ಸಾರಾಂಶ
* ಶಾಸಕ ಬಸವರಾಜ ವಿ.ಶಿವಗಂಗಾ ಜವಾಬ್ದಾರಿ ಅರಿಯದಿದ್ದರೆ ಉಗ್ರ ಹೋರಾಟ: ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಎಚ್ಚರಿಕೆ
ಕನ್ನಡಪ್ರಭ ವಾರ್ತೆ ಚನ್ನಗಿರಿಕ್ಷೇತ್ರದ ಅಭಿವೃದ್ಧಿಗಾಗಿ ನೂರಾರು ಕೋಟಿ ರುಪಾಯಿ ಅನುದಾನ ತಂದಿದ್ದು, ನನ್ನ ಅಧಿಕಾರವಧಿ ಮುಗಿಯುವ ವೇಳೆ ₹300 ಕೋಟಿಗೂ ಹೆಚ್ಚಿನ ಕಾಮಗಾರಿ ಕಾರ್ಯಗಳು ಅರ್ಧಕ್ಕೆ ನಿಂತಿದ್ದು ಈ ಕಾಮಗಾರಿಗಳ ಮುಂದುವರಿಸಬೇಕಾದ ಜವಾಬ್ದಾರಿ ಕ್ಷೇತ್ರದ ಶಾಸಕ ಬಸವರಾಜ ವಿ.ಶಿವಗಂಗಾ ಅವರದ್ದು ಈ ಕಾಮಗಾರಿಗಳ ಪೂರ್ಣಗೊಳಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಎಚ್ಚರಿಕೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ ಚನ್ನಗಿರಿ ಕ್ಷೇತ್ರದಲ್ಲಿ ರಸ್ತೆ ಕಾಮಗಾರಿಗಳು, ಒಳಚರಂಡಿ, ಕಿಂಡಿ ಅಣೆಕಟ್ಟುಗಳು, ಒಳಾಂಗಣ ಕ್ರೀಡಾಂಗಣ, ವಿವಿಧ ಕಚೇರಿಗಳಿಗೆ ಸಂಕೀರ್ಣ, ಶಾಲೆ, ಪುರಸಭಾ ಕಟ್ಟಡ, ಸರ್ಕಾರಿ ಆಸ್ಪತ್ರೆ, ಕೆಎಸ್ಆರ್ ಟಿಸಿ ಡಿಪೋ ಸೇರಿ ಇನ್ನು ಹಲವು ಕಾಮಗಾರಿಗಳು ಅರ್ಧಕ್ಕೆ ನಿಂತಿದ್ದು, ಈ ಕಾಮಗಾರಿಗಳ ಪೂರ್ಣಗೊಳಿಸಿ ಕ್ಷೇತ್ರದ ಜನತೆಗೆ ಅನುಕೂಲ ಮಾಡಬೇಕೆಂದು ಒತ್ತಾಯಿಸಿದರು.ಶಾಸಕ ಶಿವಗಂಗಾ ಕಳೆದ ಶುಕ್ರವಾರ ತಾಲೂಕಿನ ಪಾಂಡೋಮಟ್ಟಿ ಗ್ರಾಮದಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ನಾನು ಶಾಸಕನಾಗಿದ್ದಾಗ ₹36 ಲಕ್ಷದ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಸರ್ಕಾರದಿಂದ ಹಣ ಮಂಜೂರಾಗದಿದ್ದರೂ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಈ ಹಿಂದಿನ ಬಿಜೆಪಿ ಶಾಸಕರು ಗುದ್ದಲಿಪೂಜೆ ಮಾಡಿದ್ದರು ಎಂದು ಬಹಿರಂಗ ಸಭೆಯಲ್ಲಿ ಆರೋಪಿಸಿದ್ದರು. ಮಾಜಿ ಶಾಸಕ ಮಾಡಾಳು ಈ ಆರೋಪಕ್ಕೆ ಉತ್ತರಿಸಿ ಮಾತನಾಡಿ ಸರಿಯಾದ ವಿಚಾರ ತಿಳಿಯದೆ ಯಾರದೋ ಮಾತು ಕೇಳಿ ಮಾತನಾಡುವುದು ಸರಿಯಲ್ಲ ಜವಾಬ್ದಾರಿ ಸ್ಥಾನದಲ್ಲಿರುವ ಶಾಸಕರು ಸರಿಯಾಗಿ ವಿಚಾರಗಳ ತಿಳಿದು ಮಾತನಾಡಬೇಕು ಎಂದು ಹೇಳಿದರು.
