ಮುಳವಾಡ ಟೋಲ್ ವಸೂಲಿ ವಿರುದ್ಧ ಸಿಎಂಗೆ ದೂರು

| Published : Dec 14 2024, 12:49 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಮುಳವಾಡ ಟೋಲ್‌ನಲ್ಲಿ ಕಾನೂನು ಬಾಹಿರವಾಗಿ ಸೇತುವೆ ಮತ್ತು ರಸ್ತೆ ಕಾಮಗಾರಿ ಪೂರ್ಣಗೊಳ್ಳದೇ ರಸ್ತೆ ಕರ ವಸೂಲಿ ಮಾಡುತ್ತಿರುವದನ್ನು ಖಂಡಿಸಿ ಅಹಿಂದ ಮುಖಂಡರ ಸೋಮನಾಥ ಕಳ್ಳಿಮನಿ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮುಳವಾಡ ಟೋಲ್‌ನಲ್ಲಿ ಕಾನೂನು ಬಾಹಿರವಾಗಿ ಸೇತುವೆ ಮತ್ತು ರಸ್ತೆ ಕಾಮಗಾರಿ ಪೂರ್ಣಗೊಳ್ಳದೇ ರಸ್ತೆ ಕರ ವಸೂಲಿ ಮಾಡುತ್ತಿರುವದನ್ನು ಖಂಡಿಸಿ ಅಹಿಂದ ಮುಖಂಡರ ಸೋಮನಾಥ ಕಳ್ಳಿಮನಿ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಸಾಮಾಜಿಕ ಹೋರಾಟಗಾರ ಸೋಮನಾಥ ಕಳ್ಳಿಮನಿ ಮಾತನಾಡಿ, ಹುಬ್ಬಳ್ಳಿ ರಸ್ತೆಯಲ್ಲಿರುವ ಮುಳವಾಡ ಹತ್ತಿರ ನವೆಂಬರ್ -೨೯ ರಿಂದ ಟೋಲ್ ವಸೂಲಿ ಮಾಡುತ್ತಿದ್ದು, ಆ ರಸ್ತೆಯಲ್ಲಿ ಬರುವ ಹೊನಗನಹಳ್ಳಿ ಗ್ರಾಮದ ಹತ್ತಿರ ರೈಲ್ವೆ ಮೇಲ್ಸತುವೆಯ ಕಾಮಗಾರಿಯು ಮೂರು ವರ್ಷದಿಂದ ಕುಂಟುತ್ತಾ ಸಾಗಿದೆ. ಆದರೂ ಸಹ ಟೋಲ್ ಸಂಗ್ರಹ ಮಾಡುತ್ತಿರುವುದು ಈ ರಸ್ತೆಯಲ್ಲಿ ಚಲಿಸುವ ಎಲ್ಲಾ ಸವಾರರಿಗೆ, ಪ್ರವಾಸಿಗರಿಗೆ ತುಂಬಾ ಅನ್ಯಾಯ ಮಾಡಲಾಗುತ್ತಿದೆ.

ಯಾವುದೇ ಸಮರ್ಪಕ ವ್ಯವಸ್ಥೆ ಇಲ್ಲದಿದ್ದರೂ ಟೋಲ್ ವಸೂಲಿ ಮಾಡುತ್ತಿರುವುದರಿಂದ ಹಗಲು ದರೋಡೆ ನಡೆಯುತ್ತಿದೆ. ಹೀಗಾಗಿ, ಐತಿಹಾಸಿಕ ವಿಜಯಪುರ ನಗರಕ್ಕೆ ಬರುವ ಪ್ರವಾಸಿಗರಿಗೆ ಮತ್ತು ಜಿಲ್ಲೆಯ ಜನರಿಗೆ ಅನುಕೂಲದ ದೃಷ್ಟಿಯಿಂದ ಸೇತುವೆ ಮತ್ತು ರಸ್ತೆ ಕಾಮಗಾರಿ ಪೂರ್ಣಗೊಳ್ಳುವವರೆಗೆ ಟೋಲ್ ವಸೂಲಿ ಮಾಡದಂತೆ ಆದೇಶ ಮಾಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಜಿಲ್ಲಾಧಿಕಾರಿಗಳನ್ನು ಕರೆದ ಸಿಎಂ ಸಿದ್ದರಾಮಯ್ಯ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ ವಹಿಸಲು ಸೂಚಿಸಿದರು.

ಈ ಸಂದರ್ಭದಲ್ಲಿ ಪವನ ಆಸಂಗಿ, ಬಸವರಾಜ ಪಾಟೀಲ, ಮೈಬೂಬ ಗೋಠೆ, ಯೋಗೇಶಕುಮಾರ ನಡುವಿನಕೇರಿ, ಸುರೇಶ ಘೋಣಸಗಿ, ದೇವಾನಂದ ಲಚ್ಯಾಣ, ಮಲ್ಲು ಬಿದರಿ, ಫಯಾಜ ಕಲಾದಗಿ, ನಿಂಗಪ್ಪ ನಾಟೀಕಾರ, ಸಂಜು ಕಂಬಾಗಿ, ಉಪಸ್ಥಿತರಿದ್ದರು.