ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಪ್ರಗತಿ ಹಂತದಲ್ಲಿರುವ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಬೇಕು ಎಂದು ಜಿಪಂ ಉಪ ಕಾರ್ಯದರ್ಶಿ ಬಿ.ಎಸ್.ರಾಠೋಡ ಸೂಚಿಸಿದರು.ಚಡಚಣ ಹಾಗೂ ಇಂಡಿ ತಾಲೂಕಿನ ವಿವಿಧ ಗ್ರಾಪಂಗಳಿಗೆ ಭೇಟಿ ನೀಡಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಸೇರಿ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಸೂಚನೆ ನೀಡಿದರು. ಚಡಚಣ ತಾಲೂಕಿನ ನಂದರಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಪರಿಸರ ಸ್ವಚ್ಛತೆ, ಮಕ್ಕಳ ಕಲಿಕಾ ಸಾಮರ್ಥ್ಯದ ಗುಣಮಟ್ಟ ಹೆಚ್ಛಳಕ್ಕೆ ಆದ್ಯತೆ ನೀಡಬೇಕು. ಅಲ್ಲಿನ ಅಡುಗೆ ಕೋಣೆ ಸ್ವಚ್ಛತೆಗೆ ಶುಚಿತ್ವ ಕಾಪಾಡಬೇಕು. ಸಿಬ್ಬಂದಿ ಹಾಗೂ ಮಕ್ಕಳ ಹಾಜರಾತಿ, ಮಕ್ಕಳ ಆರೋಗ್ಯ ತಪಾಸಣಾ ವರದಿ ಮಾಹಿತಿ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಶೌಚಾಲಯ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯ ಕಲ್ಪಿಸುವುದು ಮತ್ತು ಮಕ್ಕಳಿಗೆ ಸಮಯಾನುಸಾರ ಪೌಷ್ಠಿಕ ಆಹಾರ ವಿತರಣೆಗೆ ಕ್ರಮವಹಿಸುವಂತೆ ಪಿಡಿಒಗೆ ಸೂಚನೆ ನೀಡಿದರು. ಪ್ರಗತಿ ಹಂತದಲ್ಲಿರುವ ಬೂದು ನೀರು ನಿರ್ವಹಣೆ(ಜಿಡಬ್ಲ್ಯು) ಘಟಕ ನಿರ್ಮಾಣದಡಿ ಇಂಗು ಗುಂಡಿ ಕಾಮಗಾರಿ ವೀಕ್ಷಿಸಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ತಿಳಿಸಿದರು.ಇಂಡಿ ತಾಲೂಕಿನ ಚವಡಿಹಾಳ ಗ್ರಾಪಂಗೆ ಭೇಟಿ ನೀಡಿ ಗ್ರಾಮ ಪಂಚಾಯಿತಿ ಕಟ್ಪಡದಲ್ಲಿರುವ ಗ್ರಂಥಾಲಯ, ಎನ್‌ಆರ್‌ಎಲ್‌ಎಂ ಕೊಠಡಿ ಹಾಗೂ ಗ್ರಾಪಂ ಕಟ್ಟಡದ ಮೇಲ್ಚಾವಣಿಯಲ್ಲಿ ಅಳವಡಿಸಿರುವ ಸೋಲಾರ್ ವ್ಯವಸ್ಥೆ ಪರಿಶೀಲಿಸಿದರು. ಸರ್ಕಾರಿ ಗ್ರಂಥಾಲಯಗಳ ಸದುಪಯೋಗ ಮಾಡಿಕೊಳ್ಳಲು ಜಾಗೃತಿ ಮೂಡಿಸಬೇಕು. ಇದಕ್ಕೆ ಪೂರಕವಾಗಿ ಮೂಲಭೂತ ಸೌಕರ್ಯ ನಿರ್ವಹಣೆ ಮಾಡಬೇಕು. ಅಂಗನವಾಡಿ ಕೇಂದ್ರಗಳಿಗೆ ಪೂರೈಸಬೇಕಾದ ಆಟಿಕೆ ಸಾಮಗ್ರಿಗಳನ್ನು ಪರಿಶೀಲಿಸಿ, ಕೂಡಲೇ ಆಯಾ ಅಂಗನವಾಡಿಗಳಿಗೆ ಒದಗಿಸಲು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಬೇಸಿಗೆ ಅವಧಿಯಲ್ಲಿ ನಿರಂತರವಾಗಿ ನರೇಗಾ ಯೋಜನೆಯಡಿ ಉದ್ಯೋಗ ನೀಡಬೇಕು. ಕಾಮಗಾರಿ ನಿರ್ಮಾಣ ಅದರ ಉಪಯುಕ್ತತೆ ಬಗ್ಗೆ ಗಮನಹರಿಸಿ ಅನುಷ್ಠಾನಗೊಳ್ಳಬೇಕು. ಬಳ್ಳೊಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಪ್ರಗತಿ ಹಂತದಲ್ಲಿರುವ ಸೋಮಣ್ಣ ಸಂಗೋಗಿ ಜಮೀನಿನ ಹತ್ತಿರ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಕಾಮಗಾರಿ ಸ್ಥಳದಲ್ಲಿನ ನರೇಗಾ ಕೂಲಿ ಕಾರ್ಮಿಕರ ಜೊತೆ ಸಂವಾದ ನಡೆಸಿ ಕುಂದು ಕೊರತೆಗಳನ್ನು ಆಲಿಸಿದರು. ಹಾಜರಾತಿ, ಕಾಮಗಾರಿ ಕಡತ ಪರಿಶೀಲಿಸಿದರು. ನರೇಗಾ ಯೋಜನೆಯಡಿ ಈ ಸಾಲಿನ ಏಪ್ರಿಲ್, ಮೇ ಹಾಗೂ ಜೂನ್ ಮಾಹೆಯಲ್ಲಿ ಕೂಲಿ ಆಧಾರಿತ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಬೇಸಿಗೆ ಅವಧಿಯಲ್ಲಿ ಗ್ರಾಪಂನಿಂದ ನಿರಂತರವಾಗಿ ಕೆಲಸ ನೀಡಲಾಗುತ್ತಿದೆ. ಕಾಮಗಾರಿಯು ನಿಯಮಾನುಸಾರ ಅನುಷ್ಠಾನವಾಗಬೇಕು ಮತ್ತು ನಿಗದಿತ ಅವಧಿಯಲ್ಲಿ ಕೂಲಿ ಕಾರ್ಮಿಕರಿಗೆ ಹಣ ಪಾವತಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಬಬಲಾದ ಗ್ರಾಮ ಪಂಚಾಯತಿಗೆ ತೆರಳಿ ಗ್ರಾಪಂ ವ್ಯಾಪ್ತಿಯ ಕೂಸಿನ ಮನೆಯಲ್ಲಿನ ಮಕ್ಕಳ ಹಾಜರಾತಿ, ಒದಗಿಸಲಾಗುವ ಆಹಾರ ಪಟ್ಟಿ ಅನುಸಾರ ನಿತ್ಯವೂ ಪೌಷ್ಠಿಕ ಆಹಾರ ವಿತರಿಸಬೇಕು ಎಂದು ಕೂಸಿನ ಮನೆಯ ಮಕ್ಕಳ ಆರೈಕೆದಾರರಿಗೆ ಸೂಚಿಸಿದರು.ಕೇಂದ್ರದಲ್ಲಿ ಮಕ್ಕಳಿಗೆ ಅವಶ್ಯವಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರೊಂದಿಗೆ ಪ್ರತಿದಿನ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.ಈ ಸಂದರ್ಭ ಚಡಚಣ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂಜಯ ಖಡಗೇಕರ, ಸಹಾಯಕ ನಿರ್ದೇಶಕರು(ಗ್ರಾ.ಉ) ಮಹಾಂತೇಶ ಹೋಗೋಡಿ, ನಂದರಗಿ ಗ್ರಾಪಂ ಪಿಡಿಒ ಭೀಮಾಶಂಕರ ಕುಂಬಾರ, ಬಬಲಾದ ಗ್ರಾಪಂ ಪಿಡಿಒ ಸಿದ್ದರಾಯ ಬಿರಾದಾರ, ಚವಡಿಹಾಳ ಗ್ರಾಪಂ ಪಿಡಿಒ ಸಿ.ಜಿ.ಪಾರೆ, ನರೇಗಾ ತಾಂತ್ರಿಕ ಸಂಯೋಜಕರಾದ ಪರಮೇಶ ಮಾಳಿ, ಸಾಹಿಲ್ ದನಶೆಟ್ಟಿ ಮುಂತಾದವರು ಇದ್ದರು.