ಪಿಯುಸಿ ವಿದ್ಯಾರ್ಥಿಗಳಿಗೆ ಫಚಿತ ಸಿಇಟಿ, ನೀಟ್ ಕೋಚಿಂಗ್

| Published : Jan 10 2025, 12:48 AM IST

ಪಿಯುಸಿ ವಿದ್ಯಾರ್ಥಿಗಳಿಗೆ ಫಚಿತ ಸಿಇಟಿ, ನೀಟ್ ಕೋಚಿಂಗ್
Share this Article
  • FB
  • TW
  • Linkdin
  • Email

ಸಾರಾಂಶ

ಈ ಹಿಂದಿನ ವರ್ಷದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ಸುಮಾರು ಆರುನೂರು ಪಿಯುಸಿ ವಿದ್ಯಾರ್ಥಿಗಳಿಗೆ ಶಾಸಕ ಪ್ರದೀಪ್‌ ಈಶ್ವರ್‌ ಉಚಿತ ಸಿಇಟಿ ಮತ್ತು ನೀಟ್ ಕೋಚಿಂಗ್ ವ್ಯವಸ್ಥೆ ಮಾಡಿದ್ದರು. ಈ ಬಾರಿಯಿಂದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ವಿದ್ಯಾರ್ಥಿಗಳಿಗೆ ಮಾತ್ರ ನೀಡುತ್ತಿದ್ದು ಆರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈ ಪ್ರಯೋಜನ ದೊರೆಯಲಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಎಲ್ಲ ಸರ್ಕಾರಿ ಮತ್ತು ಅನುದಾನಿತ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಸಿಇಟಿ ಮತ್ತು ನೀಟ್ ಕೋಚಿಂಗ್ ಈ ಸಾಲಿನಿಂದ ಪ್ರಾರಂಭಿಸಲಾಗುವುದು. ಅದಕ್ಕೆ ಪ್ರತಿ ವಿದ್ಯಾರ್ಥಿಗೆ 40 ಸಾವಿರ ವೆಚ್ಚವಾಗಲಿದ್ದು ಅದನ್ನು ತಾವೇ ಭರಿಸುವುದಾಗಿ ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.

ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮದಡಿ ಗುರುವಾರ ಮಂಚೇನಹಳ್ಳಿ ತಾಲೂಕಿನ ಗೌಡಗೆರೆ ಕಾಲೋನಿ, ಗೌಡಗೆರೆ, ಅದ್ದೇ ಕೊಪ್ಪ, ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮಸ್ಥರ, ಅಹವಾಲುಗಳನ್ನು ಆಲಿಸಿ, ಗೌಡಗೆರೆ ಮತ್ತು ಮಂಚೇನಹಳ್ಳಿಯಲ್ಲಿ ಸುಮಾರು 1.5 ಕೋಟಿರೂಗಳ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

600 ವಿದ್ಯಾರ್ಥಿಗಳಿಗೆ ಸೌಲಭ್ಯ

ಈ ಹಿಂದಿನ ವರ್ಷದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ಸುಮಾರು ಆರುನೂರು ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಸಿಇಟಿ ಮತ್ತು ನೀಟ್ ಕೋಚಿಂಗ್ ನೀಡಿದ್ದೆ. ಆದರೆ ಈ ಬಾರಿಯಿಂದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ವಿದ್ಯಾರ್ಥಿಗಳಿಗೆ ಮಾತ್ರ ನೀಡುತ್ತಿದ್ದು ಈ ಬಾರಿಯೂ ಆರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈ ಪ್ರಯೋಜನ ದೊರೆಯಲಿದೆ ಎಂದರು.

ಬಡವರ ಮಕ್ಕಳು ಸರ್ಕಾರಿ ಶಾಲೆ ಕಾಲೇಜಿಗೆ ಬರುವುದು.ಉಳ್ಳವರು ಎಲ್ಲಿ ಬೇಕಾದರೂ ವಿದ್ಯಾಬ್ಯಾಸ ಪಡೆಯುತ್ತಾರೆ. ಬಡವರ, ಹಿಂದುಳಿದ, ದಲಿತ,ಅಲ್ಪಸಂಖ್ಯಾತ ಮಕ್ಕಳಿಗೂ ತಾವೂ ಐಐಟಿ, ಇಂಜನೀಯರ್,ಡಾಕ್ಟರ್ ಗಳಾಗ ಬೇಕೇಂಬ ಕನಸು ಇರುತ್ತದೆ. ಅದು ಸಫಲವಾಗಬೇಕಾದರೆ ಅವರಿಗೆ ನೆರವು ಬೇಕು. ವಿದ್ಯೆ ಕಲಿಯುವ ಆಸಕ್ತಿ, ಜೀವನದಲ್ಲಿ ಮುಂದೆ ಎನಾಗಬೇಕು ಎಂಬ ಗುರಿ, ಆಗುರಿಯನ್ನು ನೆರವೇರಿಸಿಕೊಳ್ಳುವ ಛಲ ಇದ್ದರೆ ಗುರಿ ಮುಟ್ಟುತ್ತಾರೆ ಎಂದರು.

