ಕೊಪ್ಪಳ: ಬೆಳೆ ಹರಗುವ ಮುನ್ನ ಬೆಳೆ ಸಮೀಕ್ಷೆ ಪೂರ್ಣಗೊಳಿಸಿ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಹೇಳಿದರು.

ಜಿಲ್ಲೆಯ ಕೊಪ್ಪಳ ಹಾಗೂ ಇರಕಲ್‌ಗಡ ಹೋಬಳಿಗಳ ವ್ಯಾಪ್ತಿಯ ಟಣಕನಕಲ್,ತಾಳಕನಕಾಪುರ, ಯಲ್ಲಮಗೇರಿ ಮತ್ತು ಚಿಲಕಮುಖಿ ಗ್ರಾಮಗಳಲ್ಲಿ ಮಳೆ ಕೊರತೆಯಿಂದ ಬೆಳೆಗಳು ಕುಂಠಿತಗೊಂಡಿರುವ ಪ್ರದೇಶ ಹಾಗೂ ಜಮೀನುಗಳಿಗೆ ಭೇಟಿ ನೀಡಿದರು. ಮಳೆ ಕೊರತೆಯಿಂದ ಹಾನಿಗೊಳಗಾದ ಮೆಕ್ಕೆಜೋಳ, ತೊಗರಿ ಹಾಗೂ ಸಜ್ಜೆ ಬೆಳೆ ಪರಿಶೀಲಿಸಿ, ರೈತರೊಂದಿಗೆ ಸಮಾಲೋಚನೆ ನಡೆಸಿ, ರೈತರು ತಮ್ಮ ಬೆಳೆಗಳ ಬೆಳೆ ಸಮೀಕ್ಷೆ (ಕ್ರಾಪ್ ಸರ್ವೇ) ಅನ್ನು ಕಡ್ಡಾಯವಾಗಿ ಪೂರ್ಣಗೊಳಿಸಿಕೊಳ್ಳಬೇಕು ಎಂದು ಹೇಳಿದರು.

ಬೆಳೆ ಸಮೀಕ್ಷೆಯ ಮೂಲಕ ಬೆಳೆ ವಿಸ್ತೀರ್ಣ, ಬೆಳೆಗಳ ಪ್ರಸ್ತುತ ಸ್ಥಿತಿ ಹಾಗೂ ಬೆಳವಣಿಗೆಯ ಮಾಹಿತಿ ನಿಖರವಾಗಿ ದಾಖಲಿಸಬಹುದಾಗಿದೆ. ಅಲ್ಲದೆ, ಮಳೆ ಕೊರತೆಯಿಂದ ಬೆಳೆ ಹಾನಿಗೊಳಗಾದ ಪ್ರದೇಶ ಗುರುತಿಸಲು ಬೆಳೆ ಸಮೀಕ್ಷೆಯು ಪ್ರಮುಖ ಆಧಾರವಾಗಿದ್ದು, ಬೆಳೆ ಹಾನಿ ಪರಿಹಾರ, ಬರ ಘೋಷಣೆ, ಬೆಳೆ ವಿಮೆ ಪರಿಹಾರ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಈ ಮಾಹಿತಿಯು ಅತ್ಯಂತ ಸಹಕಾರಿಯಾಗಿದೆ ಎಂದು ಹೇಳಿದರು.

ರೈತರು ಬೆಳೆ ಹರಗುವ ಮೊದಲು ಕಡ್ಡಾಯವಾಗಿ ಬೆಳೆ ಸಮೀಕ್ಷೆ ಪೂರ್ಣಗೊಳಿಸಬೇಕು. ಪ್ರಕೃತಿ ವಿಕೋಪಗಳಿಂದ ಉಂಟಾಗುವ ಆರ್ಥಿಕ ನಷ್ಟದಿಂದ ರೈತರನ್ನು ರಕ್ಷಿಸಲು ಬೆಳೆ ವಿಮೆ ಪರಿಣಾಮಕಾರಿ ಸಾಧನವಾಗಿದ್ದು, ಅರ್ಹ ರೈತರು ನಿಗದಿತ ಅವಧಿಯೊಳಗೆ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳುವಂತೆ ತಿಳಿಸಿದರು.

ಬೆಳೆ ವಿಮೆ ಕುರಿತು ಗ್ರಾಮ ಮಟ್ಟದಲ್ಲಿ ಮಾಹಿತಿ,ತರಬೇತಿ ಹಾಗೂ ಅರಿವು ಕಾರ್ಯಕ್ರಮ ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವಂತೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.


ಜಿಪಂ ಸಿಇಒ, ಜಂಟಿ ಕೃಷಿ ನಿರ್ದೇಶಕರು, ತೋಟಗಾರಿಕೆ ಜಂಟಿ ನಿರ್ದೇಶಕರು ಮತ್ತು ಪಶು ಸಂಗೋಪನೆ ಇಲಾಖೆ, ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರೊಂದಿಗೆ ರೈತರ ಹೊಲಗಳಿಗೆ ತೆರಳಿ, ಅಲ್ಲಿನ ಸ್ಥಿತಿಗತಿ ಖುದ್ದಾಗಿ ವೀಕ್ಷಿಸಿದರು.

ಜಂಟಿ ಕೃಷಿ ನಿರ್ದೇಶಕ ಜಿ.ಡಿ. ಕೃಷ್ಣಮೂರ್ತಿ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಕೃಷ್ಣ ಸಿ.ಉಕ್ಕುಂದ, ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಪಿ.ಎಂ.ಮಲ್ಲಯ್ಯ, ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಶ್ರೀನಿವಾಸ, ಉಪ ಕೃಷಿನಿರ್ದೇಶಕ ಎಲ್. ಸಿದ್ದೇಶ್ವರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿ, ಗ್ರಾಪಂ ಪಿಡಿಓ, ರೈತರು ಹಾಗೂ ಇತರರಿದ್ದರು.