ಕೆಕೆಆರ್‌ಡಿಬಿ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಮುಗಿಸಿ: ಸಚಿವ ತಂಗಡಗಿ

| Published : Nov 16 2024, 12:33 AM IST

ಕೆಕೆಆರ್‌ಡಿಬಿ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಮುಗಿಸಿ: ಸಚಿವ ತಂಗಡಗಿ
Share this Article
  • FB
  • TW
  • Linkdin
  • Email

ಸಾರಾಂಶ

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಕೊಪ್ಪಳ ಜಿಲ್ಲೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಮುಗಿಸಲು ಸಚಿವ ಶಿವರಾಜ ತಂಗಡಗಿ ಹೇಳಿದರು.

ಕೊಪ್ಪಳ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಕೊಪ್ಪಳ ಜಿಲ್ಲೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಮುಗಿಸಿ. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕೊಪ್ಪಳ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೆ.ಕೆ.ಆರ್.ಡಿ.ಬಿ. ಅನುದಾನಡಿ ಕೊಪ್ಪಳ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾದ 2018-19, 2019-20 ಮತ್ತು 2020-21ನೇ ಸಾಲಿನ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಇದರ ಜೊತೆಗೆ 2023-24ನೇ ಸಾಲಿನ ಮುಕ್ತಾಯ ಹಂತದಲ್ಲಿರುವ ಕಾಮಗಾರಿಗಳನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲು ಅನುಷ್ಠಾನಾಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳಬೇಕು ಎಂದರು.

ಆರಂಭವಾಗದಿರುವ ಕಾಮಗಾರಿಗಳ ಕುರಿತು ಯಾವುದೇ ಸಮಸ್ಯೆಗಳಿದ್ದರೆ ಕೂಡಲೇ ಅದನ್ನು ಸರಿಪಡಿಸಿ ಆ ಎಲ್ಲ ಕಾಮಗಾರಿಗಳೂ ಈ ಡಿಸೆಂಬರ್ ಮಾಹೆಯೊಳಗೆ ಪ್ರಾರಂಭಿಸಲು ತುರ್ತಾಗಿ ಕ್ರಮ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಯಾವುದೇ ಕಾಮಗಾರಿಗಳು ಅಪೂರ್ಣ ಅಥವಾ ಪ್ರಾರಂಭವಾಗದೇ ಬಾಕಿ ಉಳಿದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಸಚಿವರು ಸೂಚನೆ ನೀಡಿದರು.

2024-25ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮೈಕ್ರೋ ಮತ್ತು ಮ್ಯಾಕ್ರೋ ಯೋಜನೆಯ ಅನುದಾನದಡಿ ಕೊಪ್ಪಳ ಜಿಲ್ಲೆಗೆ ಮಂಜೂರಾದ ಎಲ್ಲ ಕಾಮಗಾರಿಗಳನ್ನು ಟೆಂಡರ್ ಕರೆದು ಅನುಮೋದನೆ ನೀಡಿ, ಅನುಷ್ಠಾನ ಕಾಮಗಾರಿಗಳನ್ನು ಡಿಸೆಂಬರ್ ಅಂತ್ಯದೊಳಗೆ ಪ್ರಾರಂಭಕ್ಕೆ ಕ್ರಮ ವಹಿಸಬೇಕು. ಯಾವುದೇ ಕಾರಣಕ್ಕೂ ಅನಗತ್ಯ ವಿಳಂಬ ಮಾಡಬಾರದು. ಕೆ.ಕೆ.ಆರ್.ಡಿ.ಬಿ. ಮಂಡಳಿಯ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಹೇಳಿದರು.

ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣವಾಗುತ್ತಿರುವ ರಂಗಮಂದಿರ ಮತ್ತು ಜಿಲ್ಲೆಯ ವಿವಿಧೆಡೆ ನಿರ್ಮಾಣವಾಗುತ್ತಿರುವ ಶಾಲಾ ಕೊಠಡಿಗಳು, ಆರೋಗ್ಯ ಕೇಂದ್ರಗಳು ಹಾಗೂ ಇತರೆ ಕಟ್ಟಡಗಳ ಲೋಕಾರ್ಪಣೆಗಳಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ನಮ್ಮ ಗಮನಕ್ಕೆ ತನ್ನಿ. ಕಾರಟಗಿ, ಕನಕಗಿರಿ ಹಾಗೂ ಕುಕನೂರು ತಾಲೂಕುಗಳಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ ಮೂರು ತಾಲೂಕುಗಳಲ್ಲಿ ಜಮೀನು ಗುರುತಿಸಲು ಆಯಾ ತಹಸೀಲ್ದಾರರು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡ್ಯೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಟಿ. ಲಿಂಗರಾಜು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರಿದ್ದರು.