ಸಾರಾಂಶ
ಬೆಂಗಳೂರು : ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ರಾಜಕಾರಣಿಗಳ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳು ದಶಕ ಕಳೆದರೂ ವಿಚಾರಣೆ ನಡೆಯದೆ ಬಾಕಿ ಉಳಿದುಕೊಂಡಿವೆ ಎಂದು ಆರೋಪಿಸಿ ಲೋಕಾಯುಕ್ತ ನ್ಯಾ.ಬಿ.ಎಸ್. ಪಾಟೀಲ್ ಅವರಿಗೆ ದೂರು ನೀಡಲಾಗಿದೆ.
ನೈಜ ಹೋರಾಟ ವೇದಿಕೆಯ ಎಚ್.ಎಂ.ವೆಂಕಟೇಶ್, ಸಾಮಾಜಿಕ ಕಾರ್ಯಕರ್ತ ಟಿ.ನರಸಿಂಹ ಮೂರ್ತಿ, ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಬಿ.ಎಚ್.ವೀರೇಶ್ ಸೇರಿದಂತೆ ಇತರರು ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.
ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳ ವಿರುದ್ಧ 2009ರಿಂದ ಈವರೆಗೆ ಹಲವು ರಾಜಕಾರಣಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಈವರೆಗೆ 18ಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇವೆ. ಈ ಬಗ್ಗೆ ಗಮನಹರಿಸಿ ವಿಚಾರಣೆ ನಡೆಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ಮಾಜಿ ಸಚಿವ ಮುರುಗೇಶ್ ನಿರಾಣಿ, ಜನಪ್ರತಿನಿಧಿಗಳಾದ ಎಂ.ಕೃಷ್ಣಪ್ಪ, ಪ್ರಿಯಕೃಷ್ಣ, ನೆಹರು ಓಲೇಕಾರ್ ಸೇರಿದಂತೆ ಹಲವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.