ಗರ್ಭೀಣಿಯ ಪೌಷ್ಠಿಕ ಆಹಾರ ವಿತರಣೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. ಮೊಟ್ಟೆ ವಿತರಣೆಯಾಗಿಲ್ಲ.

ಹೂವಿನಹಡಗಲಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಸಾರ್ವಜನಿಕರ ಅಹವಾಲು ಸ್ವೀಕಾರ ಸಮಾರಂಭದಲ್ಲಿ ಹತ್ತಾರು, ಗಂಭೀರ ಸಮಸ್ಯೆ ಕುರಿತು ಅರ್ಜಿ ಸಲ್ಲಿಕೆಯಾದವು.

ಜಿಲ್ಲೆ ವ್ಯಾಪ್ತಿಯ ತಾಲೂಕಿನ ಅಂಗನವಾಡಿ ಕೇಂದ್ರಗಳ ಬಡ ಮಕ್ಕಳಿಗೆ ನೀಡುವ, ಮೊಟ್ಟೆ, ಗರ್ಭೀಣಿಯ ಪೌಷ್ಠಿಕ ಆಹಾರ ವಿತರಣೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. ಮೊಟ್ಟೆ ವಿತರಣೆಯಾಗಿಲ್ಲ. ಆದರೆ ಕೋಟ್ಯಂತರ ರುಪಾಯಿ ಬಿಲ್‌ ಡ್ರಾ ಆಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಗಂಗಪ್ಪ ಅವರನ್ನು ಕೂಡಲೇ ಅಮಾನತು ಮಾಡಬೇಕೆಂದು ಹುಲಿಕಟ್ಟೆ ಹನುಮಂತಪ್ಪ ಅರ್ಜಿ ಸಲ್ಲಿಸಿದರು.

ಹಡಗಲಿ ಸಣ್ಣ ನೀರಾವರಿ ಇಲಾಖೆಯಲ್ಲಿ ₹50 ಸಾವಿರ ಲಂಚ ನೀಡಿದರೆ ಕೊಳವೆ ಬಾವಿ ಕೊರೆಸುತ್ತಾರೆ. ಸಣ್ಣ ಅತಿಸಣ್ಣ ರೈತರಿಗೆ ನೀಡಬೇಕಿದ್ದ ಗಂಗಾ ಕಲ್ಯಾಣ ಯೋಜನೆಯಲ್ಲಿ 10 ಎಕರೆ ಇದ್ದ ರೈತರಿಗೂ 50 ಸಾವಿರ ರುಪಾಯಿ ಲಂಚ ಪಡೆದು, ಕೊಳವೆ ಬಾವಿ ನೀಡಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಅರ್ಜಿ ಬಂದಿತ್ತು.

ಪಟ್ಟಣದಲ್ಲಿ ಪೊಲೀಸರ ದೌರ್ಜನ್ಯ, ಸುಲಿಗೆ, ಗೂಂಡಾವರ್ತನೆ ಹೆಚ್ಚಾಗಿದೆ. ಅಮಾಯಕ ಜನರ ಮೇಲೆ ಇಲ್ಲ ಸಲ್ಲದ ನೆಪ ಹೇಳಿ ಹಲ್ಲೆ ಮಾಡಿದ ಬಳಿಕ ಮತ್ತೆ ರಾಜಿ ಸಂಧಾನ ನಡೆಯುತ್ತಿದೆ ಎಂದು ಕೆಆರ್‌ಎಸ್‌ ಪಕ್ಷದ ಚಂದ್ರಶೇಖರ ದೊಡ್ಮನಿ ದೂರು ನೀಡಿದ್ದಾರೆ.

ತಾಲೂಕಿನಲ್ಲಿ ಅರೆಬರೆ ರಸ್ತೆ ಕಾಮಗಾರಿಯಿಂದ ಅಪಘಾತ ಪ್ರಕರಣಗಳು ಹೆಚ್ಚಾಗಿವೆ. ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತಿ ಕಾರ್ಡ್‌ಗೆ ₹10 ನಂತೆ ಹಣ ವಸೂಲಿ ದಂಧೆ ನಡೆದಿದೆ. ರಸಗೊಬ್ಬರ ಹೆಚ್ಚಿನ ದರಕ್ಕೆ ಮಾರಾಟ ದಂಧೆ ನಡೆಯುತ್ತಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಹೆರಿಗೆಗೆ ಹಣದ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದಿದ್ದರೆ ಬೇರೆ ಕಡೆಗೆ ಕಳಿಸುತ್ತಾರೆ. ಇಂತಹ ಸಮಸ್ಯೆಗಳ ಕುರಿತು ಅರ್ಜಿ ಸಲ್ಲಿಕೆಯಾಗಿದ್ದವು.ಅನ್ನಭಾಗ್ಯದ ಅಕ್ಕಿ, ರಾಗಿ ಕಳ್ಳ ಸಾಗಾಣೆ ನಿರಂತರವಾಗಿ ನಡೆಯುತ್ತಿದೆ. ಮಧ್ಯರಾತ್ರಿ 2 ಗಂಟೆಗೆ ಗೋದಾಮಿನ ಅಕ್ಕಿ ಸಾಗಾಟ ನಡೆಯುತ್ತಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಕಡಿಮೆ ತೂಕ ಮಾಡುತ್ತಾರೆ ಎಂಬ ದೂರು ಕೇಳಿ ಬಂತು.

ರಾಜ್ಯ ರೈತ ಸಂಘವು ಕೊಯಿಲಾರಗಟ್ಟಿಯಲ್ಲಿ ಕೃಷಿ ಸಂಶೋಧನಾ ಕೇಂದ್ರ, ರಸಗೊಬ್ಬರಗಳ ರೇಟ್‌ ಪಾಯಿಂಟ್‌, ಯೂರಿಯಾ ರಸ ಗೊಬ್ಬರಕ್ಕೆ ಎಫ್‌ಐಡಿ ರದ್ದು ಮಾಡಬೇಕೆಂದು ಸೇರಿದಂತೆ ಹಲವು ಬೇಡಿಕೆಗಳ ಅರ್ಜಿ ಸಲ್ಲಿಸಿದರು.

ಸಾರ್ವಜನಿಕರಿಂದ ಅಂಚೆ ಇಲಾಖೆ ಕಚೇರಿ ನಿರ್ಮಾಣ, ರೈಲ್ವೆ ಮಾರ್ಗ ನಿರ್ಮಾಣ ಸೇರಿದಂತೆ ವಿವಿಧ ಇಲಾಖೆಗಳಿಗೆ ಒಟ್ಟು 34 ಅರ್ಜಿ ಸಲ್ಲಿಕೆಯಾಗಿದ್ದವು.

ಈ ಸಂದರ್ಭದಲ್ಲಿ ಶಾಸಕ ಕೃಷ್ಣನಾಯ್ಕ, ಜಿಲ್ಲಾಧಿಕಾರಿ ಕವಿತಾ ಎಸ್‌ ಮನ್ನಿಕೇರಿ, ಜಿಪಂ ಸಿಇಒ ನೊಂಗ್ಝಾಯ್‌ ಮಹ್ಮದ್‌ ಅಕ್ರಮ್‌ ಷಾ, ತಹಸೀಲ್ದಾರ್‌ ಕೆ.ಎಂ.ಗುರುಬಸವರಾಜ, ತಾಪಂ ಇಒ ಪರಮೇಶ್ವರ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.