ಚನ್ನಪಟ್ಟಣ ತಾಲೂಕನ್ನು ಸಂಪೂರ್ಣ ನೀರಾವರಿ ಮಾಡುವೆ

| Published : Jul 29 2025, 01:01 AM IST

ಸಾರಾಂಶ

ಚನ್ನಪಟ್ಟಣ: ತಾಲೂಕಿನ ಗಡಿ ಗ್ರಾಮವಾದ ಭೂಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮೆಣಸಿಗನಹಳ್ಳಿ ಗ್ರಾಮದಲ್ಲಿ ಮೆಣಸಿಗನಹಳ್ಳಿ ಹೊಸ ಕೆರೆಗೆ ೧.೭೦ ಕೋಟಿ ವೆಚ್ಚದಲ್ಲಿ ಕಣ್ವ-ಶಿಂಷಾ ಯೋಜನೆಯಡಿ ಪೈಪ್‌ಲೈನ್ ಮೂಲಕ ನೀರನ್ನು ತುಂಬಿಸುವ ಕಾಮಗಾರಿಗೆ ಶಾಸಕ ಸಿ.ಪಿ.ಯೋಗೇಶ್ವರ್ ಭೂಮಿಪೂಜೆ ನೆರೆವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.

ಚನ್ನಪಟ್ಟಣ: ತಾಲೂಕಿನ ಗಡಿ ಗ್ರಾಮವಾದ ಭೂಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮೆಣಸಿಗನಹಳ್ಳಿ ಗ್ರಾಮದಲ್ಲಿ ಮೆಣಸಿಗನಹಳ್ಳಿ ಹೊಸ ಕೆರೆಗೆ ೧.೭೦ ಕೋಟಿ ವೆಚ್ಚದಲ್ಲಿ ಕಣ್ವ-ಶಿಂಷಾ ಯೋಜನೆಯಡಿ ಪೈಪ್‌ಲೈನ್ ಮೂಲಕ ನೀರನ್ನು ತುಂಬಿಸುವ ಕಾಮಗಾರಿಗೆ ಶಾಸಕ ಸಿ.ಪಿ.ಯೋಗೇಶ್ವರ್ ಭೂಮಿಪೂಜೆ ನೆರೆವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಗ್ರಾಮಕ್ಕೆ ಈ ಹಿಂದೆಯೇ ನಾನು ಹೊಸಕೆರೆ ನಿರ್ಮಾಣ ಮಾಡಿಸಿದ್ದೆ. ಅಂದು ಪೈಪ್‌ಲೈನ್ ಮಾಡುವ ಕ್ರಿಯಾಯೋಜನೆ ರೂಪಿಸಿದ ವೇಳೆ ನಾನು ಶಾಸಕ ಸ್ಥಾನದಿಂದ ಕೆಳಗಿಳಿದೆ. ಅಂದಿನಿಂದ ಈ ಕೆರೆಗೆ ಪೈಪ್‌ಲೈನ್ ಮಾಡಲು ಆಗಿರಲಿಲ್ಲ. ನೀರಾವರಿ ಸೌಲಭ್ಯದಿಂದ ಈ ಗ್ರಾಮ ವಂಚಿತವಾಗಿತ್ತು. ಈ ಭಾಗದಲ್ಲಿ ಕುಡಿಯುವ ನೀರಿಗೂ ಬಹಳ ತೊಂದರೆ ಆಗುತ್ತಿತ್ತು. ಈ ಭಾಗದಲ್ಲಿ ಭೂ ಪ್ರದೇಶ ಹೆಚ್ಚಿದ್ದು ಈ ಭಾಗದ ಪ್ರಮುಖ ಬೆಳೆಯಾದ ವೀಳ್ಯದೆಲೆ, ರೇಷ್ಮೆ ಬೆಳೆ, ಹೈನೋದ್ಯಮದ ಇಳುವರಿ ಸಂಪೂರ್ಣ ಕುಂಠಿತವಾಗಿತ್ತು ಎಂದು ತಿಳಿಸಿದರು.

ಇದೀಗ ಶಿಂಷಾ-ಕಣ್ವ ಕುಡಿನೀರು ಯೋಜನೆಯ ಎರಡನೇ ಹಂತದ ಯೋಜನೆಯಲ್ಲಿ ೧.೭೦ ಕೋಟಿ ಅನುದಾನದಲ್ಲಿ ವಿಠಲೇನಹಳ್ಳಿದಿಂದ ಪೈಪ್‌ಲೈನ್ ಮೂಲಕ ಮೆಣಸಿಗನಹಳ್ಳಿ ಹೊಸ ಕೆರೆಗೆ ನೀರನ್ನು ತುಂಬಿಸಲಾಗುವುದು. ಬಳಿಕ ಗ್ರಾಮದ ಕೆಳಗಿರುವ ಎರಡು ಕೆರೆಗಳಿಗೆ ನೀರನ್ನು ತುಂಬಿಸಲು ಕ್ರಮ ಕೈಗೊಂಡು ಈ ಭಾಗದಲ್ಲಿ ಸಂಪೂರ್ಣ ನೀರಾವರಿ ಮಾಡಲಾಗುವುದು ಎಂದು ತಿಳಿಸಿದರು.

