ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರ ವಿಂಗಡಣೆ ಪೂರ್ಣಗೊಳಿಸಿ: ಡಾ.ಕುಮಾರ

| Published : Aug 12 2025, 12:30 AM IST

ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರ ವಿಂಗಡಣೆ ಪೂರ್ಣಗೊಳಿಸಿ: ಡಾ.ಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ನಗರ ಸ್ಥಳೀಯ ಸಂಸ್ಥೆಗಳ ಅವಧಿಯು ಶೀಘ್ರದಲ್ಲೇ ಮುಕ್ತಾಯಗೊಳ್ಳುವುದರಿಂದ ನಗರ ಸ್ಥಳೀಯ ಸಂಸ್ಥೆಗಳನ್ನು 2011ರ ಜನಗಣತಿ ಪ್ರಕಾರ ಹಾಗೂ ಈ ಹಿಂದೆ ನಿಗದಿಪಡಿಸಿರುವ ಗಡಿರೇಖೆಗೆ ಅನುಗುಣವಾಗಿ ಅಧಿಸೂಚನೆ ತಾಳೆ ಮಾಡಿಕೊಂಡು ಗಡಿರೇಖೆ ಗುರುತಿಸಲು ಸಂಭಂದಪಟ್ಟ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚನೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರ ಸ್ಥಳೀಯ ಸಂಸ್ಥೆಗಳ ಅವಧಿಯು ಶೀಘ್ರದಲ್ಲೇ ಮುಕ್ತಾಯಗೊಳ್ಳುವುದರಿಂದ ನಗರ ಸ್ಥಳೀಯ ಸಂಸ್ಥೆಗಳನ್ನು 2011ರ ಜನಗಣತಿ ಅನ್ವಯ ವಾರ್ಡ್‌ವಾರು ಕ್ಷೇತ್ರ ಪುನರ್ ವಿಂಗಡನೆ ಮಾಡುವ ಕಾರ್ಯ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಕುಮಾರ ತಿಳಿಸಿದರು.

ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಗರಾಭಿವೃದ್ಧಿ ಅಧಿಕಾರಿಗಳೊಂದಿಗೆ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 2011ರ ಜನಗಣತಿ ಪ್ರಕಾರ ಹಾಗೂ ಈ ಹಿಂದೆ ನಿಗದಿಪಡಿಸಿರುವ ಗಡಿರೇಖೆಗೆ ಅನುಗುಣವಾಗಿ ಅಧಿಸೂಚನೆ ತಾಳೆ ಮಾಡಿಕೊಂಡು ಗಡಿರೇಖೆ ಗುರುತಿಸಲು ಸಂಭಂದಪಟ್ಟ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಂಡ್ಯ ನಗರಸಭೆಯ ನಗರ ಸ್ಥಳೀಯ ಸಂಸ್ಥೆಗಳ ಅವಧಿ ನವೆಂಬರ್ 2ಕ್ಕೆ ಮುಕ್ತಾಯಗೊಳ್ಳುತ್ತದೆ, ಅಕ್ಟೋಬರ್ 23ಕ್ಕೆ ಪುರಸಭೆಗಳಾದ ಮದ್ದೂರು, ಮಳವಳ್ಳಿ, ಪಾಂಡವಪುರದ ಅವಧಿ ಮುಕ್ತಾಯಗೊಳ್ಳುತ್ತದೆ. ಅಕ್ಟೋಬರ್ 31ಕ್ಕೆ ಕೆ.ಆರ್.ಪೇಟೆ, ನವೆಂಬರ್ 6ಕ್ಕೆ ಶ್ರೀರಂಗಪಟ್ಟಣ, ನವೆಂಬರ್ 5ಕ್ಕೆ ನಾಗಮಂಗಲ ಹಾಗೂ ನವೆಂಬರ್ 4ಕ್ಕೆ ಪಟ್ಟಣ ಪಂಚಾಯ್ತಿ ಬೆಳ್ಳೂರಿನ ನಗರ ಸ್ಥಳೀಯ ಸಂಸ್ಥೆಗಳ ಅವಧಿಯು ಮುಕ್ತಾಯಗೊಳ್ಳಲಿದೆ ಎಂದು ಸಭೆ ಮಾಹಿತಿ ನೀಡಿದರು.

ವಾರ್ಡ್‌ವಾರು ಮೀಸಲಾತಿ ನಿಗದಿಪಡಿಸುವ ಪೂರ್ವ ಅಧಿಕಾರಿಗಳು ಗಡಿರೇಖೆಯ ಗುರುತಿಸಿ ನಿಗದಿಪಡಿಸಬೇಕು, ಸಾರ್ವಜನಿಕರಿಂದ ಏನಾದರೂ ಆಕ್ಷೇಪಗಳಿದ್ದರೆ ಆಲಿಸಿ ನಂತರ ಅಂತಿಮ ತೀರ್ಮಾನ ಕೈಗೊಳ್ಳುವಂತೆ ಸೂಚಿಸಿದರು.

ವಾರ್ಡ್‌ವಾರು ಗಡಿ ರೇಖೆ ಸೂಚಿಸಿರುವ ಕರಡು ಅಧಿಸೂಚನೆಯನ್ನು ನಗರ ಸ್ಥಳೀಯ ಸಂಸ್ಥೆಗಳು ಪ್ರಕಟ ಮಾಡಲಾಗಿದ್ದು, ಯಾವುದೇ ಆಕ್ಷೇಪಣೆಗಳಿದ್ದಲ್ಲಿ 15 ದಿನಗಳೊಳಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬಹುದು ಎಂದರು.

ಮದ್ದೂರು ಪುರಸಭೆ ಈಗಾಗಲೇ ನಗರಸಭೆಯಾಗಿ ಉನ್ನತೀಕರಣಗೊಂಡಿದ್ದು 9 ಗ್ರಾಮಗಳು 4 ಗ್ರಾಮ ಪಂಚಾಯ್ತಿಗಳನ್ನು ಸೇರ್ಪಡೆಗೊಂಡಿರುತ್ತದೆ. ಆದ್ದರಿಂದ ಸಂಬಂಧಪಟ್ಟ ಗ್ರಾಮಗಳನ್ನು ನಗರಸಭಾ ಪರಿಧಿಯ ಒಳಗಡೆ ತೆಗೆದುಕೊಳ್ಳಲು ಗಡಿರೇಖೆ ಗುರುತಿಸುವಂತೆ ಸೂಚಿಸಿದರು.

ಸಭೆಯಲ್ಲಿ ನಗರಾಭಿವೃದ್ಧಿ ಕೋಶಾಧಿಕಾರಿ ಟಿ.ಎನ್ ನರಸಿಂಹಮೂರ್ತಿ, ನಗರಸಭೆ ಪೌರಾಯುಕ್ತ ಪಂಪಾಶ್ರೀ, ಕಾರ್ಯನಿರ್ವಾಹಕ ಎಂಜಿನಿಯರ್ ಪ್ರತಾಪ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರವಿಕುಮಾರ್, ನೋಡಲ್ ಅಧಿಕಾರಿ ಸೌಮ್ಯ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.