ಸಾರಾಂಶ
ವಿದ್ಯಾರ್ಥಿಗಳಿಗೆ ಗಣಿತ ವಿಷಯ ಕಬ್ಬಿಣದ ಕಡಲೆಯಲ್ಲ. ಕನ್ನಡ, ಇಂಗ್ಲಿಷ್, ಹಿಂದಿ ಸಮಾಜ ವಿಜ್ಞಾನ ವಿಷಯಗಳಂತೆ ಗಣಿತವನ್ನೂ ಕೂಡ ಬಹಳ ಸುಲಭವಾಗಿ ಕಲಿಯಬಹುದು. ಗಣಿತ ವಿಷಯದಿಂದ ಹಣಕಾಸು, ತೂಕ ಸೇರಿದಂತೆ ವ್ಯವಹಾರ ಹಾಗೂ ಸಾಮಾನ್ಯ ಜ್ಞಾನವನ್ನು ವೃದ್ಧಿಸಿಕೊಳ್ಳಬಹುದು.
ಕನ್ನಡಪ್ರಭ ವಾರ್ತೆ ನಾಗಮಂಗಲ
ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನ ಹೆಚ್ಚಾಗಲು ಗಣಿತ ವಿಷಯ ಪೂರಕವಾಗಿದೆ. ಈ ಉದ್ದೇಶದಿಂದ ಗಣಿತ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಶಿಕ್ಷಣ ಇಲಾಖೆ ಬಿಆರ್‌ಪಿ ಜವರೇಗೌಡ ಹೇಳಿದರು.ತಾಲೂಕಿನ ಕರಡಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಅಕ್ಷರ ಫೌಂಡೇಷನ್ ಹಾಗೂ ಕರಡಹಳ್ಳಿ ಗ್ರಾಪಂ ಸಹಭಾಗಿತ್ವದಲ್ಲಿ ಮಂಗಳವಾರ ಆಯೋಜಿಸಿದ್ದ ಗ್ರಾಪಂ ಮಟ್ಟದ ಶಾಲಾ ಮಕ್ಕಳ ಗಣಿತ ಸ್ಪರ್ಧೆಯಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಗಣಿತ ವಿಷಯ ಕಬ್ಬಿಣದ ಕಡಲೆಯಲ್ಲ. ಕನ್ನಡ, ಇಂಗ್ಲಿಷ್, ಹಿಂದಿ ಸಮಾಜ ವಿಜ್ಞಾನ ವಿಷಯಗಳಂತೆ ಗಣಿತವನ್ನೂ ಕೂಡ ಬಹಳ ಸುಲಭವಾಗಿ ಕಲಿಯಬಹುದು. ಗಣಿತ ವಿಷಯದಿಂದ ಹಣಕಾಸು, ತೂಕ ಸೇರಿದಂತೆ ವ್ಯವಹಾರ ಹಾಗೂ ಸಾಮಾನ್ಯ ಜ್ಞಾನವನ್ನು ವೃದ್ಧಿಸಿಕೊಳ್ಳಬಹುದು ಎಂದರು.ಗ್ರಾಮೀಣ ಪ್ರದೇಶದ ಕೆಲ ವಿದ್ಯಾರ್ಥಿಗಳು ಗಣಿತ ವಿಷಯದಲ್ಲಿ ಹಿಂದಿರುವುದನ್ನು ಮನಗಂಡಿರುವ ಸರ್ಕಾರ ಅಕ್ಷರ ಫೌಂಡೇಷನ್ ಸಹಯೋಗದಲ್ಲಿ ಇಂತಹ ಉತ್ತಮ ಕಾರ್ಯಕ್ರಮವನ್ನು ಜಾರಿಗೆ ತಂದಿದೆ ಎಂದರು.
ಗ್ರಾಪಂ ಪಿಡಿಒ ವಿಜಯಕುಮಾರಿ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಗಣಿತ ಕಲಿಕಾ ಮಟ್ಟವನ್ನು ಉತ್ತಮಗೊಳಿಸುವ ಸಲುವಾಗಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಪೂರಕವಾಗಿ ಈಗಾಗಲೇ ಗ್ರಾಪಂ ವ್ಯಾಪ್ತಿ ಎಲ್ಲಾ ಶಾಲೆಗಳಲ್ಲಿ ಶಿಕ್ಷಕರು ಸೂಕ್ತ ತರಬೇತಿ ನೀಡಿದ್ದಾರೆ. ನಿಮ್ಮ ಕಲಿಕಾ ಸಾಮರ್ಥ್ಯವನ್ನು ಪ್ರದರ್ಶಿಸಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದರು.ಪ್ರಶ್ನೆ ಪತ್ರಿಕೆಯನ್ನು ನೋಡಿ ಗಾಬರಿಯಾಗದೆ ನೀವು ಕಲಿತಿರುವುದನ್ನು ಮನವರಿಕೆ ಮಾಡಿಕೊಂಡು ಸರಿ ಚಿಹ್ನೆಯ ಗುರುತು ಮಾಡುವ ಮೂಲಕ ಹೆಚ್ಚು ಅಂಕ ಪಡೆದುಕೊಳ್ಳಬೇಕು. ಸ್ವ-ಶಕ್ತಿ ಸಾಮರ್ಥ್ಯದಿಂದ ಪಡೆಯುವ ಅಂಕ ನಿಮ್ಮ ಗೌರವ ಹೆಚ್ಚಿಸುತ್ತದೆ. ಈ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಬಹುದು ಎಂದರು.
ಡಯಟ್‌ನ ಪ್ರಾಂಶುಪಾಲ ಪುರುಷೋತ್ತಮ, ಕ್ಷೇತ್ರ ಶಿಕ್ಷಣಾಧಿಕಾರಿ ಯೋಗೇಶ್ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಕೆ.ರವೀಶ್ ಕಾರ್ಯಕ್ರಮದ ನಡುವೆ ಭೇಟಿ ಕೊಟ್ಟು ಮಕ್ಕಳಿಗೆ ಶುಭಹಾರೈಸಿದರು. ಕರಡಹಳ್ಳಿ ಸಿಆರ್‌ಸಿ ಸಂಪನ್ಮೂಲ ವ್ಯಕ್ತಿ ಎನ್.ಎಸ್.ಸುರೇಶ್ ಮಾತನಾಡಿದರು. ಶಿಕ್ಷಣ ಇಲಾಖೆ ಇಸಿಒ ಮಂಜುನಾಥ್, ಅಕ್ಷರ ಫೌಂಡೇಷನ್‌ನ ರಂಗನಾಥ್, ಮುಖ್ಯ ಶಿಕ್ಷಕಿಯರಾದ ಬಬಿತಾ, ಯಾಸ್ಮಿನ್ ಸುಲ್ತಾನ್, ಶಿಕ್ಷಕರಾದ ಎಲ್.ಜಿ.ಶ್ರೀನಿವಾಸಗೌಡ, ಶೇಷಾದ್ರಿ ಸೇರಿದಂತೆ ಗ್ರಾಪಂ ವ್ಯಾಪ್ತಿಯ ವಿವಿಧ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇದ್ದರು.