ನಾಳೆ ಸಂಪೂರ್ಣ ಋಗ್ವೇದ ಘನ ಪಾರಾಯಣ ಸಮಾರೋಪ

| Published : Oct 18 2024, 01:18 AM IST / Updated: Oct 18 2024, 01:19 AM IST

ಸಾರಾಂಶ

ಶಿವಮೊಗ್ಗ: ನಗರದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಅ.19ರಂದು ಸಂಜೆ 7ಕ್ಕೆ ಕಂಠಸ್ಥ ಹಾಗೂ ಏಕಾಕೀ ದಶಗ್ರಂಥ ಸಹಿತ ಸಂಪೂರ್ಣ ಋಗ್ವೇದ ಘನ ಪಾರಾಯಣ ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ನಟರಾಜ್ ಭಾಗವತ್ ತಿಳಿಸಿದರು.

ಶಿವಮೊಗ್ಗ: ನಗರದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಅ.19ರಂದು ಸಂಜೆ 7ಕ್ಕೆ ಕಂಠಸ್ಥ ಹಾಗೂ ಏಕಾಕೀ ದಶಗ್ರಂಥ ಸಹಿತ ಸಂಪೂರ್ಣ ಋಗ್ವೇದ ಘನ ಪಾರಾಯಣ ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ನಟರಾಜ್ ಭಾಗವತ್ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕೂಡಲಿ ಶೃಂಗೇರಿ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಶ್ರೀಮದ್ ಜಗದ್ಗುರು ಶ್ರೀ ಅಭಿನವ ಶಂಕರ ಭಾರತೀ ಮಹಾಸ್ವಾಮೀಜಿ ವಹಿಸಲಿದ್ದು, ಹುಬ್ಬಳ್ಳಿಯ ಚೈತನ್ಯಾಶ್ರಮದ ಪರಮಪೂಜ್ಯ ಶ್ರೀ ದತ್ತಾವಧೂತ ಮಹಾರಾಜರು ಹಾಗೂ ದೇಶದ ಶ್ರೇಷ್ಠ ಜ್ಯೋತಿಷಿಗಳಾದ ಗಣೇಶ ದ್ರಾವಿಡ್ ಅವರು ಭಾಗವಹಿಸಲಿದ್ದಾರೆ. ದಶಗ್ರಂಥ ಘನಪಾಠಿಗಳಾದ ವೇ.ಬ್ರ. ಚಂದ್ರಮಳಿ ಘನಪಾಠಿ ಯುವ ವಿದ್ವಾಂಸರನ್ನು ಈ ಸಂದರ್ಭದಲ್ಲಿ ಗೌರವಿಸಲಾಗುವುದು ಎಂದರು.ಕೇವಲ 20 ವರ್ಷದಲ್ಲಿ ಶ್ರೀಚಂದ್ರಮಳಿ ಘನಪಾಠಿ ಅವರು ತಮ್ಮ ಕುಟುಂಬದಲ್ಲಿ 5ನೇ ತಲೆಮಾರಿನ ವೇದಾಧ್ಯಾಯಿಗಳಾಗಿದ್ದ ಇವರು, 7ನೇ ವಯಸ್ಸಿನಿಂದ ಇಂದಿನವರೆಗೆ ಅಧ್ಯಯನ ಮಾಡುತ್ತ, ಶೃಂಗೇರಿ ವೇದ ಪೋಷಕ ಸಭಾ, ಮೈಸೂರಿನ ಅವಧೂತ ದತ್ತಪೀಠ, ಕಂಚಿ ಕಾಮಕೋಟಿ ಪೀಠದ ವೇದ ರಕ್ಷಣಾ ನಿಧಿ ಟ್ರಸ್ಟ್ ಈ ಮೂರು ಕೇಂದ್ರದಲ್ಲಿ ನಡೆಯುವ ವೇದ ಪರೀಕ್ಷೆಯಲ್ಲಿ ಭಾಗವಹಿಸಿದ್ದಾರೆ ಎಂದು ಮಾಹಿತಿ ನೀಡಿದರು.ಕಳೆದ 79 ದಿನಗಳಿಂದ ಕೂಡಲಿ ಕ್ಷೇತ್ರದಲ್ಲಿ ನಡೆಯುತ್ತಿರುವ ಕಂಠಸ್ಥ ಹಾಗೂ ಏಕಾಕೀ ದಶಗ್ರಂಥ ಸಹಿತ ಸಂಪೂರ್ಣ ಋಗ್ವೇದ ಘನಪಾರಾಯಣವನ್ನು ಋಗ್ವೇದ ಸಂಹಿತೆಯಲ್ಲಿ ಇರುವ ಎಲ್ಲಾ 10,552 ಋಕ್ಕುಗಳನ್ನು ಯಾವುದೇ ಪುಸ್ತಕ ನೋಡದೆಯೇ ಘನಪಾಠ ಪಾರಾಯಣ ಮಾಡಿದ್ದು, ಭಾರತೀಯ ಗುರುಕುಲ ಪದ್ಧತಿಯ ವಿದ್ವತ್ ಪರೀಕ್ಷೆಗಳಲ್ಲಿ ಇದು ಕೂಡ ಒಂದಾಗಿದೆ. ಕೂಡಲಿಯಲ್ಲಿ ಚಾತುರ್ಮಾಸದ ಅಂಗವಾಗಿ ಮಹಾಸಂಸ್ಥಾನದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ತಿಳಿಸಿದರು.ಪ್ರತಿದಿನ 7 ಗಂಟೆಗಳಂತೆ ಒಟ್ಟು 90 ದಿನಗಳಿಂದ 630 ಗಂಟೆಗಳ ಕಾಲ ಈ ಘನಪಾರಾಯಣ ನಡೆದಿದ್ದು, ಅ.18ರಂದು ಮುಕ್ತಾಯಗೊಳ್ಳಲಿದೆ. ಇಂತಹ ವಿದ್ವತ್ ಪಾರಾಯಣವು ಕಾಶಿ ಮತ್ತು ಪುಣೆ ಬಿಟ್ಟರೆ ಬೇರೆಯಲ್ಲಿಯೂ ನಡೆದಿಲ್ಲ. ವಿಶ್ವವಿಖ್ಯಾತ ರಿಯಾಲಿಟಿ ಶೋಗಳಿಗಿಂತ ಇದು ದೊಡ್ಡ ಸಾಧನೆಯಾಗಿದ್ದು, ಈ ಐತಿಹಾಸಿಕ ಅಪರೂಪದ ಕಾರ್ಯವು ಶಿವಮೊಗ್ಗದಲ್ಲಿ ನಡೆದು ಮುಕ್ತಾಯ ಕಾಣುತ್ತಿದೆ. ಈ ವಿದ್ವಾಂಸರನ್ನು ಶಿವಮೊಗ್ಗದ ಜನತೆ ಗೌರವಿಸಲಿದ್ದಾರೆ ಎಂದರು.ಅ.19ರಂದು ಸಂಜೆ 5ಕ್ಕೆ ಶೋಭಾಯಾತ್ರೆಯೂ ಕೋಟೆ ರಸ್ತೆಯ ಗಾಯತ್ರಿ ದೇವಸ್ಥಾನದಿಂದ ಹೊರಟು ಒ.ಪಿ.ರಸ್ತೆ, ಸಿ.ಎಲ್.ರಾಮಣ್ಣ ರಸ್ತೆ, ಓಲ್ಡ್‌ಬಾರ್ ಲೈನ್ ರಸ್ತೆ, ಬಿ.ಎಚ್.ರಸ್ತೆಯ ಮೂಲಕ ಗಾಯತ್ರಿ ಮಾಂಗಲ್ಯ ಮಂದಿರಕ್ಕೆ ತಲುಪಲಿದೆ. ಇಲ್ಲಿ ಶ್ರೀ ಚಂದ್ರಮಳಿ ಘನಪಾಠಿ ಅವರನ್ನು ಗೌರವಿಸಿ 10 ಲಕ್ಷ ರು.ಗಳನ್ನು ಪ್ರಶಸ್ತಿಯೊಂದಿಗೆ ಪ್ರದಾನ ಮಾಡಲಾಗುವುದು. ಶಿವಮೊಗ್ಗದ ಗಣ್ಯರು ಹಾಗೂ ಜನಪ್ರತಿನಿಧಿಗಳು ಕೂಡ ಇದರಲ್ಲಿ ಭಾಗವಹಿಸಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದರು.

