ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ವಿಜಯಪುರ ಜಿಲ್ಲಾ ಕೊಳೆಗೇರಿ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಹಕ್ಕು ಪತ್ರ ನೀಡಿದ್ದರಿಂದ ಕಳೆದ ಏಳೆಂಟು ವರ್ಷಗಳಿಂದ ಪಟ್ಟಣದ ಇಂದಿರಾ ನಗರದ ಸರ್ಕಾರಿ ಜಾಗದಲ್ಲಿ ವಾಸವಾಗಿದ್ದು, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ನಮ್ಮ ಮನೆಗಳನ್ನು ತೆರವುಗೊಳಿಸಿ ಅನ್ಯಾಯ ಮಾಡಲು ಹೊರಟಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಅಲ್ಲದೇ, ಈಗಿರುವ ತಗಡಿನ ಮನೆಗಳನ್ನು ತೆರವುಗೊಳಿಸದೇ ನಮಗೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ತಹಸೀಲ್ದಾರ್ ಬಲರಾಮ ಕಟ್ಟಿಮನಿ ಅವರಿಗೆ ಇಂದಿರಾ ನಗರ ಬಡಾವಣೆಯ ನಿವಾಸಿಗಳು ಸೋಮವಾರ ಮನವಿ ಸಲ್ಲಿಸಿದರು.ನಾವು ತಗಡಿನ ಮನೆಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದೇವೆ. ನಾವು ಬಡವರಾಗಿದ್ದು ನಿತ್ಯ ಕೂಲಿ ಮಾಡಿ ನಮ್ಮ ಮಕ್ಕಳ ಜೊತೆ ಕುಟುಂಬ ನಿರ್ವಹಣೆ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಈ ತಗಡಿನ ಮನೆಗಳನ್ನು ಬಿಟ್ಟು ವಾಸಿಸಲು ಬೇರೆ ಯಾವುದೇ ಮನೆಗಳಿಲ್ಲ. 2021ರಲ್ಲಿಯೇ ಸ್ಲಂ ಬೋರ್ಡ್ ಅಧಿಕಾರಿಗಳು ಮತ್ತು ಪುರಸಭೆ ಅಧಿಕಾರಿಗಳು ಜಂಟಿ ಸರ್ವೇ ಕೈಗೊಂಡು ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ (ಪೌರಾಡಳಿತ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ) 18 ಫೆಬ್ರವರಿ -2021ರ ಆದೇಶದನ್ವಯ ಸರ್ಕಾರದ ಮಾರ್ಗಸೂಚಿಯಂತೆ ನಮ್ಮಿಂದ ಹಣ ಕಟ್ಟಿಸಿಕೊಂಡಿದ್ದಾರೆ. ಅಲ್ಲದೆ, ನಮಗೆ ಹಕ್ಕು ಪತ್ರಗಳನ್ನು ವಿತರಿಸಿದ್ದಾರೆ. ಅಲ್ಲದೇ, ನೋಂದಣಿ ಪತ್ರವನ್ನು ನೀಡಿದ್ದಾರೆ. ಅದರಂತೆ ಸ್ಲಂ ಬೋರ್ಡ್‌ನ ಅಧಿಕಾರಿಗಳ ಆದೇಶದಂತೆ ಪುರಸಭೆಗೆ ತುಂಬಬೇಕಾದ ಕಂದಾಯವನ್ನು ತುಂಬಿ ನಮಗೆ ಉತಾರೆ ನೀಡಲು ಅರ್ಜಿ ಸಹ ಸಲ್ಲಿಸಿದ್ದೇವೆ. ಆದರೆ, ಇದೀಗ ಏಕಾಏಕಿ ಪುರಸಭೆ ಮುಖ್ಯಾಧಿಕಾರಿಗಳು ಬಂದು ನಿಮ್ಮ ಶೆಡ್‌ಗಳನ್ನು ತೆರವುಗೊಳಿಸಬೇಕು ಎಂದು ತಾಕೀತು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದ ನಮಗೆ ದಿಕ್ಕು ತೋಚದಂತಾಗಿದೆ. ಮೊದಲೇ ನಾವು ಬಡವರಾಗಿದ್ದು, ಬೇರೆ ದಾರಿ ಇಲ್ಲ. ವಾಸ ಮಾಡಲು ನಮಗೆ ಬೇರೆ ಯಾವುದೇ ಮನೆಗಳು ಇಲ್ಲ. ಇದರಿಂದ ನಿತ್ಯ ಜೀವನ ಕೂಲಿ ನಾಲಿ ಬದುಕುವ ಪರಿಸ್ಥಿತಿಯಲ್ಲಿದ್ದೇವೆ. ಈ ನಿಟ್ಟಿನಲ್ಲಿ ಸರ್ಕಾರ ನೀಡಿದ ಹಕ್ಕು ಪತ್ರಗಳನ್ನು ಪರಿಶೀಲಿಸಿ ಮುಖ್ಯಾಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ನಮಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಬೇಕು. ಅವರು ಮನೆಗಳನ್ನು ತೆರವುಗೊಳಿಸಿದರೆ ನಾವು ನೇಣಿಗೆ ಶರಣಾಗಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಮುಂದೆ ನಮ್ಮ ಕುಟುಂಬ ಮತ್ತು ನಮ್ಮ ಸಾವಿಗೆ ಪುರಸಭೆ ಅಧಿಕಾರಿಗಳೇ ನೇರ ಹೊಣೆಯಾಗಲಿದ್ದಾರೆ ಎಂದು ಅಳಲು ತೋಡಿಕೊಂಡರು.ಈ ವೇಳೆ ಮಲ್ಲು ಉಪ್ಪಲದಿನ್ನಿ, ರಾಮು ದಳವಾಯಿ, ಸಿದ್ದರಾಮ ತಳಹಳ್ಳಿ, ಪರುಶು ಚಲವಾದಿ, ಯಲ್ಲಮ್ಮ ದಳವಾಯಿ, ರಾಗಿಣಿ ಮಾದರ, ಶಾರದಾ ಬೂದಿಹಾಳ, ಪರಶುರಾಮ ದಳವಾಯಿ, ರವಿ ಚಲವಾದಿ, ಚಂದ್ರಶೇಖರ ಹಿರೇಮಠ, ಮುನ್ನಾ ನದಾಫ, ವಿಷ್ಣು ದಳವಾಯಿ, ಪರಶು ಖ್ಯಾತಣ್ಣವರ ಸೇರಿದಂತೆ ಅನೇಕ ಮಹಿಳೆರು ಪ್ರತಿಭಟನೆಯಲ್ಲಿದ್ದರು.-------------