ಬೆಳೆ ಹಾನಿ ಸಮೀಕ್ಷೆ ಪೂರ್ಣಗೊಳಿಸಿ ವರದಿ ಸಲ್ಲಿಸಿ

| Published : Sep 01 2024, 01:45 AM IST

ಸಾರಾಂಶ

ಧಾರವಾಡ, ಅಳ್ನಾವರ ಮತ್ತು ಕಲಘಟಗಿ ತಾಲೂಕಿನಲ್ಲಿ ನಿರಂತರ ಮಳೆಯಿಂದಾಗಿ ಬೆಳೆಹಾನಿ ಆಗಿದೆ. ಈ ಕುರಿತು ಸಮೀಕ್ಷೆ ಪೂರ್ಣಗೊಳಿಸಬೇಕು. ಸರ್ಕಾರಕ್ಕೆ ಈ ಕುರಿತು ವರದಿ ಸಲ್ಲಿಸಲಾಗುವುದು.

ಧಾರವಾಡ:

ಮುಂಗಾರು ಹಂಗಾಮಿನಲ್ಲಿ ಅತಿ ಮತ್ತು ನಿರಂತರ ಮಳೆಯಿಂದಾಗಿ ಬೆಳೆಹಾನಿ ಆಗಿರುವ ಕುರಿತು ಕಂದಾಯ ಮತ್ತು ಕೃಷಿ ಇಲಾಖೆ ಮಾಡುತ್ತಿರುವ ಜಂಟಿ ಸಮೀಕ್ಷೆಯನ್ನು ಬೇಗ ಪೂರ್ಣಗೊಳಿಸಿ, ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಧಾರವಾಡ, ಅಳ್ನಾವರ ಮತ್ತು ಕಲಘಟಗಿ ತಾಲೂಕಿನಲ್ಲಿ ನಿರಂತರ ಮಳೆಯಿಂದಾಗಿ ಬೆಳೆಹಾನಿ ಆಗಿದೆ. ಈ ಕುರಿತು ಸಮೀಕ್ಷೆ ಪೂರ್ಣಗೊಳಿಸಬೇಕು. ಸರ್ಕಾರಕ್ಕೆ ಈ ಕುರಿತು ವರದಿ ಸಲ್ಲಿಸಲಾಗುವುದು ಎಂದರು.

ಪಂಚಾಯತ್‌ ರಾಜ್‌ ಎಂಜನಿಯರಿಂಗ್ ವಿಭಾಗದ ವ್ಯಾಪ್ತಿಗೆ ಒಳಪಡುವ 624 ಕಿಮೀ ರಸ್ತೆ ಮಳೆಯಿಂದ ಹಾನಿ ಆಗಿದ್ದು, ಇಲಾಖೆಯಲ್ಲಿ ಲಭ್ಯವಿರುವ ಅನುದಾನ ಬಳಸಿಕೊಂಡು ತುರ್ತು ಅಗತ್ಯವಿರುವ ರಸ್ತೆ ದುರಸ್ತಿ ಮಾಡಿ, ವಾಹನ ಸಂಚಾರಕ್ಕೆ ಅನುಕೂಲ ಮಾಡಬೇಕು. 35 ಸೇತುವೆ ಹಾನಿ ಆಗಿದ್ದು, ರಿಪೇರಿಗೆ ಆದ್ಯತೆ ನೀಡಬೇಕು. ಇವುಗಳ ಕುರಿತು ಸಮಗ್ರ ವರದಿಯನ್ನು ಇಲಾಖೆ ಮುಖ್ಯಸ್ಥರಿಗೆ ತಕ್ಷಣ ಸಲ್ಲಿಸಲು ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ನಿರ್ದೇಶಿಸಿದರು.

ಸಾರ್ವಜನಿಕರಿಗೆ ಕುಡಿಯಲು ಸರಬರಾಜು ಆಗುವ ನೀರು ಸ್ವಚ್ಛ ಮತ್ತು ಶುದ್ಧವಾಗಿರುವಂತೆ ಎಚ್ಚರಿಕೆ ವಹಿಸಬೇಕು. ಯಾವುದೇ ಕಾರಣಕ್ಕೂ ಕಲ್ಮಶ ಅಥವಾ ಕಲುಷಿತ ನೀರು ಸರಬರಾಜು ಆದ ಬಗ್ಗೆ ದೂರು, ವರದಿ ಬಂದರೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ನಿರ್ಲಕ್ಷ್ಯತನ ಆಧಾರದ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ, ನೇರವಾಗಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ:

