ಜನಪದ ಸಾಹಿತ್ಯ ಮತ್ತು ರಂಗಭೂಮಿಯ ಪರಂಪರೆಯಲ್ಲಿ ಸಂಪೂರ್ಣ ಹೇಮರೆಡ್ಡಿ ಮಲ್ಲಮ್ಮ ನಾಟಕ ವಿಶೇಷ ಸ್ಥಾನ ಹೊಂದಿದೆ. ಗ್ರಾಮೀಣ ಬದುಕಿನ ಸೊಗಡು, ಮಹಿಳೆಯ ಧೈರ್ಯ, ಭಕ್ತಿ, ತ್ಯಾಗ ಮತ್ತು ಸಮಾಜದ ಮೌಲ್ಯಗಳನ್ನು ಮನಮುಟ್ಟುವ ರೀತಿಯಲ್ಲಿ ನಾಟಕವು ಮೂಡಿ ಬಂದಿದೆ.

ಧಾರವಾಡ:

ಇಲ್ಲಿಯ ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮೇ 21ರಂದು ಸಂಜೆ 5.30ಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಪು ಸಭಾಭವನದಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿಯ ಪ್ರಯುಕ್ತ ಸಂಪೂರ್ಣ ಹೇಮರೆಡ್ಡಿ ಮಲ್ಲಮ್ಮ ನಾಟಕ ಪ್ರದರ್ಶನಗೊಳ್ಳಲಿದೆ.

ಹುಬ್ಬಳ್ಳಿಯ ಕರ್ನಾಟಕ ನಾಟಕ, ಜಾನಪದ ಕಲಾವಿದರ ಅಭಿವೃದ್ಧಿ ಸಂಘದ ತಂಡವು ಈ ನಾಟಕ ಪ್ರಸ್ತುತಪಡಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರಂಗಾಸಕ್ತರು, ಕಲಾವಿದರು, ರೆಡ್ಡಿ ಸಮುದಾಯದ ಬಂಧುಗಳು ಆಗಮಿಸಬೇಕೆಂದು ಪ್ರತಿಷ್ಠಾನದ ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ ಮನವಿ ಮಾಡಿದ್ದಾರೆ.

ನಾಟಕದ ಕುರಿತು:

ಜನಪದ ಸಾಹಿತ್ಯ ಮತ್ತು ರಂಗಭೂಮಿಯ ಪರಂಪರೆಯಲ್ಲಿ ಸಂಪೂರ್ಣ ಹೇಮರೆಡ್ಡಿ ಮಲ್ಲಮ್ಮ ನಾಟಕ ವಿಶೇಷ ಸ್ಥಾನ ಹೊಂದಿದೆ. ಗ್ರಾಮೀಣ ಬದುಕಿನ ಸೊಗಡು, ಮಹಿಳೆಯ ಧೈರ್ಯ, ಭಕ್ತಿ, ತ್ಯಾಗ ಮತ್ತು ಸಮಾಜದ ಮೌಲ್ಯಗಳನ್ನು ಮನಮುಟ್ಟುವ ರೀತಿಯಲ್ಲಿ ನಾಟಕವು ಮೂಡಿ ಬಂದಿದೆ. ಮಲ್ಲಮ್ಮನ ಪಾತ್ರವು ಸಹನೆಯ, ಶ್ರದ್ಧೆಯ ಮತ್ತು ಸತ್ಯನಿಷ್ಠೆಯ ಪ್ರತೀಕ. ಜೀವನದಲ್ಲಿ ಎದುರಾಗುವ ಅನೇಕ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸುವ ಮಹಿಳೆಯ ರೂಪದಲ್ಲಿ ಮಲ್ಲಮ್ಮ ಮೂಡಿ ಬರುತ್ತಾಳೆ. ಕುಟುಂಬದ ಗೌರವ, ಸಮಾಜದ ಒಳ್ಳೆಯತನ ಮತ್ತು ಮಾನವೀಯತೆಯ ಸಂದೇಶವನ್ನು ತನ್ನ ನಡೆ-ನುಡಿಗಳ ಮೂಲಕ ತೋರಿಸುವ ಅವಳ ಪಾತ್ರವು ಪ್ರೇಕ್ಷಕರ ಮನಸ್ಸಿನಲ್ಲಿ ಅಳಿಯದ ಛಾಪು ಮೂಡಿಸುತ್ತದೆ.