ಇಗ್ಗಲೂರು ಬ್ಯಾರೇಜ್‌ಗೆ ಸತ್ತೇಗಾಲ ನೀರಾವರಿ ಯೋಜನೆಯಿಂದ ೩.೩ ಟಿಎಂಸಿ ನೀರು ಬರುತ್ತದೆ. ತಾಲೂಕಿನ ಎಲ್ಲಾ ಕೆರೆಗಳಿಗೆ ನೀರನ್ನು ತುಂಬಿಸುವ ನಿಟ್ಟಿನಲ್ಲಿ ಕಣ್ವಾ-ಶಿಂಷಾ ಯೋಜನೆಯ ಪೈಪ್‌ಲೈನ್‌ಅನ್ನು ಎರಡು ಪ್ರತ್ಯೇಕ ಲೈನ್‌ಗಳನ್ನಾಗಿ ಮಾಡಿದ್ದು, ಹೆಚ್ಚು ಪ್ರೆಷರ್‌ನಲ್ಲಿ ನೀರು ಬರುವಂತೆ ಆಧುನೀಕರಣ ಮಾಡಲಾಗಿದೆ. ಈ ನಿಟ್ಟಿನಲ್ಲಿ ತಾಲೂಕಿನ ಎಲ್ಲಾ ಕೆರೆಗಳಿಗೆ ನೀರನ್ನು ತುಂಬಿಸಿ ತಾಲ್ಲೂಕನ್ನು ಸಂಪೂರ್ಣ ನೀರಾವರಿಯನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.

ಕಳೆದ ವಿಧಾನಸಭಾ ಉಪಚುನಾವಣೆಯಲ್ಲಿ ಈ ಗ್ರಾಮದಲ್ಲಿ ಪ್ರಚಾರಕ್ಕೆ ಬಂದಿದ್ದ ವೇಳೆ ನನ್ನನ್ನು ಪಕ್ಷಾತೀತವಾಗಿ ಆಶೀರ್ವಾದಿಸಿ, ಕೆರೆಗೆ ಪೈಪ್‌ಲೈನ್ ನೂರು ತುಂಬಿಸಿ ಸಮಸ್ಯೆ ಪರಿಹಾರ ಮಾಡಿಕೊಡುವುದಾಗಿ ಭರವಸೆ ನೀಡಿದ್ದೆ. ಇದೀಗ ಭರವಸೆ ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದರು.

ಸಂದರ್ಭದಲ್ಲಿ ಬಮೂಲ್ ನಿರ್ದೇಶಕ ಲಿಂಗೇಶ್‌ಕುಮಾರ್‌, ಭೂಹಳ್ಳಿ ಗ್ರಾಪಂ ಅಧ್ಯಕ್ಷ ಭೈರಪ್ಪ, ಕಾವೇರಿ ನೀರಾವರಿ ನಿಗಮದ ಎಇಇ ಸುರೇಶ್‌ಕುಮಾರ್. ತಾಪಂ ಇಒ ಸಂದೀಪ್, ಸಣ್ಣ ನೀರಾವರಿ ಇಲಾಖೆ ಎಇ ನೂತನ್, ಕುಕ್ಕಟ ಮಹಾ ಮಂಡಳಿ ಮಾಜಿ ಅಧ್ಯಕ್ಷ ಡಿ.ಕೆ.ಕಾಂತರಾಜು, ಮಾಜಿ ಅಧ್ಯಕ್ಷರಾದ ರಾಜಣ್ಣ, ನಿಂಗೇಗೌಡ, ಗ್ರಾಪಂ ಸದಸ್ಯರಾದ ಗೋವಿಂದೇಗೌಡ, ಚಂದ್ರೇಗೌಡ, ಸಿದ್ದರಾಜು, ರೈತ ಮುಖಂಡ ಸಿ.ಪುಟ್ಟಸ್ವಾಮಿ, ಮುಖಂಡರಾದ ವಿ.ಟಿ.ಶ್ರೀನಿವಾಸ್. ಪಿ.ಡಿ.ರಾಜು, ಅರಳಾಳುಸಂದ್ರ ಶಿವಪ್ಪ ಇತರರಿದ್ದರು.

ಪೊಟೋ೨೮ಸಿಪಿಟಿ೧:

ಚನ್ನಪಟ್ಟಣ ತಾಲೂಕಿನ ಮೆಣಸಿಗನಹಳಿ ಕೆರೆಗೆ ಕಣ್ವ-ಶಿಂಷಾ ಯೋಜನೆಯಡಿ ಪೈಪ್‌ಲೈನ್ ಮೂಲಕ ನೀರನ್ನು ತುಂಬಿಸುವ ಕಾಮಗಾರಿಗೆ ಶಾಸಕ ಯೋಗೇಶ್ವರ್ ಭೂಮಿಪೂಜೆ ನೆರೆವೇರಿಸಿದರು.