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾತನಾಡಿ, ನಗರದ ಎಲ್ಲಾ ಹಿಂದೂ ಬಾಂಧವರು ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೆಂಬಲ ನೀಡಬೇಕೆಂದು ಹೇಳಿದರು.

ಪುರೋಹಿತ ಮಹಿಪತಿ ಜೋಯಿಸ್ ಮಾತನಾಡಿ, ಈ ಕಾರ್ಯಕ್ರಮದ ಬಳಿಕ ಅ.20ರಂದು ಕೂಡಲಿ ಮಠದಲ್ಲಿ ವೇದ ಸಮ್ಮೇಳನ ಕೂಡ ನಡೆಯಲಿದೆ. ಈ 2 ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗವಹಿಸುವಂತೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್‌.ಚನ್ನಬಸಪ್ಪ, ಪ್ರಮುಖರಾದ ಎನ್.ಉಮಾಪತಿ, ವಾಸುದೇವ್, ಎಂ.ಕೆ.ಸುರೇಶ್ ಕುಮಾರ್, ಸಂತೋಷ್, ಸುಧೀಂದ್ರ, ರಾಜೇಶ್‌ಶಾಸ್ತ್ರಿ, ಕೇಶವಮೂರ್ತಿ, ಸುಧೀಂದ್ರ ಕಟ್ಟೆ, ರಾಜು, ಸಂತೋಷ್, ಕುಬೇರಪ್ಪ, ನಾಗೇಶ್ ಇದ್ದರು.

----------------------------------

ಪೊಟೋ: 17ಎಸ್‌ಎಂಜಿಕೆಪಿ02

ಶಿವಮೊಗ್ಗ ಪತ್ರಿಕಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ನಟರಾಜ್ ಭಾಗವತ್ ಮಾತನಾಡಿದರು.