ಅಟಲ್ ಭೂ ಜಲ ಯೋಜನೆಯಲ್ಲಿ ಕ್ಷೇತ್ರದ ಮಾವಿನಹೊಳೆ, ಗಂಗೇನಹಳ್ಳಿ, ಪಾಂಡೋಮಟ್ಟಿ, ಬೆಂಕಿಕೆರೆ, ವಿ.ಬನ್ನಿಹಟ್ಟಿ ಈ ಗ್ರಾಮಗಳಲ್ಲಿ ಕಿಂಡಿ ಅಣೆಕಟ್ಟೆ ನಿರ್ಮಿಸಲು ₹5ಕೋಟಿ ಸರ್ಕಾರ ಮಂಜೂರು ಮಾಡಿತ್ತು. ಈ ಕಾಮಗಾರಿ ಕೆಲಸಗಳಿಗೆ ಗುದ್ದಲಿಪೂಜೆ ಮಾಡಿರಲಿಲ್ಲ ಜವಾಬ್ದಾರಿ ಸ್ಥಾನದಲ್ಲಿರುವ ಶಾಸಕರು ಇನ್ನೊಬ್ಬರ ಬಗ್ಗೆ ಮಾತನಾಡಬೇಕಾದರೆ ನಿಖರ ಮಾಹಿತಿ ತಿಳಿದು ಮಾತನಾಡಲಿ ಎಂದರು.ಮೋಟಾರುಗಳ ಅಳವಡಿಸಿ:
ಉಬ್ರಾಣಿ ಏತ ನೀರಾವರಿ ಯೋಜನೆಗೆ ಸಂಬಂಧಿಸಿ ನೀರೆತ್ತುವ ಮೋಟಾರು ಖರೀದಿಗೆ ಸರ್ಕಾರದಿಂದ ₹7.5ಕೋಟಿ ಹಣ ಮಂಜೂರು ಮಾಡಿಸಿದ್ದೆ. ಆದಷ್ಟು ಬೇಗ ಮೋಟಾರುಗಳ ಅಳವಡಿಸಿ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿದರೆ ಸಂತೋಷಪಡುವವರಲ್ಲಿ ನಾನೇ ಮೊದಲಿಗ ಎಂದರು.ಪತ್ರಿಕಾಗೋಷ್ಠಿಯಲ್ಲಿ ಮಾಡಾಳು ವಿರೂಪಾಕ್ಷಪ್ಪ ಅಭಿಮಾನಿ ಬಳಗದ ಮುಖಂಡರಾದ ದೇವರಹಳ್ಳಿ ಎ.ಎಸ್.ಬಸವರಾಜ್, ಮಂಗೇನಹಳ್ಳಿ ಲೋಹಿತ್ ಕುಮಾರ್, ಎಂ.ಬಿ.ರಾಜಪ್ಪ, ಸಂತೆಬೆನ್ನೂರು ಬಸವರಾಜ್, ಪುರಸಭಾ ಸದಸ್ಯರಾದ ಪಟ್ಲಿ ನಾಗರಾಜ್, ಚಿಕ್ಕಣ್ಣ, ಪರಮೇಶ್ ಪಾರಿ, ಎಪಿಎಂಸಿ ಮಾಜಿ ಅಧ್ಯಕ್ಷ ದಿಗ್ಗೇನಹಳ್ಳಿ ನಾಗರಾಜ್, ಕೆ.ಆರ್.ಗೋಪಿ, ಬುಳಸಾಗರ ನಾಗರಾಜ್, ಶಿವಣ್ಣ, ಜಯಣ್ಣ, ಸಂಗಮೇಶ್ ಸೇರಿ ಅಭಿಮಾನಿ ಬಳಗದ ಸದಸ್ಯರಿದ್ದರು.ಕಳೆದ ಎರಡು ಅವಧಿಗೆ ಶಾಸಕನಾಗಿದ್ದಾಗ ಚನ್ನಗಿರಿ ಕ್ಷೇತ್ರವನ್ನು ಎಲ್ಲರ ಹುಬ್ಬೇರಿಸುವಂತೆ ಅಭಿವೃದ್ಧಿ ಮಾಡಿದ್ದು, ಕೋಟ್ಯಾಂತರ ರುಪಾಯಿಗಳ ಕ್ಷೇತ್ರದ ಅಭಿವೃದ್ಧಿಗೆ ವ್ಯಯಗೊಳಿಸಿ ಅಭಿವೃದ್ಧಿಯಾಗಿರುವುದನ್ನು ಕ್ಷೇತ್ರದ ಜನರು ಮರೆಯಲಾರರು. ಅಭಿವೃದ್ಧಿ ಕಾರ್ಯಗಳು ಶಾಸಕರಾದವರ ಮುಖ್ಯ ಗುರಿಯಾಗಿರಲಿ.
ಮಾಡಾಳು ವಿರೂಪಾಕ್ಷಪ್ಪ, ಮಾಜಿ ಶಾಸಕ