ಸಾರಾಂಶ
ಹಾವೇರಿ:ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಬಹುಗ್ರಾಮ ಕುಡಿಯುವ ನೀರಿನ ವಿವಿಧ ಯೋಜನಾ ಸ್ಥಳಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಭೇಟಿ ನೀಡಿ, ತ್ವರಿತವಾಗಿ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.ಜಿಲ್ಲೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಾದ ಮಕರಿ, ಹಂಸಭಾವಿಯ ಭೈರನಪಾದ ಹಾಗೂ ಆಣೂರಿನ ಕುಸಗೂರು ಜಾಕವೆಲ್ ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.ಈ ಹಂತದಲ್ಲಿ ಸ್ಥಳದಲ್ಲಿದ್ದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನದ ಹೊಣೆ ಹೊತ್ತಿರುವ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ಕಾಮಗಾರಿಗಳಿಗೆ ಇನ್ನಷ್ಟು ವೇಗ ನೀಡಬೇಕಿದೆ. ಜಿಲ್ಲೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಆಧರಿಸಿ ನೂರಾರು ಗ್ರಾಮಗಳ ಜನ ಜೀವಜಲಕ್ಕೆ ಕಾಯುತ್ತಿದ್ದಾರೆ. ಕಾಲಮಿತಿ ಮೀರಿದರೂ ಕಾಮಗಾರಿ ಮುಗಿಸಿಲ್ಲವೇಕೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.ಮಳೆಗಾಲ ಮುಗಿದಿದ್ದು, ಕಾಮಗಾರಿಗೆ ವೇಗ ನೀಡಿ ಮುಂಬರುವ ಒಂದೆರಡು ತಿಂಗಳಲ್ಲಿ ಕಾಮಗಾರಿ ಮುಗಿಸುವಂತೆ ತಾಕೀತು ಮಾಡಿದರು.ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನದ ವಿಷಯದಲ್ಲಿ ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ಸಣ್ಣಪುಟ್ಟ ಸಮಸ್ಯೆಗಳು ಇದ್ದಲ್ಲಿ ಕೂಡಲೇ ಬಗೆಹರಿಸಿಕೊಂಡು ಯೋಜನೆ ಪೂರ್ಣಗೊಳಿಸಿ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿ ಎಂದು ನಿರ್ದೇಶನ ನೀಡಿದರು. ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡು ಎರಡು ವರ್ಷಗಳ ಅವಧಿಯಲ್ಲಿ ನಡೆಸಿದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧಿಕಾರಿಗಳು ನೀಡಿದ ಭರವಸೆಯಂತೆ ಕಾಮಗಾರಿ ವೇಗ ಪಡೆದಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಕೆಲಸ ವೇಗ ಪಡೆದಿಲ್ಲ. ಹೀಗಾಗಿ ಇನ್ನು ನೆಪಗಳನ್ನು ಹೇಳದೇ ಜಿಲ್ಲೆಯ ಬಹುಗ್ರಾಮ ಕುಡಿಯುವ ನೀರಿನ ಎಲ್ಲ ಯೋಜನೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಪಂ ಸಿಇಒ ರುಚಿ ಬಿಂದಲ್, ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆಯ ಇಇ ಮಾಲತೇಶ, ಜಿತೇಂದ್ರ, ಎಇ ಅನಿಲ ದೇಸಾಯಿ ಸೇರಿದಂತೆ ಇತರರು ಇದ್ದರು.
;Resize=(128,128))
;Resize=(128,128))
;Resize=(128,128))