ಮುಂಬರುವ ಬಜೆಟ್ ಅಧಿವೇಶನದಲ್ಲಿ ಎಲ್ಲ ರಂಗಗಳಲ್ಲಿಯೂ ಸಂಪೂರ್ಣ ಒಳಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ತುಮಕೂರುಮುಂಬರುವ ಬಜೆಟ್ ಅಧಿವೇಶನದಲ್ಲಿ ಎಲ್ಲ ರಂಗಗಳಲ್ಲಿಯೂ ಸಂಪೂರ್ಣ ಒಳಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.ನಗರದ ಟೌನ್‌ಹಾಲ್‌ನಲ್ಲಿ ಸಮಾವೇಶಗೊಂಡ ಸಾವಿರಾರು ಒಳಮೀಸಲಾತಿ ಹೋರಾಟ ಸಮಿತಿಯ ಸದಸ್ಯರು, ಬಿ.ಜಿ.ಎಸ್ ವೃತ್ತದಿಂದ ಅಶೋಕ ರಸ್ತೆಯ ಮೂಲಕ ಚರ್ಚ್ ಸರ್ಕಲ್, ಕೋಡಿ ಸರ್ಕಲ್ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ಜಿಲ್ಲಾಧಿಕಾರಿ ಶುಭ ಕಲ್ಯಾಣ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಡಾ.ವೈ.ಕೆ.ಬಾಲಕೃಷ್ಣಪ್ಪ,ಮಾದಿಗ ಸಮುದಾಯ ಕಳೆದ 35 ವರ್ಷಗಳ ನಿರಂತರ ಹೋರಾಟದ ಫಲವಾಗಿ ಸುಪ್ರಿಂಕೋರ್ಟಿನ 7 ನ್ಯಾಯಾಧೀಶರ ಪೀಠದ ತೀರ್ಪಿನಂತೆ, ರಾಜ್ಯ ಸರಕಾರ ನ್ಯಾ.ನಾಗಮೋಹನ್‌ದಾಸ್ ಅವರ ಸಮಿತಿ ವರದಿಯನ್ನು ಆಧರಿಸಿ ಒಳಮೀಸಲಾತಿಯನ್ನು ಘೋಷಣೆ ಮಾಡಿದೆ. ನಾವು ಯಾರ ಪಾಲನ್ನು ಕೇಳುತ್ತಿಲ್ಲ ನಮ್ಮ ಪಾಲಿನ ಹಕ್ಕನ್ನುಎಲ್ಲಾರಂಗದಲ್ಲಿಯೂ ನೀಡಿ ಎಂದು ಕೇಳುತ್ತಿದ್ದೇವೆ. ಇದು ನಮ್ಮ ನ್ಯಾಯ ಸಮ್ಮತ ಬೇಡಿಕೆಯಾಗಿದೆ. ಮಾದಿಗರು ಮತ್ತು ಹೊಲೆಯರ ಮೇಲೆ ರಾಜ್ಯ ಸರಕಾರ ಪರಸ್ವರ ದೋಷಾರೋಪಣೆ ಮಾಡುವುದರನ್ನು ಬಿಟ್ಟು, ಸುಪ್ರಿಂಕೋರ್ಟಿನ ತೀರ್ಪಿನ ಅನ್ವಯ ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ ಎಲ್ಲಾ 101 ಜಾತಿಗಳಿಗೂ ಸಾಮಾಜಿಕ ನ್ಯಾಯಕಲ್ಪಿಸುವ ನಿಟ್ಟಿನಲ್ಲಿ ಈ ಬಜೆಟ್‌ಅಧಿವೇಶನದಲ್ಲಿ ಸಂಪೂರ್ಣ ಒಳಮೀಸಲಾತಿಗೆ ಜಾರಿಗೆ ಆಗ್ರಹಿಸಬೇಕು. ನಮ್ಮ ತಾಳ್ಮೆ ಪರೀಕ್ಷೆ ಮಾಡಲು ಸರ್ಕಾರ ಹೋಗಬಾರದು ಎಂಬ ಎಚ್ಚರಿಕೆಯನ್ನು ನೀಡಿದರು.