ಈ ಬಾಗದ ಹಳ್ಳಿಗಳಲ್ಲಿ ದಲಿತರ ಮತ್ತು ಬಡವರ ವಸತಿ ಸಮಸ್ಯೆ ಸಾಕಷ್ಟಿದೆ. ನನ್ನ ವಿಧಾನಸಭಾ ಕ್ಷೇತ್ರಕ್ಕೆ ಈ ಸಾಲಿನಲ್ಲಿ 2000 ಮನೆಗಳನ್ನು ನೀಡುವಂತೆ ವಸತಿ ಸಚಿವ ಜಮೀರ್ ಅಹಮದ್ ರಲ್ಲಿ ಮನವಿ ಮಾಡಿದ್ದು, ಅವರಿಂದ ಸಕಾರಾತ್ಮಕ ಸ್ಪಂದನೆ ದೊರೆತಿದ್ದು, ಮಂಜೂರಾದ ನಂತರ ಪ್ರತಿ ಪಂಚಾಯತಿಗೆ ಕನಿಷ್ಟ ನೂರು ಮನೆಗಳನ್ನು ವಸತಿ ಹೀನರಿಗೆ ನೀಡಲಾಗುವುದು. ಇನ್ನು ನನ್ನ ಕ್ಷೇತ್ರದ ಜನರಿಗೆ ಶಕ್ತಿ ಮೀರಿ ಸಹಾಯವನ್ನು ಮಾಡುತ್ತಿದ್ದೇನೆ ಎಂದರು.

ಗ್ರಾಮಸ್ಥರ ಜತೆ ಸಂವಾದ

ಗ್ರಾಮಗಳಿಗೆ ಆಗಮಿಸಿದ ಶಾಸಕರು ಮತ್ತು ಅಧಿಕಾರಿಗಳಿಗೆ ಸ್ಥಳೀಯರು ಉತ್ಸಾಹದಿಂದ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶಾಸಕ ಪ್ರದೀಪ್ ಈಶ್ವರ್ ಗ್ರಾಮಸ್ಥರೊಂದಿಗೆ ನೆಲದ ಮೇಳೆ ಕುಳಿತು ಸಂವಾದ ನಡೆಸಿ, “ಇಲ್ಲಿ ಯಾವ ಸಮಸ್ಯೆಗಳನ್ನು ನೀವು ಎದುರಿಸುತ್ತಿದ್ದೀರಿ?” ಎಂದು ಪ್ರಶ್ನಿಸಿದರು. ಪ್ರತಿಯಾಗಿ, ಗ್ರಾಮಸ್ಥರು ಮೂಲಸೌಕರ್ಯಗಳ ಕೊರತೆ, ವಸತಿ,ಕಂದಾಯ, ಪಿಂಚಣಿ, ಆರೋಗ್ಯ ಸಮಸ್ಯೆಗಳನ್ನು ಸೇರಿದಂತೆ ರಸ್ತೆ, ಚರಂಡಿ, ವಿದ್ಯುತ್ ಸಂಪರ್ಕ, ಜಾಗದ ಒತ್ತುವರಿ ತೆರವು ಬಸ್ ವ್ಯವಸ್ಥೆ ಕೊರತೆ ಬಗ್ಗೆ ವಿವರಿಸಿದರು.

ಸಮಸ್ಯೆ ಪರಿಹರಿಸುವ ಭರವಸೆ

ಅಲ್ಲದೆ ಸ್ಮಶಾನದ ಜಾಗ ಮತ್ತು ರಸ್ತೆ, ಸರ್ಕಾರಿ ಶಾಲೆಯಲ್ಲಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾಗಿ ಶೌಚಾಲಯ ನಿರ್ಮಾಣ ಹಾಗೂ ಆರೋಗ್ಯ ಸಮಸ್ಯೆಗಳು ಒಳಗೊಂಡಂತೆ ಹಲವಾರು ಸಮಸ್ಯೆಗಳನ್ನು ಜನರು ಶಾಸಕರ ಬಳಿ ಹೇಳಿಕೊಂಡರು. ಕೆಲ ಸಮಸ್ಯೆಗಳಿಗೆ ಅಲ್ಲೆ ಪರಿಹಾರ ಕಲ್ಪಿಸಿದರೆ ಮತ್ತೆ ಕೆಲವಕ್ಕೆ ಕಾಲಾವಕಾಶ ನಿಗಧಿ ಪಡಿಸಿ, ಅಧಿಕಾರಿಗಳಿಂದ ಆದಷ್ಟು ಬೇಗ ಜನರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು.ಶಾಸಕರೊಂದಿಗೆ ಮಂಚೇನಹಳ್ಳಿ ತಹಸೀಲ್ದಾರ್ ದೀಪ್ತಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಹೊನ್ನಯ್ಯ, ಅಬಕಾರಿ ಇನ್ಸ್ ಪೆಕ್ಟರ್ ಮಂಜುನಾಥ್,ಮುಖಂಡ ಅರವಿಂದ್, ಆಹಾರ, ಅಬಕಾರಿ,ಅರಣ್ಯ,ಬೆಸ್ಕಾಂ, ಆರೋಗ್ಯ, ಪೋಲಿಸ್ ಇಲಾಖೆಗಳ ತಾಲೂಕು ಪಂಚಾಯತಿ, ಗ್ರಾಮ ಪಂಚಾಯತಿ ಅಧಿಕಾರಿಗಳು ಇದ್ದರು.