ಸಾರಾಂಶ
ಕೃಷ್ಣ ಎನ್. ಲಮಾಣಿ
ಹೊಸಪೇಟೆ: ಕನ್ನಡ ನಾಡಿನ ಬಯಲಾಟ ಕಲೆಯನ್ನು ಅಯೋಧ್ಯೆಯಲ್ಲಿ ವಿಜಯನಗರದ ಕಲಾವಿದರು ಅನಾವರಣಗೊಳಿಸಿದ್ದಾರೆ. ಬಯಲಾಟ ಕಲೆಯ ಮೂಲಕ ಸಂಪೂರ್ಣ ರಾಮಾಯಣವನ್ನು ಶ್ರೀರಾಮನ ತವರೂರಿನಲ್ಲಿ ಪ್ರದರ್ಶನ ನೀಡಿ ಜನಮೆಚ್ಚುಗೆ ಗಳಿಸಿದ್ದಾರೆ.ಹೊಸಪೇಟೆಯಿಂದ ಜ. 11ರಂದು ಕಲಾವಿದ ಸತ್ಯನಾರಾಯಣ ಮತ್ತು ತಂಡ ಅಯೋಧ್ಯೆಗೆ ತೆರಳಿದ್ದು, ಅಲ್ಲಿ ಬಯಲಾಟ ಕಲೆಯ ಮೂಲಕ ಸಂಪೂರ್ಣ ರಾಮಾಯಣ ಕಟ್ಟಿಕೊಟ್ಟಿದ್ದಾರೆ. ಜ. 14ರಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ನಡೆಸಿದ ಸಮಾರಂಭ ಮುನ್ನ ಶೋಭಾಯಾತ್ರೆಯಲ್ಲಿ ಗಮನ ಸೆಳೆದಿದ್ದಾರೆ. ಕನ್ನಡ ದೇಸಿ ಕಲೆ ಸೊಗಡಿನಲ್ಲಿ ರಾಮಾಯಣ ಕಥನವನ್ನು ಕಟ್ಟಿಕೊಟ್ಟಿದ್ದಾರೆ.
ತುಳಸಿ ವನದಲ್ಲಿ ಪ್ರದರ್ಶನ: ಅಯೋಧ್ಯೆಯ ತುಳಸಿ ವನದಲ್ಲಿ ಜ. 15, 16 ಮತ್ತು 17ರಂದು ಸಂಪೂರ್ಣ ರಾಮಾಯಣ ಬಯಲಾಟ ಪ್ರದರ್ಶನವನ್ನು 16 ಕಲಾವಿದರು ನೀಡಿದ್ದಾರೆ. ಮೂರು ದಿನವೂ ಪ್ರೇಕ್ಷಕರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿ ಈ ಪ್ರದರ್ಶನ ನೋಡಿದ್ದಾರೆ. ಪಂಚವಟಿಯಿಂದ ಆರಂಭಗೊಳ್ಳುವ ಈ ಕಥಾನಕ, ಲಂಕಾದಹನ ಒಳಗೊಂಡು ಶ್ರೀರಾಮನ ಪಟ್ಟಾಭಿಷೇಕ ಒಳಗೊಂಡಿದೆ. ಒಂದು ತಾಸಿನಲ್ಲೇ ಸಂಪೂರ್ಣ ರಾಮಾಯಣ ಕಟ್ಟಿಕೊಡುವ ಈ ಕಲಾವಿದರು, ಪ್ರೇಕ್ಷಕರನ್ನು ಹಿಡಿದಿಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ.ಶ್ರೀರಾಮನ ಪಾತ್ರವನ್ನು ಕಲಾವಿದ ಸತ್ಯನಾರಾಯಣ ನಿರ್ವಹಿಸಿದರೆ, ಲಕ್ಷ್ಮಣ- ಪರಶುರಾಮ, ಸೀತೆ- ಜ್ಯೋತಿ, ಹನುಮಂತ- ವಿರೂಪಾಕ್ಷಯ್ಯ, ರಾವಣ- ಚನ್ನಬಸವ, ಸುಗ್ರೀವ- ಶಂಕರ, ಶೂರ್ಪನಖಿ- ಮಹೇಶ್, ಮಾಯಾ ರಾವಣ ಪಾತ್ರಧಾರಿಯಾಗಿ ಚಂದ್ರಶೇಖರ್ ಅಭಿನಯಿಸಿದರು. ವಾದ್ಯ ಕಲಾವಿದರು ಸೇರಿದಂತೆ ಒಟ್ಟು 16 ಕಲಾವಿದರು ಹೊಸಪೇಟೆಯಿಂದ ತೆರಳಿ ಅಯೋಧ್ಯೆಯಲ್ಲಿ ಕನ್ನಡದ ಕಂಪನ್ನು ಪಸರಿಸಿದ್ದಾರೆ.
