ಮಾಲೂರು ತಾಲೂಕು ಟೇಕಲ್ ಹೋಬಳಿ ಅಗಲಕೋಟೆ ಗ್ರಾಮದ ಭೂ ವಿವಾದದ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡ ಹೂಡಿ ವಿಜಯಕುಮಾರ್ ನೇತೃತ್ವದ ನಿಯೋಗ ಉಪ ವಿಭಾಗಾಧಿಕಾರಿ ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳನ್ನು ಭೇಟಿ ಮಾಡಿ ಮಾಜಿ ಶಾಸಕ ಕೆ.ಎಸ್. ಮಂಜುನಾಥಗೌಡ ವಿರುದ್ಧ ದೂರು
ಕನ್ನಡಪ್ರಭ ವಾರ್ತೆ ಕೋಲಾರ
ಮಾಲೂರು ತಾಲೂಕು ಟೇಕಲ್ ಹೋಬಳಿ ಅಗಲಕೋಟೆ ಗ್ರಾಮದ ಭೂ ವಿವಾದದ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡ ಹೂಡಿ ವಿಜಯಕುಮಾರ್ ನೇತೃತ್ವದ ನಿಯೋಗ ಉಪ ವಿಭಾಗಾಧಿಕಾರಿ ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳನ್ನು ಭೇಟಿ ಮಾಡಿ ಮಾಜಿ ಶಾಸಕ ಕೆ.ಎಸ್. ಮಂಜುನಾಥಗೌಡ ವಿರುದ್ಧ ದೂರು ದಾಖಲಿಸಿದೆ.ಖಾಸಗಿ ಆಸ್ತಿಯನ್ನು ಮಂಜುನಾಥಗೌಡ ೫೦ ಎಕರೆ ಸರ್ಕಾರಿ ಶಾಲೆಯ ಭೂಮಿ ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಬುಧವಾರ ಅಗಲಕೋಟೆಯ ವಿವಾದಿತ ಸ್ಥಳಕ್ಕೆ ತೆರಳಿ ಗ್ರಾಮಸ್ಥರನ್ನು ಎತ್ತಿಕಟ್ಟುವ ಜೊತೆಗೆ ಸುಮಾರು ಒಂದು ಕಿಲೋಮೀಟರ್ ನಷ್ಟು ಉದ್ದದ ಪೆನ್ಸಿಂಗ್‌ನ್ನು ನಾಶಪಡಿಸಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಆಗಲಕೋಟೆಯ ಸುಮಾರು ೩೦೦ ಎಕರೆ ಜಮೀನನ್ನು ತಮ್ಮ ಸ್ನೇಹಿತ ಬಿಲ್ಡರ್ ಗಂಗಾಧರ್ ಎಂಬುವರು ಶ್ರೀನಿವಾಸಲು ಅವರಿಂದ ಖರೀದಿಸಿದ್ದಾರೆ. ಆದರೆ ಇದರಲ್ಲಿ ೫೦ ಎಕರೆ ಸರ್ಕಾರಿ ಶಾಲೆಯ ಭೂಮಿ ಒತ್ತುವರಿ ಆಗಿದೆ ಎಂದು ಮಂಜುನಾಥಗೌಡ ಕಳೆದ ಆರು ತಿಂಗಳಿನಿಂದ ಪದೇಪದೇ ಆರೋಪ ಮಾಡುವ ಮೂಲಕ ತೇಜೋವಧೆ ಮಾಡುತ್ತಿದ್ದಾರೆ ಎಂದು ವಿಜಯಕುಮಾರ್ ದೂರಿದರು.ಸದರಿ ಭೂಮಿಯಲ್ಲಿ ಯಾವುದೇ ಕಾಲುವೆ, ಗುಂಡು ತೋಪು, ರಸ್ತೆ, ಸ್ಮಶಾನ ಅಥವಾ ಸರ್ಕಾರಿ ಭೂಮಿ ಒತ್ತುವರಿ ಆಗಿದ್ದರೆ ನಾಳೆ ಬೆಳಗ್ಗೆಯೇ ಅದನ್ನು ವಶಪಡಿಸಿಕೊಳ್ಳಲಿ ಎಂದು ವಿಜಯಕುಮಾರ್ ಉಪ ವಿಭಾಗಾಧಿಕಾರಿಗೆ ಮನವಿ ಮಾಡಿದರು.
