ಅಕ್ಟೋಬರ್ ಅಂತ್ಯದೊಳಗೆ ಜೆಜೆಎಂ ಕಾಮಗಾರಿ ಪೂರ್ಣಗೊಳಿಸಿ

| Published : Oct 10 2025, 01:00 AM IST

ಅಕ್ಟೋಬರ್ ಅಂತ್ಯದೊಳಗೆ ಜೆಜೆಎಂ ಕಾಮಗಾರಿ ಪೂರ್ಣಗೊಳಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಪಂಚಾಯಿತಿ ಸಿಇಒ ಡಾ.ಆಕಾಶ್ ಸೂಚನೆ । ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಪಿಡಿಒಗಳೊಂದಿಗೆ ಸಂವಾದ

ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು

ಅಕ್ಟೋಬರ್ ಅಂತ್ಯದೊಳಗೆ ಜೆಜೆಎಂ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ನೀರು ಸರಬರಾಜು ಮಾಡುವಲ್ಲಿ ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆಕಾಶ್ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಪಿಡಿಒಗಳೊಂದಿಗೆ ನಡೆದ ಗ್ರಾಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಲೂಕಿನ 16 ಗ್ರಾಪಂಗಳ ಹಳ್ಳಿಗಳಲ್ಲಿ ಜೆಜೆಎಂ ಕಾಮಗಾರಿ ಆರಂಭಗೊಂಡು ವರ್ಷಗಳೇ ಕಳೆದರೂ ಕೆಲ ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ. ಕೆಲವೆಡೆ ಅಗೆದ ರಸ್ತೆಯನ್ನು ಇಂದಿಗೂ ದುರಸ್ತಿಗೊಳಿಸಲು ಆಗಿಲ್ಲ. ಸಂಬಂಧಿಸಿದ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಪ್ರತಿ ದಿನ ಹಳ್ಳಿಗಳಿಗೆ ತೆರಳಿ ಗುತ್ತಿಗೆದಾರರಿಗೆ ಸ್ಪಷ್ಟ ಸೂಚನೆ ನೀಡಿ ಕಾಮಗಾರಿ ಪೂರ್ಣಗೊಳಿಸಲು ಕ್ರಮವಹಿಸಬೇಕು. ಎಲ್ಲಿ ಸಮಸ್ಯೆ ಇದೆಯೊ ಅದನ್ನು ಸರಿ ಪಡಿಸಿ ಇದೇ ತಿಂಗಳು ಅಂತ್ಯಕ್ಕೆ ನೀರು ಸರಬರಾಜು ಮಾಡಿ ಡಿಸೆಂಬರ್ ತಿಂಗಳಿಂದ ಕಂದಾಯ ವಸೂಲಿಗೆ ಮುಂದಾಗಬೇಕು ಎಂದು ಖಡಕ್ ಸೂಚನೆ ನೀಡಿದರು.

ಪ್ರಸಕ್ತ ಆರ್ಥಿಕ ವರ್ಷ ಕಳೆದು 6 ತಿಂಗಳು ಕಳೆದರೂ ನರೇಗಾ ಯೋಜನೆ ನಿರೀಕ್ಷಿತ ಮಟ್ಟದ ಸಾಧನೆಯಾಗಿಲ್ಲ. ಅದರಲ್ಲೂ ಬಿಜಿಕೆರೆ, ಚಿಕ್ಕೇರೆಹಳ್ಳಿ, ಅಶೋಕ ಸಿದ್ದಾಪುರ ಗ್ರಾಮಗಳಲ್ಲಿ ನಿರೀಕ್ಷಿತ ಮಟ್ಟದ ಗುರಿ ತಲುಪಿಲ್ಲ ಕಾರಣ ಏನೆಂದು ಸಿಇಒ ಆಕಾಶ್ ಪ್ರಶ್ನಿಸಿದಾಗ ನರೇಗಾ ಕಾಮಗಾರಿ ವೇಳೆ ಪ್ರತಿ ದಿನ ಕೂಲಿಕಾರರನ್ನು ಬೆಳಗ್ಗೆ ಮತ್ತು ಮದ್ಯಾಹ್ನ ಎರಡೂ ಬಾರಿ ಜಿಪಿಎಸ್ ಪೋಟೋ ನೀಡಬೇಕಿರುವ ಕಾರಣ ಕೆಲವೊಮ್ಮೆ ಬೆಳಗ್ಗೆ ಬಂದವರಿಗೆ ಸಂಜೆ ಆರೋಗ್ಯ ಸಮಸ್ಯೆಯಾಗಿ ಬಾರದಿದ್ದರೆ ಅಂದು ಅವರಿಗೆ ಕೂಲಿ ನೀಡಲು ಬರುವುದಿಲ್ಲ ಹಾಗಾಗಿ ನರೇಗಾ ಕೆಲಸಕ್ಕೆ ಹಿನ್ನೆಡೆಯಾಗಿದೆ ಎಂದು ಬಿಜಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಜಯಣ್ಣ ಹೇಳಿದರು.

