ರಸ್ತೆ ಅಗೆದು ತಿಂಗಳಾದರೂ ದುರಸ್ತಿ ಇಲ್ಲ: ಹಾಸನದ ಅಜಾದ್ ರಸ್ತೆ ಹಿಂಭಾಗದ ನಿವಾಸಿಗಳ ದೂರು

| Published : Jun 04 2024, 12:31 AM IST

ರಸ್ತೆ ಅಗೆದು ತಿಂಗಳಾದರೂ ದುರಸ್ತಿ ಇಲ್ಲ: ಹಾಸನದ ಅಜಾದ್ ರಸ್ತೆ ಹಿಂಭಾಗದ ನಿವಾಸಿಗಳ ದೂರು
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನದ ೨೪ನೇ ವಾರ್ಡಿನ ಅಜಾದ್ ರಸ್ತೆ ಹಿಂಭಾಗ ಶಾಫಿ ಮಸೀದಿ ಬಳಿ ಚರಂಡಿ ಕಟ್ಟಿಕೊಂಡು ಚರಂಡಿಯಲ್ಲಿ ಕಲುಷಿತ ನೀರು ನಿಂತಿದ್ದು, ಇನ್ನು ಪೈಪ್‌ಲೈನ್ ಮಾಡುವ ಸಲುವಾಗಿ ಗುಂಡಿ ತೋಡಿರುವ ಪರಿಣಾಮ ಇಲ್ಲಿನ ಜನರು ಪ್ರತಿನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

೨೪ನೇ ವಾರ್ಡಿನ ಅಜಾದ್ ರಸ್ತೆ ಹಿಂಭಾಗದ ನಿವಾಸಿಗಳ ಅಳಲು

ಕನ್ನಡಪ್ರಭ ವಾರ್ತೆ ಹಾಸನ

ನಗರದ ೨೪ನೇ ವಾರ್ಡಿನ ಅಜಾದ್ ರಸ್ತೆ ಹಿಂಭಾಗ ಶಾಫಿ ಮಸೀದಿ ಬಳಿ ಚರಂಡಿ ಕಟ್ಟಿಕೊಂಡು ಚರಂಡಿಯಲ್ಲಿ ಕಲುಷಿತ ನೀರು ನಿಂತಿದ್ದು, ಇನ್ನು ಪೈಪ್‌ಲೈನ್ ಮಾಡುವ ಸಲುವಾಗಿ ಗುಂಡಿ ತೋಡಿರುವ ಪರಿಣಾಮ ಇಲ್ಲಿನ ಜನರು ಪ್ರತಿನಿತ್ಯ ನರಕಯಾತನೆ ಅನುಭವಿಸುವಂತಾಗಿದೆ ಎಂದು ಇಲ್ಲಿನ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ಇಲ್ಲಿನ ನಿವಾಸಿಗಳಾದ ಕೌಸರ್ ಭಾನು, ತೌಫೀಕ್ ಪಾಷ ಮಾಧ್ಯಮದೊಂದಿಗೆ ಮಾತನಾಡಿ, ಅಜಾದ್ ರಸ್ತೆ ಹಿಂಬಾಗದ ಶಾಫಿ ಮಸೀದಿ ರಸ್ತೆಯ ೨೪ನೇ ವಾರ್ಡಿನಲ್ಲಿ ರಸ್ತೆ ಮಧ್ಯೆ ಡ್ರೈನೇಜ್ ಪೈಪ್ ಹಾಕುವುದಾಗಿ ರಸ್ತೆ ಅಗೆದು ಒಂದೂವರೆ ತಿಂಗಳೇ ಕಳೆದಿದೆ. ಹಾಗಾಗಿ ರಸ್ತೆಯಲ್ಲಿನ ಮಳೆ ನೀರು ಹರಿಯುತ್ತಿಲ್ಲ. ಸಾರ್ವಜನಿಕರು ಓಡಾಡಲು ಅಡಚಣೆಯಾಗಿದೆ. ಡ್ರೈನೇಜು ಕಟ್ಟಿಕೊಂಡು ಕೊಳಚೆ ನೀರು ತುಂಬ ದಿನದಿಂದ ನಿಂತಿದೆ. ಶೌಚಾಲಯ ತುಂಬಿಕೊಂಡು ಮನೆ ಒಳಗೆ ಕೊಳಚೆ ನೀರು ಹರಿಯುತ್ತಿದೆ. ಕಸವನ್ನು ಕೂಡ ರಸ್ತೆ ಮೇಲೆ ಬಿಟ್ಟಿದ್ದು, ಸ್ವಚ್ಛತೆಯನ್ನು ಸರಿಯಾಗಿ ಮಾಡುತ್ತಿಲ್ಲ ಎಂದು ದೂರಿದರು.

ಇನ್ನು ಕಸ ಸಾಗಿಸುವ ವಾಹನ ಬಂದರೂ ಕೂಡ ನಿವಾಸಿಗಳು ಕಸವನ್ನು ರಸ್ತೆ ಮೇಲೆ ಎಸೆಯುತ್ತಿದ್ದು, ಈ ಭಾಗದಲ್ಲಿ ಯಾರೂ ನಡೆದಾಡುವುದಕ್ಕೆ ಆಗದಂತಾಗಿದೆ. ಕಲುಷಿತ ವಾತಾವರಣದಿಂದಾಗಿ ಡೆಂಘೀ ಜ್ವರ ಬಂದು ಅನೇಕರು ಆಸ್ಪತ್ರೆ ಸೇರಿದ್ದಾರೆ. ಇಲ್ಲಿ ಬೀದಿ ದೀಪ ಕೂಡ ಸರಿಯಾಗಿ ಬರುವುದಿಲ್ಲ. ಕಸ ಗುಡಿಸುವವರು ಇಲ್ಲಿ ಸ್ವಚ್ಛತೆ ಮಾಡುತ್ತಿಲ್ಲ. ೨೪ನೇ ವಾರ್ಡಿನ ಈ ಭಾಗದ ನಗರಸಭೆ ಸದಸ್ಯರು ಇತ್ತ ಕಡೆ ಗಮನವನ್ನೇ ಹರಿಸುತ್ತಿಲ್ಲ. ಮಳೆ ಬಂದರೆ ಸಾಕು ಈ ಭಾಗದ ಜನರು ಮನೆಯಲ್ಲಿ ವಾಸ ಮಾಡಲಾಗುವುದಿಲ್ಲ ಎಂದು ನಿವಾಸಿಗಳು ನೋವು ತೋಡಿಕೊಂಡರು.