ಅಭಿಯಾನಕ್ಕೆ ಫಿದಾ: ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠಾಪನೆ ಪ್ರಯುಕ್ತ ವಿವಿಧ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಳ್ಳುತ್ತಿದೆ. ಈ ಪೈಕಿ ಹೊಸಪೇಟೆಯ ಬಯಲಾಟ ಕಲಾ ತಂಡ 13 ಕಿಮೀ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಗಮನ ಸೆಳೆದಿದೆ. ಅಯೋಧ್ಯೆಯಲ್ಲಿ ಉತ್ತರ ಕರ್ನಾಟಕದ ಗಂಡು ಕಲೆ ಬಯಲಾಟ ಪ್ರದರ್ಶನವನ್ನು 16 ಕಲಾವಿದರು ನೀಡಿದ್ದಾರೆ.ಶ್ರೀರಾಮನ ನೆಲದಲ್ಲಿ ಕನ್ನಡದಲ್ಲೇ ಡೈಲಾಗ್‌ಗಳನ್ನು ಹೇಳಿ ಕನ್ನಡದ ಕಂಪನ್ನು ಪಸರಿಸಿದ್ದಾರೆ. ಹಲವು ಕನ್ನಡಿಗರು ಕೂಡ ಈ ಕಲಾವಿದರ ಆಟೋಗ್ರಾಫಗಳನ್ನು ಅಯೋಧ್ಯೆಯಲ್ಲಿ ಪಡೆದಿದ್ದಾರೆ. ಇವರ ಬಯಲಾಟದ ವೇಷ- ಭೂಷಣಗಳಿಗೆ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಸಾವಿರಾರು ರಾಮಭಕ್ತರು ಫಿದಾ ಆಗಿದ್ದಾರೆ. ಈ ತಂಡಕ್ಕೆ ಈಗ ಹಂಪಿ ಉತ್ಸವದ ಪ್ರಧಾನ ವೇದಿಕೆಯಲ್ಲಿ ಪ್ರದರ್ಶನಕ್ಕೆ ವಿಜಯನಗರ ಜಿಲ್ಲಾಡಳಿತ ಕೂಡ ಅವಕಾಶ ಮಾಡಿಕೊಡುತ್ತಿದೆ. ಈ ಮೂಲಕ ಹಂಪಿ ನೆಲ ಶ್ರೀರಾಮಚಂದ್ರನೊಂದಿಗೆ ನಂಟಿರುವುದನ್ನು ಮತ್ತೊಮ್ಮೆ ನೆನಪಿಸುತ್ತಿದೆ.ಉತ್ತಮ ಸ್ಪಂದನೆ: ಅಯೋಧ್ಯೆಯಲ್ಲಿ ಸಂಪೂರ್ಣ ರಾಮಾಯಣ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ. ಮೂರು ದಿನ ಉತ್ತಮ ಪ್ರದರ್ಶನ ನೀಡಿದ್ದೇವೆ. ಶೋಭಾಯಾತ್ರೆಯಲ್ಲೂ 13 ಕಿಮೀ ಸಾಗಿ ಗಮನ ಸೆಳೆದಿದ್ದೇವೆ. ಬಯಲಾಟದ ಮೂಲಕ ರಾಮಾಯಣವನ್ನು ಕಟ್ಟಿಕೊಟ್ಟಿದ್ದೇವೆ. ಮೂರು ದಿನವೂ ಪ್ರದರ್ಶನಕ್ಕೆ ಉತ್ತಮ ಸ್ಪಂದನೆ ದೊರೆತಿದೆ ಎಂದು ಕಲಾವಿದರಾದ ಸತ್ಯನಾರಾಯಣ ತಿಳಿಸಿದರು.
ಪ್ರದರ್ಶನಕ್ಕೆ ಅವಕಾಶ: ಅಯೋಧ್ಯೆಯಲ್ಲಿ ಬಯಲಾಟ ಕಲೆಯ ಮೂಲಕ ಸಂಪೂರ್ಣ ರಾಮಾಯಣ ಪ್ರದರ್ಶಿಸಿದ ಹೊಸಪೇಟೆಯ ಕಲಾವಿದರಿಗೆ ಹಂಪಿ ಉತ್ಸವದ ಪ್ರಧಾನ ವೇದಿಕೆಯಲ್ಲಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಈ ಭಾಗದ ಕಲಾವಿದರಿಗೆ ಅವಕಾಶ ನೀಡಲಾಗುವುದು ಎಂದು ಡಿಸಿ ಎಂ.ಎಸ್. ದಿವಾಕರ್ ತಿಳಿಸಿದರು.