ಈ ವೇಳೆ ಜಮೀನಿನ ಮಾಲೀಕರಾದ ಶ್ರೀನಿವಾಸಲು, ಕೃಷ್ಣಪ್ಪ, ಗಂಗಾಧರ್, ಜೆಡಿಎಸ್ ಮುಖಂಡರಾದ ಆರ್.ಪ್ರಭಾಕರ್, ಮೈಲಾಂಡಹಳ್ಳಿ ನಾರಾಯಣಸ್ವಾಮಿ, ನೂಟವೇ ವೆಂಕಟೇಶಗೌಡ, ಸಿದ್ದಾರ್ಥ ಆನಂದ ಮತ್ತಿತರರು ಇದ್ದರು. ನಾನು ಜೆಡಿಎಸ್ ಸೇರಿದ ಕಾರಣಅವರ ಮೀಟರ್ ಆಫ್ ಆಗಿದೆಉಪ ವಿಭಾಗಾಧಿಕಾರಿಗೆ ದೂರು ನೀಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಹೂಡಿ ವಿಜಯಕುಮಾರ್ ನಾನು ಜೆಡಿಎಸ್ ಸೇರಿದ ನಂತರ ಮಾಜಿ ಶಾಸಕ ಕೆ.ಎಸ್. ಮಂಜುನಾಥಗೌಡ ಅವರ ಮೀಟರ್ ಆಫ್ ಆಗಿದೆ. ಹಾಗಾಗಿ ನನ್ನ ತೇಜೋವಧೆಗೆ ಅಗಲಕೋಟೆಯ ಭೂವಿವಾದ ವಿನಾಕಾರಣ ಹುಟ್ಟು ಹಾಕಿದ್ದಾರೆ ಎಂದು ಆರೋಪಿಸಿದರು.
ಅಗಲಕೋಟೆಯ ಜಮೀನು ಖರೀದಿಸಿದ್ದ ನನ್ನ ಸ್ನೇಹಿತ ಬಿಲ್ಡರ್ ಗಂಗಾಧರ್ ಅನಾರೋಗ್ಯಕ್ಕೆ ತುತ್ತಾಗಿದ್ದ ವೇಳೆ ಅವರ ಪರವಾಗಿ ಸದರಿ ಭೂಮಿಯಲ್ಲಿ ಫೆನ್ಸಿಂಗ್ ಅಳವಡಿಸಲು ನಾನು ಸ್ಥಳಕ್ಕೆ ಹೋಗಿದ್ದೆ. ಅದನ್ನು ಮುಂದಿಟ್ಟುಕೊಂಡು ನನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ದೂರಿದರು.ಕೋಟ್ಮಾಸ್ತಿ ಠಾಣೆ ಇನ್ಸ್ಪೆಕ್ಟರ್ ಓಂಪ್ರಕಾಶ್‌ಗೌಡ ಪಕ್ಷಪಾತ ತೋರಿಸುತ್ತಿದ್ದಾರೆ. ಹಿಂದೆ ನಮ್ಮ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿದ ಈರೇಗೌಡ ವಿರುದ್ಧ ದೂರು ನೀಡಿದರೆ ಟ್ರಾಕ್ಟರ್ ಚಾಲಕ ಎಂದು ತಿರುಚಿ ಎಫ್‌ಐಆರ್ ದಾಖಲಿಸಿದ್ದರು. ಈಗಲೂ ಅಗಲಕೋಟೆ ಜಮೀನಿನ ವಿಚಾರದಲ್ಲಿ ಮಾಜಿ ಶಾಸಕರ ಕಡೆಯಿಂದ ದೌರ್ಜನ್ಯ ನಡೆಯುತ್ತಿದ್ದರೂ ಕ್ರಮ ಕೈಗೊಂಡಿಲ್ಲ. ಸಿಐ ವಿರುದ್ಧ ಕ್ರಮ ಜರುಗಿಸುವಂತೆ ಜಿಲ್ಲಾ ರಕ್ಷಣಾಧಿಕಾರಿಗೆ ಮನವಿ ಮಾಡಲಾಗಿದೆ.-ಹೂಡಿ ವಿಜಯಕುಮಾರ್, ಜೆಡಿಎಸ್ ಮುಖಂಡ.
ಒತ್ತುವರಿ ಆಗಿರುವುದು ನಿಜತೆರವಿಗೆ ಕ್ರಮ: ಎಸಿ ಅಗಲಕೋಟೆಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ಆಗಿದೆ ಎಂದು ಭೂ ದಾಖಲೆಗಳ ಇಲಾಖೆ ಉಪನಿರ್ದೇಶಕ ಮತ್ತು ಸಹಾಯಕ ನಿರ್ದೇಶಕರು ಸರ್ವೇ ವರದಿ ಸಲ್ಲಿಸಿದ್ದಾರೆ ಎಂದು ಉಪ ವಿಭಾಗಾಧಿಕಾರಿ ರೇಣುಕಾ ಪ್ರಸಾದ್ ಜಂಬಗಿ ತಿಳಿಸಿದರು. ಒತ್ತುವರಿ ತೆರವುಗೊಳಿಸುವಂತೆ ಈಗಾಗಲೇ ತಹಸೀಲ್ದಾರ್‌ಗೆ ಸೂಚನೆ ಕೊಡಲಾಗಿದೆ. ಒತ್ತುವರಿಯ ನಿರ್ದಿಷ್ಟ ಜಾಗ ಕುರಿತು ತಹಸೀಲ್ದಾರ್ ಸ್ಪಷ್ಟ ಮಾಹಿತಿ ಕೋರಿದ್ದಾರೆ. ಒತ್ತುವರಿಯನ್ನು ತೆರವು ಮಾಡುವುದು ಖಚಿತ. ಆದರೆ ಯಾವಾಗ ಆಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದು ಉಪ ವಿಭಾಗಾಧಿಕಾರಿ ವಿವರಿಸಿದರು.