ಕರ್ನಾಟಕ ಮಾದಾರ ಮಹಾಸಭಾದ ಜಿಲ್ಲಾಧ್ಯಕ್ಷ ವೈ.ಎಚ್.ಹುಚ್ಚಯ್ಯ ಮಾತನಾಡಿ, ಕಳೆದ 35 ವರ್ಷಗಳ ಹಿಂದೆ ಪ್ರೊ,.ಬಿ.ಕೃಷ್ಣಪ್ಪನವರ ದಲಿತ ಸಂಘರ್ಷ ಸಮಿತಿ, ಮಾದಿಗ ದಂಡೋರ ಹಾಗೂ ಇನ್ನಿತರ ಸಂಘಟನೆಗಳ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಾ ಬಂದ ಪರಿಣಾಮ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ಪ್ರಾಣಾಳಿಕೆಯಲ್ಲಿ ಈ ವಿಷಯ ಸೇರಿಸಿ, ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿವೆ ಎಂದರು.ಹಿರಿಯರಾದ ಕೆ.ದೊರೆರಾಜು ಮಾತನಾಡಿ, ಸುಪ್ರಿಂಕೋರ್ಟಿನ ಆದೇಶದ ಅನ್ವಯ ನ್ಯಾ.ನಾಗಮೋಹನ್‌ದಾಸ್ ಸಮಿತಿ ರಚಿಸಿ, ಅದರ ವರದಿಯನ್ನು ಪಡೆದುಕೊಂಡು,ಪರಿಶಿಷ್ಟ ಜಾತಿಗಳನ್ನು ಜನಸಂಖ್ಯೆ ಮತ್ತು ಹಿಂದುಳಿದಿರುವಿಕೆಯ ಆಧಾರದಲ್ಲಿ ಮಾಡಿದ ವರ್ಗೀಕರಣವನ್ನುಒಪ್ಪಿಕೊಂಡಿರುವ ಸರ್ಕಾರ ಅದನ್ನು ಜಾರಿಗೆ ತರಲು ಮೀನಾಮೇಷ ಎಣಿಸುತ್ತಿದೆ. ಬೊಮ್ಮಾಯಿ ಸರ್ಕಾರ ಹೆಚ್ಚು ಮಾಡಿದ ಮೀಸಲಾತಿ ಪ್ರಮಾಣ ಹಾಗೂ ಒಳಮೀಸಲಾತಿಯನ್ನು ಸಂವಿಧಾನದ 9ನೇ ಶೆಡ್ಯುಲ್‌ಗೆ ಸೇರಿಸುವುದು. ಶಾಶ್ವತ ಆಯೋಗ ರಚನೆ ಮುಂತಾದ ವಿಚಾರಗಳನ್ನು ಸರ್ಕಾರ ಬಜೆಟ್ ಅಧಿವೇಶನದಲ್ಲಿ ಜಾರಿಗೆ ತರುವ ಭರವಸೆ ನೀಡಬೇಕು. ಒಳಮೀಸಲಾತಿ ವಿಷಯ ಇಟ್ಟುಕೊಂಡು 2028 ರ ಚುನಾವಣೆಯ ಗೆಲುವಿನ ಕನಸು ಕಾಣುವುದನ್ನು ಬಿಟ್ಟು, ಸಾಮಾಜಿಕ ನ್ಯಾಯಕ್ಕಾಗಿ ಹಾತೊರೆಯುತ್ತಿರುವ ಸಮುದಾಯಕ್ಕೆ ನ್ಯಾಯ ಒದಗಿಸಿ ಎಂದು ಆಗ್ರಹಿಸಿದರು.ಜಿ.ಪಂ.ಮಾಜಿ ಸದಸ್ಯಕೆಂಚಮಾರಯ್ಯ ಮಾತನಾಡಿ ದರು. ಈ ವೇಳೆ ಮಾಜಿ ಶಾಸಕರಾದ ಗಂಗಹನುಮಯ್ಯ, ಹೋರಾಟಗಾರರಾದ ಡಾ.ಅರುಂಧತಿ, ಪಾವಗಡ ಶ್ರೀರಾಮ ಸೇರಿದಂತೆ ಹಲವರು ಮಾತನಾಡಿದರು. ಪ್ರತಿಭಟನೆಯಲ್ಲಿ ಮುಖಂಡರಾದ ವಾಲೆಚಂದ್ರಯ್ಯ, ಹನುಮಂತರಾಯಪ್ಪ, ಕೊಟ್ಟಶಂಕರ್,ರಂಗಸ್ವಾಮಯ್ಯ ಸಿದ್ದಾಪುರ,ದೊಡ್ಡೇರಿಕಣಿಮಯ್ಯ,ನರಸೀಯಪ್ಪ, ಕೊಡಿಯಾಲ ಮಹದೇವ್,ಉದ್ಯಮಿ ಡಿ.ಟಿ.ವೆಂಕಟೇಶ್,ಹೊಳಕಲ್ಲು ಅಂಜನಪ್ಪ,ಸಿ.ಗಂಗರಾಜು,ಡಾ.ಲಕ್ಷ್ಮಿಕಾಂತ್,ನವೀನ್ ಪೂಜಾರಹಳ್ಳಿ,ಶಿರಾ ರಾಜಸಿಂಹ, ಕುಣಿಗಲ್ ಶಿವಶಂಕರ್ ಸೇರಿದಂತೆ ಸಾವಿರಾರುಜನರು ಪಾಲ್ಗೊಂಡಿದ್ದರು.