ಗಡಿ ಪ್ರಾಧಿಕಾರದ ಅನುದಾನದ ಕಾಮಗಾರಿ ಪೂರ್ಣಗೊಳಿಸಿ

| Published : Feb 11 2025, 12:51 AM IST

ಗಡಿ ಪ್ರಾಧಿಕಾರದ ಅನುದಾನದ ಕಾಮಗಾರಿ ಪೂರ್ಣಗೊಳಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಗಡಿ ಪ್ರಾಧಿಕಾರದ ಅನುದಾನದಿಂದ ಜಿಲ್ಲೆಗೆ ಬಿಡುಗಡೆ ಮಾಡಲಾದ ಅನುದಾನದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸಿ ಹಣ ಬಳಕೆ ಪ್ರಮಾಣ ಪತ್ರ ಸಲ್ಲಿಸಬೇಕೆಂದು ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿಗಡಿ ಪ್ರಾಧಿಕಾರದ ಅನುದಾನದಿಂದ ಜಿಲ್ಲೆಗೆ ಬಿಡುಗಡೆ ಮಾಡಲಾದ ಅನುದಾನದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸಿ ಹಣ ಬಳಕೆ ಪ್ರಮಾಣ ಪತ್ರ ಸಲ್ಲಿಸಬೇಕೆಂದು ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಸೂಚಿಸಿದರು.ಇಲ್ಲಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ವಿವಿಧ ಅನುಷ್ಟಾನ ಇಲಾಖೆ ಅಧಿಕಾರಿಗಳೊಂದಿಗೆ ಸೋಮವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು. 2010-11ರಿಂದ ವಿವಿಧ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದ್ದರೂ ಹಣ ಬಳಕೆ ಪ್ರಮಾಣ ಪತ್ರ ಬಂದಿಲ್ಲ. ಕೆಲವೆಡೆ ಇನ್ನು ಕಾಮಗಾರಿನೇ ಪ್ರಾರಂಭಿಸಿಲ್ಲ. ಅನುದಾನ ನೀಡಿದರೂ ಕಾಮಗಾರಿ ಆರಂಭಿಸಿಲ್ಲ ಎಂದಾದ ಮೇಲೆ ಕಾಮಗಾರಿ ಅವಶ್ಯಕತೆ ಇದಿಯೇ ಎಂದು ತಿಳಿಸಬೇಕು. ಇಲ್ಲದಿದ್ದರೆ ಅಗತ್ಯವಿರುವ ಕಡೆ ಈ ಅನುದಾನ ಬಳಸಿಕೊಳ್ಳಲಾಗುವುದು ಎಂದರು.ರಾಜ್ಯದ ಹಾಗೂ ಹೊರ ರಾಜ್ಯದ ಕನ್ನಡ ಪರ ಸಂಘ-ಸಂಸ್ಥೆಗಳಿಗೆ ಭಾಷಾ ಚಟುವಟಿಕೆಗಳಿಗಾಗಿ ಪ್ರೋತ್ಸಾಹ ನೀಡುವುದು ಹಾಗೂ ಗಡಿ ಭಾಗದ ಕನ್ನಡ ಮಾಧ್ಯಮ ಶಾಲೆಗಳ ಮೂಲಭೂತ ಸೌಕರ್ಯಗಳಾದ ಶಾಲಾ ಕೊಠಡಿ, ಗ್ರಂಥಾಲಯ, ಕ್ರೀಡಾ ಕೊಠಡಿ, ಶಾಲಾ ಶೌಚಾಲಯ, ಶಾಲಾ ಆವರಣ ಗೋಡೆ, ಇತ್ಯಾದಿ ಸೌಲಭ್ಯಗಳನ್ನು ಪ್ರಾಧಿಕಾರದಿಂದ ಒದಗಿಸಲಾಗುತ್ತಿದೆ. 2010-11 ರಿಂದ ಇದೂವರೆಗೆ ಜಿಲ್ಲೆಗೆ ₹22 ಕೋಟಿ ಪ್ರಾಧಿಕಾರದಿಂದ ಬಿಡುಗಡೆ ಮಾಡಿದ್ದು, ಇದರಲ್ಲಿ ₹7.98 ಕೋಟಿ ಬಳಕೆ ಪ್ರಮಾಣ ಪತ್ರ ಬಂದಿದೆ. ಉಳಿದ ಮೊತ್ತಕ್ಕೆ ಕೂಡಲೇ ಹಣ ಬಳಕೆ ಪ್ರಮಾಣ ಪತ್ರ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಕೆಲವೆಡೆ ತಮ್ಮ ಜಮೀನು ಹೊರತುಪಡಿಸಿ ಬೇರೆ ಕಡೆ ಶಾಲಾ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದೆ, ವಿಜಯಪುರ ಸಭೆಯಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬಂದಿವೆ. ಹೀಗಾಗಿ ಅನುಷ್ಠಾನ ಅಧಿಕಾರಿಗಳು, ತಹಸೀಲ್ದಾರರು ಕಾಮಗಾರಿ ಸ್ಥಳಕ್ಕೆ ಅಗಾಗ ಭೇಟಿ ನೀಡಿ ಪರಿಶೀಲಿಸಿ ಅನುದಾನ ನೀಡಬೇಕು ಎಂದರು.

ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಆಯಾ ವರ್ಷದಲ್ಲಿ ಆಯೋಜಿಸಲು ₹50,000, ಒಂದು ಲಕ್ಷ ರು. ಮೊತ್ತ ಅನುದಾನ ಸಂಸ್ಥೆಗಳಿಗೆ ಹಂಚಿಕೆ ಮಾಡಿದ್ದರೂ ಇದೂವರೆಗೆ ಸಂಸ್ಥೆಗಳಿಂದ ಅಂದಾಜು ಪಟ್ಟಿ ಬಾರದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಆಯಾ ವರ್ಷದಲ್ಲಿ ಆಗಬೇಕಾದ ಕಾರ್ಯಕ್ರಮಗಳು ಈಗ ಮಾಡುವಂತಿಲ್ಲ. ಹೀಗಾಗಿ ಇಂತಹ ಕಾರ್ಯಕ್ರಮಕ್ಕೆ ಈಗ ಅನುದಾನ ಬಿಡುಗಡೆ ಮಾಡಬೇಡಿ ಎಂದು ನಿರ್ದೇಶನ ನೀಡಿದರು.ಚಿಂಚೋಳಿ ತಾಲೂಕಿನ ಸಾಲೇಬೀರನಹಳ್ಳಿಯಲ್ಲಿ 18 ಲಕ್ಷ ರು. ವೆಚ್ಚದಲ್ಲಿ ಶಿಕ್ಷಕರ ವಸತಿ ಗೃಹ ನಿರ್ಮಾಣವಾಗಿದ್ದರೂ ಅದರ ಬಳಕೆಯಾಗುತ್ತಿಲ್ಲ ಎಂಬುದು ಸ್ಥಳೀಯರ ದೂರಾಗಿದ್ದು, ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡುವಂತೆ ಕೆ.ಆರ್.ಐ.ಡಿ.ಎಲ್ ಅಧಿಕಾರಿಗಳಿಗೆ ಸೂಚಿಸಿದರು.

ಡಾ.ಜಯದೇವಿ ತಾಯಿ ಲಿಗಾಡೆ ಸಾಂಸ್ಕೃತಿಕ ಭವನ ಪುರ್ಣಗೊಳಿಸಿನೆರೆಯ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಅಕ್ಕಲಕೋಟೆಯಲ್ಲಿ 2 ಕೋಟಿ ರು. ವೆಚ್ಚದಲ್ಲಿ ಡಾ.ಜಯದೇವಿ ತಾಯಿ ಲಿಗಾಡೆ ಅವರ ಹೆಸರಿನಲ್ಲಿ ಸಾಂಸ್ಕೃತಿಕ ಭವನ ನಿರ್ಮಿಸುವುದು ಆಯವ್ಯಯ ಘೋಷಣೆಯ ಕಾರ್ಯಕ್ರಮವಾಗಿರುವ ಹಿನ್ನೆಲೆಯಲ್ಲಿ ಇದೂವರೆಗೆ ಬಿಡುಗಡೆಯಾದ 1.75 ಕೋಟಿ ರು. ಹಣಕ್ಕೆ ಕೆಲಸವಾಗಿರುವ ಕುರಿತು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಕಾಮಗಾರಿ ಪೂರ್ಣಗೊಂಡಲ್ಲಿ ಸಿ.ಎಂ. ಅವರಿಂದ ಸಾಂಸ್ಕೃತಿಕ ಭವನ ಉದ್ಘಾಟಿಸಲಾಗುವುದು. ಇದಕ್ಕೆ ಪೂರ್ವಸಿದ್ಧತೆ ಕೈಗೊಳ್ಳಬೇಕು ಎಂದು ತಿಳಿಸಿದರು.ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಜಿಲ್ಲೆಯಲ್ಲಿ ಗಡಿ ಭಾಗದ ಬಾಕಿ ಕಾಮಗಾರಿ ಸ್ಥಳಕ್ಕೆ ಕೂಡಲೇ ತಹಸೀಲ್ದಾರ್‌ರು, ಅನುಷ್ಠಾನ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ವರದಿ ನೀಡಬೇಕು. ಕೆಲಸವಾಗಿದ್ದರೆ ಹಣ ಬಳಕೆ ಪತ್ರ ಪಡೆಯಬೇಕು. ಇಲ್ಲದಿದ್ದರೆ ನೋಟಿಸ್ ನೀಡಿ ಹಣ ವಸೂಲಿ ಮಾಡಬೇಕು. ಸೇಡಂ ಮತ್ತು ಚಿಂಚೋಳಿ ತಾಲೂಕಿನಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೂ ಸಾರ್ವಜನಿಕರಿಂದ ದೂರ ಬಂದ ಕಾರಣ ಪಿ.ಆರ್.ಇ.ಡಿ. ಅಧಿಕಾರಿಗಳು ಮತ್ತು ತಹಶೀಲ್ದಾರರು ಜಂಟಿಯಾಗಿ ಭೇಟಿ ನೀಡಿ ವರದಿ ನೀಡುವಂತೆ ಸೂಚಿಸಿದರು.

ಪ್ರಕಾಶ ಮತ್ತಿಹಳ್ಳಿ, ರಾಯಪ್ಪ ಹುಣಸಗಿ, ಸುಭಾಷ್, ಮಲ್ಲಿಕಾರ್ಜುನ, ಅಣ್ಣಾರಾವ ಪಾಟೀಲ, ಸುಬ್ಬಣ್ಣ ಜಮಖಂಡಿ, ಶ್ರೇಯಾಂಕಾ ಧನಶ್ರೀ, ಶರಣಬಸಪ್ಪ ಇದ್ದರು.