ಪ್ರತಿಕ್ರಿಯಿಸಿದ ಸಿಇಒ ಉದ್ಯೋಗ ಖಾತ್ರಿಯಲ್ಲಿ ಶಾಲಾ ಕಂಪೌಂಡ್, ರಸ್ತೆ, ಚರಂಡಿ ಸೇರಿದಂತೆ ಸಮುದಾಯ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು ಎಂದರು.

ತಾಲೂಕಿನಲ್ಲಿ 16 ಗ್ರಾಪಂಗಳ ಪೈಕಿ ಕಸ ವಿಲೇವಾರಿ ಘಟಕಗಳ ಇಂದಿಗೂ ಆರಂಭವಾಗಿದೆ. ಘಟಕಗಳ ಸುತ್ತ ಮುಳ್ಳಿನ ಗಿಡಗಳು ಬೆಳೆದು ಹಾಳಾಗುವತ್ತ ಸಾಗಿವೆ ಪಿಡಿಒಗಳು ಕೂಡಲೇ ಘಟಕಗಳು ಆರಂಭಿಸಬೇಕು ಎಂದಾಗ ಕಸ ವಿಲೇವಾರಿ ಘಟಕಗಳಲ್ಲಿ ಕೆಲಸ ಮಾಡಲು ಗುತ್ತಿಗೆ ಪಡೆದ ಸ್ವ ಸಹಾಯ ಸಂಘದ ಮಹಿಳೆಯರು ಲಾಭ ಸಿಗುತ್ತಿಲ್ಲ ಎನ್ನುವ ಕಾರಣದಿಂದ ಬರುತ್ತಿಲ್ಲ ಇದರಿಂದ ಘಟಕಗಳ ಆರಂಭಕ್ಕೆ ತೊಂದರೆಯಾಗಿದೆ ಎಂದು ಕೆಲ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಸಮಸ್ಯೆ ತೋಡಿಕೊಂಡರು.

ಇದಕ್ಕೆ ಉತ್ತರಿಸಿದ ಸಿಇಒ ಘಟಕಗಳ ಆರಂಭಕ್ಕೆ ಕೇವಲ ಸ್ವಹಾಯ ಸಂಘದ ಸದಸ್ಯರನ್ನೇ ಕಾಯದೇ 15ನೇ ಹಣಕಾಸು ಯೋಜನೆಯನ್ನು ಬಳಸಿಕೊಂಡು ಕಸ ವಿಲೇವಾರಿಗೆ ಕ್ರಮವಹಿಸಬೇಕು. ಅಲ್ಲದೆ ನಿರೀಕ್ಷಿತ ಪ್ರಮಾಣದಲ್ಲಿ ಕಂದಾಯ ವಸೂಲಿಯಾಗದ ಪಂಚಾಯಿತಿಯವರು ಕಂದಾಯ ವಸೂಲಿಗೆ ಮುಂದಾಗಬೇಕು ಎಂದರು. ಹಳ್ಳಿಗಳಲ್ಲಿ ಪ್ರತಿ ಮನೆಗೆ ಶೌಚಾಲಯ ನಿರ್ಮಾಣಕ್ಕೆ ಮುಂದಾಗಬೇಕು. ಹಳ್ಳಿಯ ಜನರಿಗೆ ಬಯಲು ಶೌಚದಿಂದ ಆಗುವ ತೊಂದರೆಗಳ ಕುರಿತು ಜಾಗೃತಿ ಮೂಡಿಸಬೇಕು ಹಾಗೂ ಅಗತ್ಯವಿದ್ದರೆ ನರೇಗದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಕ್ರಿಯಾ ಯೋಜನೆ ಮಾಡಿಕೊಂಡು ಗ್ರಾಮೀಣ ಭಾಗದ ಸ್ವಚ್ಛತೆಗೆ ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ಗಾಯಿತ್ರಿ, ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ, ಇ.ಓ.ಹನುಮತಪ್ಪ ಇದ್ದರು.