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಮಹತ್ವದಾಗಿದ್ದು, ಕೆಲವು ಇಲಾಖೆ ಅಧಿಕಾರಿಗಳು ಮಾಹಿತಿ ನೀಡದೆ ಗೈರಾಗುವುದು ಅಥವಾ ಬೇರೆ ಅಧಿಕಾರಿ, ಸಿಬ್ಬಂದಿಯನ್ನು ಸಭೆಗೆ ನಿಯೋಜಿಸುತ್ತಿರುವುದು ಕಂಡು ಬರುತ್ತಿದೆ. ಗೈರು ಹಾಜರಾಗಿರುವ ಅಧಿಕಾರಿಗಳಿಗೆ ವಿಪತ್ತು ನಿರ್ವಹಣಾ ಕಾಯ್ದೆ ಪ್ರಕಾರ ನೋಟಿಸ್ ನೀಡಿ, ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಪ್ರಶಾಂತ ಪಾಟೀಲ ಮಾತನಾಡಿ, ತುರ್ತು ಕಾಮಗಾರಿ ನಿರ್ವಹಣೆಗೆ ₹ 1.16ಕೋಟಿ ಅನುದಾನ ಬಂದಿದ್ದು, ಆದ್ಯತೆ ಮೇಲೆ ಕಾಮಗಾರಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಎಚ್.ಎಚ್. ಕುಕನೂರ ಮಾತನಾಡಿ, ಮಳೆಯಿಂದಾಗಿ 64 ಅಂಗನವಾಡಿ ಕೇಂದ್ರಗಳಿಗೆ ಹಾನಿ ಆಗಿದ್ದು, ಇದರಲ್ಲಿ 44 ಅಂಗನವಾಡಿ ಕೇಂದ್ರಗಳ ಕಟ್ಟಡ ದುರಸ್ತಿಗೆ ನಮ್ಮ ಇಲಾಖೆಯಿಂದ ಅನುದಾನ ಬಿಡುಗಡೆ ಆಗಿದೆ. ಶೀಘ್ರದಲ್ಲಿ ಏಜನ್ಸಿ ಪಿಕ್ಸ್ ಮಾಡಿ, ಕಾರ್ಯಾದೇಶ ನೀಡಲಾಗುವುದು ಎಂದರು.

ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ. ಸುಜಾತಾ ಹಸವೀಮಠ ಮಾತನಾಡಿ, ಜಿಲ್ಲೆಯಲ್ಲಿ ಡೆಂಘೀ ಕಾಯಿಲೆ ನಿಯಂತ್ರಣವಾಗಿದ್ದು, ರೋಗಿಗಳ ಸಂಖ್ಯೆ ಇಳಿಮುಖವಾಗಿದೆ. ಆರೋಗ್ಯ ಕಾರ್ಯಕರ್ತೆಯಿಂದ ಲಾರ್ವಾನಾಶ ಮತ್ತು ಮನೆ-ಮನೆ ಸಮೀಕ್ಷೆ, ಡೆಂಘೀ ಹಾಗೂ ಇತರ ಋತುಮಾನದ ಸಾಮಾನ್ಯ ಕಾಯಿಲೆಗಳ ಕುರಿತು ಜನಜಾಗೃತಿ ಕಾರ್ಯಕ್ರಮ ಮುಂದುವರಿಸಲಾಗಿದೆ ಎಂದು ಹೇಳಿದರು.

ಡಿಡಿಪಿಐ ಎಸ್.ಎಸ್. ಕೆಳದಿಮಠ, ಮಳೆಯಿಂದಾಗಿ ಸೋರುತ್ತಿದ್ದ ಮತ್ತು ದುರಸ್ತಿಗೆ ಅಗತ್ಯವಿದ್ದ ಕೊಠಡಿಗಳಿಂದ ಮಕ್ಕಳನ್ನು ಸ್ಥಳಾಂತರಿಸಲಾಗಿದೆ. ವಿಶೇಷ ಅನುದಾನದಲ್ಲಿ ಇವುಗಳ ದುರಸ್ತಿ ಕಾಮಗಾರಿಗೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ತುರ್ತು ಅಗತ್ಯವಿರುವ ಕಾಮಗಾರಿಗಳಿಗೆ ಜಿಪಂ ಅನುದಾನ ಬಿಡುಗಡೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ.ಸಿ.ಡಿ., ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಜಿಪಂ ಉಪ ಕಾರ್ಯದರ್ಶಿ ಬಿ.ಎಸ್. ಮುಗನೂರಮಠ, ತಹಸೀಲ್ದಾರ್‌ರು, ತಾಪಂ ಇಒ, ಅಗ್ನಿಶಾಮಕ, ಕೃಷಿ, ತೋಟಗಾರಿಕೆ, ಆಹಾರ, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಭಾಗವಹಿಸಿದ್ದರು.