ನಾಗಬೆಟ್ಟ ಏತ ನೀರಾವರಿ ಸಂಪೂರ್ಣ ಪ್ರದೇಶ ಅಭಿವೃದ್ಧಿ ಮಾಡಿದ್ದೇನೆ. ಉಳಿದಿರುವುದು ಎರಡು ಕೆರೆ ಮಾತ್ರ. ಅವುಗಳನ್ನಾದರೂ ತುಂಬಿಸಿ ಎಂದು ವಿನಂತಿಸಿದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ನಾಗರಬೆಟ್ಟ ಏತ ನೀರಾವರಿ ಯೋಜನೆಗೆ ಗುದ್ದಲಿ ಪೂಜೆ ಮಾಡಿ ಹೋಗಿದ್ದರೂ ನಾನು ಅನುದಾನ ತಂದು ಯೋಜನೆ ಆರಂಭ ಮಾಡಿಸಿದೆ. ಚುನಾವಣೆ ನೀತಿ ಸಂಹಿತೆಯಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇನ್ನೂವರೆಗೂ ಬಾಕಿ ಕಾಮಗಾರಿ ಮಾಡಿಸಲು ಆಗುತ್ತಿಲ್ಲ ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗಬೆಟ್ಟ ಏತ ನೀರಾವರಿ ಸಂಪೂರ್ಣ ಪ್ರದೇಶ ಅಭಿವೃದ್ಧಿ ಮಾಡಿದ್ದೇನೆ. ಉಳಿದಿರುವುದು ಎರಡು ಕೆರೆ ಮಾತ್ರ. ಅವುಗಳನ್ನಾದರೂ ತುಂಬಿಸಿ ಎಂದು ವಿನಂತಿಸಿದರು.
ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ನಾನು ಶಾಸಕನಾಗಿದ್ದ ಅವಧಿಯಲ್ಲಿ ತಂದ ಅನುದಾನದಲ್ಲಿ ನಡೆಯುತ್ತಿವೆ. ಕಾಂಗ್ರೆಸ್ ಸರ್ಕಾರ ಬಂದು ಮೂರು ವರ್ಷವಾಯಿತು ಒಂದೇ ಒಂದು ಕೋಟಿ ರುಪಾಯಿ ಅನುದಾನ ಕೊಟ್ಟಿಲ್ಲ. ಕೊಟ್ಟಿದ್ದರೆ ದಾಖಲೆ ತೋರಿಸಲಿ. ನಾನು ಮಾಡಿಸಿದ ರಸ್ತೆಗಳನ್ನು ಒಡೆದು ಹಾಕುತ್ತಿದ್ದಾರೆ. ಇದನ್ನು ನೋಡಿಕೊಂಡು ಜನರು ನಿದ್ದೆ ಮಾಡುತ್ತಿದ್ದಾರಾ? ನಾನು ಕ್ಷೇತ್ರದಲ್ಲಿ ಗುಣಮಟ್ಟ ಕಾಮಗಾರಿಗಳು ನಡೆಯಲಿ ಎಂದು ಅನುದಾನ ತಂದರೆ, ಈಗೀನವರು ಅದರಲ್ಲಿ ದುಡ್ಡು ಹೊಡೆದು ಅಸಮರ್ಪಕ ಕಾಮಗಾರಿ ಮಾಡುತ್ತಿದ್ದಾರೆ. ಇದನ್ನೇಲ್ಲ ನೀವು ಪ್ರಶ್ನಿಸಬೇಕು ಎಂದು ಜನರಿಗೆ ಕರೆ ಕೊಟ್ಟರು.ಮುದ್ದೇಬಿಹಾಳ ತಾಲೂಕಿನಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಲ್ಯಾಂಡ್ ಆರ್ಮಿರಿಗೆ ಕೊಟ್ಟು ಶೇ.50 ಲೂಟಿ ಹೊಡೆಯುತ್ತಿದ್ದಾರೆ. ಗುತ್ತಿಗೆಗಾರರಿಗೆ ಕೆಲಸವಿಲ್ಲದಂತೆ ಮಾಡಿದ್ದಾರೆ. ಇಷ್ಟಾದರೂ ಗುತ್ತಿಗೆದಾರು ಸುಮ್ಮನಿದ್ದಾರೆ. ಮೊನ್ನೆ ಬಂದ ಗೋವಿಂದರಾವ್ ವರದಿಯಲ್ಲಿಯೂ ಮುದ್ದೇಬಿಹಾಳ ಹಿಂದುಳಿದ ತಾಲೂಕಿಗೆ ಸೇರಿದೆ. ತಾಲೂಕಿನ ಜನತೆ ಎಚ್ಚೆತ್ತುಕೊಳ್ಳಬೇಕು. ನಿಷ್ಕ್ರಿಯ ಜನಪ್ರತಿನಿಧಿ ಆಯ್ಕೆ ಮಾಡಿದರೆ ನೀವು ಕಷ್ಟ ಅನುಭವಿಸುತ್ತೀರಿ, ನಿಮ್ಮ ಮಕ್ಕಳಿಗೆ ಶಾಪಕೊಟ್ಟು ಹೋಗುತ್ತಿರಿ. ಕ್ಷೇತ್ರದಲ್ಲಿ ನಡೆಯುತ್ತಿರುವ ಕಳಪೆ ಕಾಮಗಾರಿಗಳು ಜನರೇ ನಿಲ್ಲಬೇಕು ಎಂದು ಒತ್ತಾಯಿಸಿದರು.
