ಸಾರಾಂಶ
ಕಾರವಾರ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ಅವರು ಶುಕ್ರವಾರ ಯಲ್ಲಾಪುರ ತಾಲೂಕಿನ ಚಂದಗುಳಿ, ಹಾಸಣಗಿ, ಕುಂದರಗಿ ಹಾಗೂ ನಂದೊಳ್ಳಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ, ಮಹಾತ್ಮ ಗಾಂಧಿ ನರೇಗಾ, ತಾಲೂಕು ಮತ್ತು ಗ್ರಾಪಂ ಅನುದಾನ, 14- 15ನೇ ಹಣಕಾಸು ಸೇರಿದಂತೆ ವಿವಿಧ ಯೋಜನೆಗಳಡಿ ಅಭಿವೃದ್ಧಿಪಡಿಸಲಾದ ಕಾಮಗಾರಿಗಳ ಪರಿಶೀಲಿಸಿದರು.
ಚಂದಗುಳಿ ಗ್ರಾಪಂ ವ್ಯಾಪ್ತಿಯ ಮಳಲಗಾಂವ ಶಾಲೆಯಲ್ಲಿ ನರೇಗಾದಲ್ಲಿ ನಿರ್ಮಿತ ಕಾಂಪೌಂಡ್ ಕಾಮಗಾರಿ ಸ್ಥಳಕ್ಕೆ ತೆರಳಿ ಕಾಮಗಾರಿ ಪ್ರಾರಂಭ, ಖರ್ಚು- ವೆಚ್ಚ, ಸೃಜಿಸಿದ ಮಾನವ ದಿನಗಳು, ಗ್ರಾಪಂ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹಣೆ ಕುರಿತು ಮಾಹಿತಿ ಪಡೆದು ಸ್ಥಳದಲ್ಲಿದ್ದ ಪಿಡಿಒಗೆ ಅಗತ್ಯ ಸೂಚನೆ ನೀಡಿದರು.ನಂತರ ಹಾಸಣಗಿ ಗ್ರಾಪಂ ಕಚೇರಿ, ಸಭಾಭವನ, ದಾಸ್ತಾನು ಕೊಠಡಿ, ಮಾಳಕೊಪ್ಪ ಗ್ರಾಮದ ಸ.ಕಿ.ಪ್ರಾ. ಶಾಲೆಯಲ್ಲಿ ನರೇಗಾದಡಿ ನಿರ್ಮಿತ ಶಾಲಾ ಶೌಚಾಲಯ ಹಾಗೂ ಕಾಂಪೌಂಡ್, ಒಳ್ಳೆಸರದಲ್ಲಿ ನರೇಗಾದಡಿ ನಿರ್ಮಿತ ಕೊಳವೆ ಬಾವಿ ಮರುಪೂರಣ ಘಟಕ ಕಾಮಗಾರಿ ಸ್ಥಳಕ್ಕೆ ಭೇಟಿನೀಡಿ ಕಾಮಗಾರಿಗಳ ಗುಣಮಟ್ಟ, ನರೇಗಾದಡಿ ಭರಿಸಲಾದ ಖರ್ಚು, ವೆಚ್ಚ, ಸೃಜಿಸಿದ ಮಾನವ ದಿನಗಳ ಮಾಹಿತಿ ಪಡೆದರು.ಬಾಚನಳ್ಳಿಯಲ್ಲಿ ಪಿಆರ್‌ಇಡಿಯಿಂದ ಅಭಿವೃದ್ಧಿಗೊಂಡು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಡೆಯುತ್ತಿರುವ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಸೂಕ್ತ ಮಾರ್ಗದರ್ಶನ ನೀಡಿದರು. ಬಳಿಕ ಕುಂದರಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾದಡಿ ಪ್ರಗತಿಯಲ್ಲಿರುವ ಹೊಸ ಗ್ರಾಪಂ ಕಟ್ಟಡ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಿದರು.
ನಂತರ ಕುಂದರಗಿಯ ಗ್ರಂಥಾಲಯ(ಅರಿವು) ಕೇಂದ್ರಕ್ಕೆ ತೆರಳಿ ಕೇಂದ್ರದಲ್ಲಿ ಶಾಲಾ ಮಕ್ಕಳೊಂದಿಗೆ ಮುಕ್ತವಾಗಿ ಚರ್ಚಿಸಿ ಮಕ್ಕಳ ಅನಿಸಿಕೆ, ಅಭಿಪ್ರಾಯ ಕೇಳಿದ ಸಿಇಒ ಅವರು ಮಕ್ಕಳ ಉತ್ತಮ ಭವಿಷ್ಯ ವೃದ್ಧಿಗಾಗಿ ಪ್ರಾರಂಭಿಸಿರುವ ಗ್ರಂಥಾಲಯಗಳ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.ಮೂರು ವರ್ಷದೊಳಗಿನ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಾರಂಭಿಸಲಾದ ಕೂಸಿನ ಮನೆ ಕೇಂದ್ರಕ್ಕೆ ತೆರಳಿ ಮಕ್ಕಳ ಹಾಜರಿ, ಸರ್ಕಾರದಿಂದ ಒದಗಿಸಲಾದ ಆಟಿಕೆ ಸಾಮಗ್ರಿಗಳು, ಆಹಾರ ವಿತರಣೆ ವೇಳಾಪಟ್ಟಿ ಕುರಿತು ಅಗತ್ಯ ಮಾಹಿತಿ ಪಡೆದುಕೊಂಡರು.ಕುಂದರಗಿ ಪಶು ಚಿಕಿತ್ಸಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದರು. ನಂದೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ.ಹಿ.ಪ್ರಾ. ಶಾಲೆಯಲ್ಲಿ ನರೇಗಾದಡಿ ನಿರ್ಮಿತ ಅಡುಗೆ ಕೋಣೆ ಹಾಗೂ ಸರ್ಕಾರಿ ಪ್ರೌಢಶಾಲೆಯಲ್ಲಿ ನರೇಗಾದಡಿ ನಿರ್ಮಿತ ಪಿಂಕ್ ಶೌಚಾಲಯ ಕಾಮಗಾರಿ ಸ್ಥಳಕ್ಕೆ ಭೇಟಿ ಪರಿಶೀಲಿಸಿದರು. ಜತೆಗೆ ಕವಡಿಕೆರೆಗೆ ಭೇಟಿ ನೀಡಿ ಕೆರೆಯಲ್ಲಿ ನಡೆಸಲಾಗುವ ಮೀನು ಸಾಕಾಣಿಕೆ ಪ್ರಕ್ರಿಯೆ ಹಾಗೂ ಕೆರೆಯ ಹೆಚ್ಚಿನ ಅಭಿವೃದ್ಧಿ ಕುರಿತು ಸಲಹೆ- ಸೂಚನೆ ನೀಡಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ಧನವಾಡಕರ, ನರೇಗಾ ಸಹಾಯಕ ನಿರ್ದೇಶಕ ಮಂಜುನಾಥ ಅಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ ಮತ್ತಿತರರು ಇದ್ದರು.