ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಜಿಲ್ಲೆಯ ಅಫಜಲಪುರ ತಾಲೂಕಿನ ಸುಕ್ಷೇತ್ರ ಘತ್ತರಗಾ ಗ್ರಾಮದ ಶ್ರೀ ಭಾಗ್ಯವಂತಿ ದೇವಿ ದೇವಾಲಯದ ಆವರಣದಲ್ಲಿ ಆಗಸ್ಟ್ 15ರಿಂದ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ, ಸಾರ್ವಜನಿಕರು ಭಕ್ತಾದಿಗಳು ಸಹಕರಿಸಬೇಕು ಎಂದು ದೇವಸ್ಥಾನದ ಅಡಳಿತಾಧಿಕಾರಿ ಕೆ.ಕೆ.ಆರ್.ಡಿ.ಬಿ.ಬಿ ಮಂಡಳಿ ಅಧೀನ ಕಾರ್ಯದರ್ಶಿ ಪ್ರಕಾಶ್ ಕುದರಿ ತಿಳಿಸಿದ್ದಾರೆ.ಬುಧವಾರ ದೇವಸ್ಥಾನದ ಆವರಣದಲ್ಲಿ ಗ್ರಾಮಸ್ಥರ ಜೊತೆ ಸಭೆ ನಡೆಸಿದ ಅವರು, ರಾಜ್ಯದ ಮುಜರಾಯಿ ಇಲಾಖೆ ಅಧೀನದ ಎಲ್ಲ ದೇವಾಲಯಗಳಲ್ಲಿ ಆಗಸ್ಟ್ 15 ರಿಂದ ಕಡ್ಡಾಯವಾಗಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗುತ್ತಿದ್ದು, ಅದರಂತೆ ಘತ್ತರಗಿಯ ಶ್ರೀಭಾಗ್ಯವಂತಿ ದೇವಾಲಯ ಮತ್ತು ಅದರ ಆವರಣದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ನಿಯಮ ಅನ್ವಯವಾಗಲಿದೆ ಎಂದರು.
ಗ್ರಾಮದ ವ್ಯಾಪಾರಿಗಳು, ವರ್ತಕರು ಹಾಗೂ ನಾಗರಿಕರು ಪ್ಲಾಸ್ಟಿಕ್ ಬಳಕೆ ತ್ಯಜಿಸುವ ಮೂಲಕ ಪವಿತ್ರ ಧಾರ್ಮಿಕ ಸ್ಥಾನದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಲು ಸಹಕರಿಸಬೇಕು. ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿರುವ ಅವರು, ಪದೇ ಪದೇ ಪ್ಲಾಸ್ಟಿಕ್ ಬಳಸುವುದು ಕಂಡು ಬಂದಲ್ಲಿ ಕ್ರಿಮಿನಲ್ ಪ್ರಕರಣ ಸಹ ದಾಖಲಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದಿದ್ದಾರೆ.ಸ್ವಯಂ ಒತ್ತುವರಿ ತೆರವುಗೊಳಿಸಿ ಇನ್ನು ಗುಡಿ ಆವರಣವನ್ನು ಕೆಲವು ಅಂಗಡಿ-ಮುಂಗಟ್ಟುಗಳ ವ್ಯಾಪಾರಸ್ಥರು ಒತ್ತುವರಿ ಮಾಡಿಕೊಂಡಿರುವುದರಿಂದ ಭಕ್ತರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಕೂಡಲೇ ಒತ್ತುವರಿ ಮಾಡಿಕೊಂಡ ಅಂಗಡಿ ಮುಂಗಟ್ಟು ತಕ್ಷಣ ಸ್ವಯಂಪ್ರೇರಣೆಯಿಂದ ತೆರವುಗೊಳಿಸಬೇಕು. ವಿಳಂಬವಾದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯೇ ತೆರವು ಕಾರ್ಯಾಚರಣೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ವ್ಯಾಪಾರಸ್ಥರಿಗೆ ಪ್ರಕಾಶ ಕುದರಿ ಎಚ್ಚರಿಕೆ ನೀಡಿದರು.
ಘತ್ತರಗಿ ಸಮೀಪದ ಭೀಮಾನದಿ ತೀರದಲ್ಲಿರುವ ಭಾಗ್ಯವಂತಿ ದೇವಿಯ ಮೂಲಸ್ಥಾನ ಎಂದೇ ಗುರುತಿಸಲಾಗುವ ಗಡ್ಡಿ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಗ್ರಾಮದ ಮುಖಂಡರೊಂದಿಗೆ ಭೇಟಿ ನೀಡಿದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ಕುದರಿ ಅವರು, ಫಾರಂ ನಂ.10 (ದೇವಸ್ಥಾನದ ಹೆಸರಿಗೆ ಪಹಣಿ) ಮಾಡಿಸಲು ಸ್ಥಳ ನಿಗದಿಪಡಿಸುವ ಕುರಿತು ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಭೀಮಾ ನದಿ ದಂಡೆಯಲ್ಲಿ ಪ್ರಗತಿಯಲ್ಲಿರುವ ಹೈಮಾಸ್ಟ್ ದೀಪ, ಸಿ.ಸಿ.ಟಿ.ವಿ ಕ್ಯಾಮೆರಾ ಆಳವಡಿಕೆ ಕಾಮಗಾರಿಗಳನ್ನು ಸಹ ಇದೇ ಸಂದರ್ಭದಲ್ಲಿ ಪರಿಶೀಲಿಸಿದರು.ಅಫಜಲಪುರ ತಹಸೀಲ್ದಾರ್ ಮಹಾಂತೇಶ್ ಮುಡಬಿ, ದೇವಾಲಯದ ಸಿಬ್ಬಂದಿ ಮಂಜುನಾಥ ನಾವಿ, ಗ್ರಾಮದ ಮುಖಂಡರಾದ ಚಂದ್ರಕಾಂತ ಹೂಗಾರ, ಬಸಯ್ಯ ಹಿರೇಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.