₹2.86 ಕೋಟಿ ಕ್ರೀಡಾಂಗಣಕ್ಕೆ, ಪ್ರತಿಯೊಂದು ಸರ್ಕಾರಿ ಶಾಲೆಗೆ ₹1 ಕೋಟಿ, ಉರ್ದು ಶಾಲೆ ಅಭಿವೃದ್ಧಿಗೆ ಅನುದಾನ ಹೀಗೆ ಯಾವುದೇ ಮತ, ಜಾತಿ ನೋಡದೆ ಸರ್ವ ಜನಾಂಗದ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ. ಕ್ಷೇತ್ರಕ್ಕಾಗಿ ನಾನು ಮಾಡಿರುವ ಸಹಾಯ ಬೇರೆಕಡೆ ಮಾಡಿದ್ದರೆ ಸಾಯೋವರೆಗೂ ನನ್ನನ್ನೇ ಶಾಸಕನನ್ನಾಗಿ ಮಾಡುತ್ತಿದ್ದರು. ನಾನು ಅಭಿವೃದ್ಧಿಯಲ್ಲಿ ರಾಜಕಾರಣ ಮಾಡಿಲ್ಲ. ಮಾಡೋದು ಇಲ್ಲ. ಎಲ್ಲ ಜನಾಂಗದವರಿಗೂ ಸಹಾಯ, ಸಹಕಾರ ನೀಡಿದ್ದೇನೆ. ಆದರೂ ಜನರು ಕೈಹಿಡಿಯಲಿಲ್ಲ. ಇನ್ನಾದರೂ ಕ್ಷೇತ್ರದ ಜನತೆ ಎಚ್ಚೆತ್ತುಕೊಳ್ಳಬೇಕು. ಕ್ಷೇತ್ರದ ಪ್ರತಿ ಮನೆಗೂ ಹೋಗುವೆ. ಅಧಿಕಾರಿಗಳು, ಶಾಸಕರು ಇನ್ನಾದರೂ ಎಚ್ಚೆತ್ತುಕೊಂಡು ಅಭಿವೃದ್ಧಿ ಕಾರ್ಯ ಮಾಡಬೇಕು ಎಂದರು.ನರೇಂದ್ರ ಮೋದಿ ಅವರು ಪ್ರಧಾನಿ ಆದ ನಂತರ ಭಾರತ ಆರ್ಥಿಕಾಭಿವೃದ್ಧಿ ಹೊಂದುತ್ತಿದೆ. 2013-14ರಲ್ಲಿ ಭಾರತದ ಬಜೆಟ್ ₹13 ಲಕ್ಷ ಕೋಟಿ, ಇದೀಗ ಗಾತ್ರ ₹53.23 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದರೊಟ್ಟಿಗೆ ವಿದೇಶಿ ಹೂಡಿಕೆ, ಕೃಷಿ, ಗ್ರಾಮೀಣಾಭಿವೃದ್ಧಿ, ರಕ್ಷಣೆಗೆ ಕೇಂದ್ರ ಸರ್ಕಾರ ಒತ್ತು ನೀಡಿದೆ. ಜಗತ್ತಿಗೆ ಭಾರತ ವಿಶ್ವಗುರುವಾಗುವ ಕಾಲ ಸನ್ನಿಹಿತವಾಗಿದೆ ಎಂದರು.
ಗೋಷ್ಠಿಯಲ್ಲಿ ಪ್ರಭುಕಡಿ, ಸಂಜೀವ ಬಾಗೇವಾಡಿ, ಗಿರೀಶಗೌಡ ಪಾಟೀಲ, ಮದನಸ್ವಾಮಿ ಹಿರೇಮಠ, ಅಶೋಕ ಚಿನಿವಾರ, ಪರಶುರಾಮ ನಾಲತವಾಡ, ಸಂಗನಗೌಡ ಪಾಟೀಲ, ಬಸಯ್ಯ ನಂದಿಕೇಶ್ವರಮಠ, ಹುಲಗಪ್ಪಕಿಲ್ಲಾರಟ್ಟಿ, ನಾಗೇಶ ಕವಡಿಮಟ್ಟಿ, ಪುನೀತ ಹಿಪ್ಪರಗಿ, ನಿಖಿಲ ಮಲಗಲದಿನ್ನಿ, ಶಿವು ಬಿರಾದಾರ, ಅನಿಲ ರಾಠೋಡ, ಶಿವು ಲದ್ದಿಮಠ, ಗೌರಮ್ಮ ಹುನಗುಂದ, ಕಾವೇರಿಕುಂಬಾರ, ಪ್ರೀತಿಕುಂಬಾರ, ರೇಖಾ ಕೊಂಡಗೋಣಿ ಇದ್ದರು.