ಸರಳ ಭಾಷೆ ವಿಶೇಷ:

ನಾಟಕದ ಪ್ರತಿಯೊಂದು ದೃಶ್ಯವೂ ಗ್ರಾಮೀಣ ಸಂಸ್ಕೃತಿಯ ವೈಭವವನ್ನು ಪ್ರತಿಬಿಂಬಿಸುತ್ತದೆ. ಈ ನಾಟಕದ ಪ್ರಮುಖ ಆಕರ್ಷಣೆ ಅದರ ಸರಳ ಭಾಷೆ ಮತ್ತು ಜನಪದ ಶೈಲಿಯ ಸಂಭಾಷಣೆಗಳು. ಗ್ರಾಮೀಣ ಜನರ ಮಾತಿನ ದಾಟಿ, ಹಾಡುಗಳು ಹಾಗೂ ಭಾವಪೂರ್ಣ ಅಭಿನಯಗಳು ಪ್ರೇಕ್ಷಕರನ್ನು ಸೆಳೆಯುತ್ತವೆ. ವಿಶೇಷವಾಗಿ ಮಲ್ಲಮ್ಮನ ಪಾತ್ರ ನಿರ್ವಹಿಸುವ ಕಲಾವಿದೆ ಹೆಲನ್ ಮೈಸೂರು ಅಭಿನಯ ಪ್ರೇಕ್ಷಕರ ಮನ ತಟ್ಟಲಿದೆ. ಸಂಗೀತ, ವೇಷಭೂಷಣ ಮತ್ತು ವೇದಿಕೆಯ ವಿನ್ಯಾಸಗಳು ನಾಟಕದ ಸೌಂದರ್ಯ ಮತ್ತಷ್ಟು ಹೆಚ್ಚಿಸುತ್ತವೆ.

“ಹೇಮರೆಡ್ಡಿ ಮಲ್ಲಮ್ಮ” ನಾಟಕವು ನಾಡಿನ ಸಂಸ್ಕೃತಿ, ಮಹಿಳಾ ಶಕ್ತಿ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾಗಿ ಸದಾ ಉಳಿಯುವ ಕಲಾಕೃತಿ ಎಂದು ಹೇಳಬಹುದು. ಇಂತಹ ನಾಟಕಗಳ ಪ್ರದರ್ಶನಗಳು ಕನ್ನಡ ರಂಗಭೂಮಿಯ ಗೌರವವನ್ನು ಇನ್ನಷ್ಟು ಹೆಚ್ಚಿಸುತ್ತವೆ ಎಂದು ಹೇಮರಡ್ಡಿ ಮಲ್ಲಮ್ಮ ಮಹಿಳಾ ಸಂಸ್ಥೆ ಅಧ್ಯಕ್ಷರಾದ ಸುಜಾತ ವಿ ರೆಡ್ಡಿ ಹೇಳುತ್ತಾರೆ.

ಕಲಾವಿದರು:

ಶ್ರೀಕಂಠ ಶಾಸ್ತ್ರಿಗಳು ಹಿರೇಮಠ ನಲವಡಿ ರಚನೆಯ ಈ ನಾಟಕವು ಲಕ್ಷ್ಮಿದೇವಿ ಶಿಗ್ಗಾವ್ ನಿರ್ದೇಶನದಲ್ಲಿ ಮೂಡಿಬಂದಿದೆ. ಸೈಯದ್ ಮಾಸ್ಟರ್ ಸಂಗೀತ ಸಂಯೋಜನೆ, ಅನಿಲ್ ಕುಮಾರ ತಬಲಾ ಸಾಥ ನೀಡುವರು. ಮಲ್ಲಮ್ಮನ ಪಾತ್ರದಲ್ಲಿ ಹೆಲನ್ ಮೈಸೂರು, ಮಹಾದೇವಿ ಪಾತ್ರದಲ್ಲಿ ಮಾಲಾಶ್ರೀ, ನಾಗಮ್ಮನ ಪಾತ್ರದಲ್ಲಿ ಚೈತ್ರಾ ಶಿಗ್ಗಾಂವಿ. ಪದ್ದವ್ವ ಮೋಹನ್ ಲಾಲ್ ಪಾತ್ರದಲ್ಲಿ, ಮಹೇಶ. ಮಲ್ಲಿಕಾರ್ಜುನ ಹಾಗೂ ವೇಮನ ಯೋಗಿ ಪಾತ್ರದಲ್ಲಿ ಚಿದಾನಂದ ಗವಾಯಿ, ಹೇಮರೆಡ್ಡಿಯ ಪಾತ್ರದಲ್ಲಿ ವೆಂಕಟೇಶ ಪ್ರಸಾದ, ಲಂಬಿಕಾ ಯೋಗಿ ಪಾತ್ರದಲ್ಲಿ ಕೃಷ್ಣ ಶಿಗ್ಗಾಂವಿ, ಚಿತ್ರರಂಜಿನಿ ಪಾತ್ರದಲ್ಲಿ ಸವಿತಾ ಅಭಿನಯಿಸಲಿದ್ದಾರೆ.

ಈ ಸಂಸ್ಥೆ ಸುಮಾರು 17 ವರ್ಷಗಳಿಂದ ಪೌರಾಣಿಕ ಭಕ್ತಿ ಪ್ರಧಾನ ಜಾನಪದ ಸಾಮಾಜಿಕ ಹಲವು ಪ್ರಕಾರಗಳ ಜನರಲ್ಲಿ ಜಾಗೃತಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡುತ್ತಿದೆ. ಈ ಸಂಸ್ಥೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಕೂಡ ಆಗಿದೆ. ಮಂಗಳಮುಖಿಯರ ಭಿಕ್ಷಾಟನೆಯನ್ನು ಬಿಡಿಸಿ ಅವರಿಗೆ ಕಲೆಯನ್ನು ಕಲಿಸಿ ಅವರನ್ನು ಕಲಾವಿದರನ್ನಾಗಿ ಮಾಡಿದ ಹೆಮ್ಮೆ ಕೂಡ ಇದೆ ಎಂದು ಕರ್ನಾಟಕ ನಾಟಕ, ಜಾನಪದ ಕಲಾವಿದರ ಅಭಿವೃದ್ಧಿ ಸಂಘದ ಹೆಲನ್ ಮೈಸೂರು ಹೇಳುತ್ತಾರೆ.

ಜನಪದ ನಾಟಕಗಳ ಪ್ರದರ್ಶನಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಕಾರ್ಯ ಮಾಡುತ್ತವೆ. ಪ್ರತಿಷ್ಠಾನವು ಕಳೆದ ಒಂದೂವರೆ ದಶಕದಿಂದ ಗ್ರಾಮೀಣ ಕಲಾವಿದರ ಪ್ರತಿಭೆಗೆ ವೇದಿಕೆ ಒದಗಿಸುತ್ತಿದೆ. ಹೇಮರೆಡ್ಡಿ ಮಲ್ಲಮ್ಮನಾಟಕದ ಪ್ರದರ್ಶನವು ಪ್ರೇಕ್ಷಕರಿಗೆ ಮನರಂಜನೆಯೊಂದಿಗೆ ಚಿಂತನೆಗೂ ಆಹ್ವಾನ ನೀಡುವ ವಿಶಿಷ್ಟ ಅನುಭವ ಆಗಲಿದೆ.

ಎಂ.ಎಸ್‌. ಪರಾಸ್‌, ಅಧ್ಯಕ್ಷರು ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