ಸಾರಾಂಶ
ಕುಕನೂರು:
ತನ್ನ ವಾರ್ಡ್‌ನಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಕೇಂದ್ರ ಪುರಸ್ಕೃತ ಅಮೃತ್ ೨.೦ ಯೋಜನೆಯಡಿ ಕಾಮಗಾರಿ ನಡೆಯುತ್ತಿದೆ. ಈ ಕುರಿತು ಮಾಹಿತಿ ಕೇಳಿದರೆ ಸಂಬಂಧಿಸಿದ ಅಧಿಕಾರಿಗಳು ನನ್ನ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಂತಹ ತಪ್ಪು ನಾನೇನು ಮಾಡಿದ್ದೇನೆ ಎಂದು 19ನೇ ವಾರ್ಡ್ ಸದಸ್ಯ ಜಗನ್ನಾಥ ಭೋಮಿ ಪ್ರತಿಭಟಿಸಿದರು.ಗುರುವಾರ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಪ್ರತಿಭಟನೆ ಆರಂಭಿಸಿದ ಅವರು, ನನ್ನ ವಿರುದ್ಧ ದೂರು ನೀಡಲು ನಾನೇನು ತಪ್ಪು ಮಾಡಿದ್ದೇನೆ. ಕಾಮಗಾರಿಯ ಮಾಹಿತಿ ಕೇಳಬಾರದೆ. ಇದಕ್ಕೆ ಅಧ್ಯಕ್ಷರು ಹಾಗೂ ಅಧಿಕಾರಿಗಳು ಉತ್ತರ ನೀಡಬೇಕೆಂದು ಪಟ್ಟು ಹಿಡಿದರು. ಆಗ, ಅವರನ್ನು ಸಮಾಧಾನಪಡಿಸಿ ಸಭೆ ಮುಂದುವರಿಸಲಾಯಿತು.
ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟ, ೨೦೨೫-೨೬ನೇ ಸಾಲಿನ ೧೫ನೇ ಹಣಕಾಸು ಆಯೋಗದ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಅನುದಾನಕ್ಕೆ ಕ್ರಿಯಾಯೋಜನೆ ತಯಾರಿಸುವ ಬಗ್ಗೆ ಮತ್ತು ೨೦೨೫-೨೬ನೇ ಸಾಲಿಗೆ ಆಸ್ತಿ ತೆರಿಗೆ ದರ ಪರಿಷ್ಕರಿಸುವ ಕುರಿತು ಚರ್ಚಿಸಿದರು.ಎಸ್ಸಿ ಸಮುದಾಯಕ್ಕೆ ₹ ೧೫ ಲಕ್ಷ , ಎಸ್‌ಟಿ ಸಮುದಾಯಕ್ಕೆ ₹೬ ಲಕ್ಷ ಹಾಗೂ ಸಾಮಾನ್ಯ ವರ್ಗಕ್ಕೆ ₹ ೧೦ ಲಕ್ಷ ಅನುದಾನ ವೈಯಕ್ತಿಕ ಹಾಗೂ ಇತರೆ ಕೆಲಸಕ್ಕೆ ಬಂದಿದ್ದು ಎಲ್ಲ ಸದಸ್ಯರು ಮಾಹಿತಿ ನೀಡುವಂತೆ ಮುಖ್ಯಾಧಿಕಾರಿ ಹೇಳಿದರು.
ಸಭೆಯಲ್ಲಿ ಕುಡಿಯುವ ನೀರು, ಸಿಸಿ ರಸ್ತೆ ನಿರ್ಮಾಣ, ಸ್ಮಶಾನ ಅಭಿವೃದ್ಧಿ, ಜವಳದ ರಸ್ತೆ ನಿರ್ಮಾಣ ಸೇರಿದಂತೆ ಅನೇಕ ವಿಷಯಗಳ ಕುರಿತು ಚರ್ಚಿಸಲಾಯಿತು.ಉಪಾಧ್ಯಕ್ಷ ಪ್ರಶಾಂತ ಆರುಬೆರಳ್ಳಿನ್ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ನೂರುದ್ದಿನ್‌ಸಾಬ್ ಗುಡಿಹಿಂದಿಲ್, ಸದಸ್ಯರಾದ ಸಿದ್ದಲಿಂಗಯ್ಯ ಉಳ್ಳಾಗಡ್ಡಿ, ಗಗನ್ ನೋಟಗಾರ, ಜಗನ್ನಾಥ ಭೋವಿ, ಸಿರಾಜ ಕರಮುಡಿ, ರಾಮಣ್ಣ ಬಂಕದಮನಿ, ಬಾಲರಾಜ ಗಾಳಿ, ರಾಧಾ ದೊಡ್ಡಮನಿ, ಕವಿತಾ ಹೂಗಾರ, ಮಂಜುನಾಥ ಕೊಳೂರು, ಮಲ್ಲಿಕಾರ್ಜುನ ಚೌದ್ರಿ, ಫೀರದೋಸ್ ಬೇಗಂ, ನಾಮನಿರ್ದೇಶತ ಸದಸ್ಯರಾದ ಶರಣಯ್ಯ ಶಶಿಮಠ, ರಫಿಸಾಬ್ ಹಿರೇಹಾಳ, ಈರಣ್ಣ ಯಲಬುರ್ಗಿ ಇದ್ದರು.