ಜಾಗ, ಮಕ್ಕಳ ಊಟದ ವ್ಯವಸ್ಥೆ ಪರಿಶೀಲನೆ ಸೇರಿದಂತೆ ಇತರೆ ಸ್ಥಳಗಳ ಪರಿಶೀಲನೆ ಮಾಡಿದ್ದೇವೆ ಎಂದರು.

ಕೌನ್ಸಿಲಿಂಗ್ ವರದಿ ಬಂದ ನಂತರ ಪೊಲೀಸರಿಗೆ ಅದನ್ನು ನೀಡುತ್ತೇವೆ. ನಂತರ ಪೊಲೀಸ್ ಇಲಾಖೆಯಿಂದ ವಿಚಾರಣೆ ಕೈಗೊಳ್ಳುತ್ತಾರೆ. ಹರಿಹರದ ಪಂಚಮಸಾಲಿ ಮಠದ ಬಾಲಕರ ಹಾಸ್ಟೆಲ್ ನಲ್ಲಿ ರಜಿಸ್ಟರ್ ಇಲ್ಲದಿರುವ ವಿಚಾರ ನಾವು ಭೇಟಿ ನೀಡಿದಾಗ ಗೊತ್ತಾಯಿತು. ಈ ಬಗ್ಗೆ ವಚನಾನಂದ ಸ್ವಾಮೀಜಿಗೆ ಕೇಳಿದರೆ, ಅದನ್ನೆಲ್ಲಾ ಧರ್ಮದರ್ಶಿಗಳು ನೋಡಿಕೊಳ್ಳುತ್ತಿದ್ದರು ಎಂಬ ಮಾಹಿತಿ ನೀಡಿದ್ದಾರೆ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ವಿವರಿಸಿದರು.

- - -

(ಬಾಕ್ಸ್‌) * ಸೂಕ್ತ ಸಮಯದಲ್ಲಿ ಉತ್ತರಿಸುವೆ: ವಚನಾನಂದ ಶ್ರೀ

- ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಲ್ಲಿ ದಾಖಲಾದ ದೂರಿನ ಬಗ್ಗೆ ಪ್ರತಿಕ್ರಿಯೆ ಕನ್ನಡಪ್ರಭ ವಾರ್ತೆ ದಾವಣಗೆರೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಏನು ಹೇಳಬೇಕೋ ಅದನ್ನು ಹೇಳಿದ್ದೇವೆ. ಇದು ಕಾನೂನು ವ್ಯಾಪ್ತಿಗೆ ಬರಲಿದ್ದು, ಸೂಕ್ಷ್ಮ ವಿಷಯವಾಗಿದೆ. ಈ ಬಗ್ಗೆ ನಾವು ಹೇಳಿಕೆಗಳನ್ನು ಕೊಡುವುದಕ್ಕೆ ಆಗುವುದಿಲ್ಲ ಎಂದು ಹರಿಹರ ಪಂಚಮಸಾಲಿ ಪೀಠದ ಉಚ್ಚಾಟಿತ ಶ್ರೀ ವಚನಾನಂದ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.

ಹರಿಹರದ ಪಂಚಮಸಾಲಿ ಪೀಠದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಠದಲ್ಲಿ ಹಿಂದೆ ಇದ್ದ ಮೂವರು ಮಕ್ಕಳು ತಮ್ಮ ವಿರುದ್ಧ ದೂರು ನೀಡಿರುವ ವಿಚಾರದ ಕುರಿತ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು. ಸೂಕ್ತ ಸಮಯ, ಸಂದರ್ಭದಲ್ಲಿ ಉತ್ತರ ನೀಡುತ್ತೇವೆ. ನಾವು ದೇವರಲ್ಲ, ದೇವರ ದಾರಿಯಲ್ಲಿ ನಡೆಯುವ ಸಾಧಕರು ಎಂದರು.

ಮಠ ಖಾಲಿ ಮಾಡಲು ಟ್ರಸ್ಟಿ ಎಚ್.ಎಸ್.ನಾಗರಾಜ ಗಡುವು ನೀಡಿದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಮಯ, ಸಂದರ್ಭ ಎಲ್ಲವನ್ನೂ ಹೇಳುತ್ತೆ, ಕಾಲವೇ ಹೇಳುತ್ತದೆ. ಬಾರದು ಬಪ್ಪದು, ಬಪ್ಪದು ತಪ್ಪದು. ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತದೆ ಎಂದು ಅವರು ತಿಳಿಸಿದರು.

ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿಯವರನ್ನು ಹರಿಹರ ಪೀಠಕ್ಕೆ ತರುವ ವಿಚಾರ ಕುರಿತ ಪ್ರಶ್ನೆಗೆ, ನಾವೆಲ್ಲಾ ಒಂದೇ ಸ್ವಾಮೀಜಿಗಳು. ಜಯ ಮೃತ್ಯುಂಜಯ ಸ್ವಾಮೀಜಿ, ನಮ್ಮಲ್ಲಿ ಯಾವುದೇ ಬೇಧಭಾವವಿಲ್ಲ. ನಮ್ಮದು 8 ವರುಷ, ಜಯ ಮೃತ್ಯುಂಜಯ ಶ್ರೀಗಳದ್ದು 18 ವರ್ಷದ ಸೇವೆ. ಅವರಿಗೆ ಅವರದ್ದೇ ಆದ ಘನತೆ, ವ್ಯಕ್ತಿತ್ವ ಇದೆ ಎಂದರು. (ಫೋಟೋ: ವಚನಾನಂದ ಶ್ರೀ)