ಹೊಸಪೇಟೆ: ನಗರದ ಹಂಪಿ ರಸ್ತೆಯಲ್ಲಿರುವ ಅನಂತಶಯನಗುಡಿ ರೈಲ್ವೆ ಕ್ರಾಸಿಂಗ್ ಬಳಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಎಲ್ಲ ಲೋಪದೋಷಗಳನ್ನು ತಕ್ಷಣವೇ ಸರಿಪಡಿಸಿಕೊಂಡು, ಮುಂಬರುವ ಆಗಸ್ಟ್ ಅಂತ್ಯದ ವೇಳೆಗೆ ಕಾಮಗಾರಿ ಕಡ್ಡಾಯವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಗಡುವು ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಹಂಪಿ ರಸ್ತೆ ಮೇಲ್ಸೇತುವೆ ಕಾಮಗಾರಿ ಪ್ರಗತಿ ಪರಿಶೀಲನೆಯ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸೇತುವೆ ಕಾಮಗಾರಿ ಆರಂಭಕ್ಕೆ ಇದ್ದ ಭೂಸ್ವಾಧೀನ ಪ್ರಕ್ರಿಯೆ, ಅನುದಾನ ಬಿಡುಗಡೆ ಹಾಗೂ ತಾಂತ್ರಿಕ ಅಡಚಣೆಗಳು ಸೇರಿದಂತೆ ಎಲ್ಲ ರೀತಿಯ ತೊಡಕುಗಳನ್ನು ಜಿಲ್ಲಾಡಳಿತ ಈಗಾಗಲೇ ಸಂಪೂರ್ಣವಾಗಿ ನಿವಾರಿಸಿ, ಸುಗಮ ಕಾಮಗಾರಿಗೆ ದಾರಿ ಮಾಡಿಕೊಟ್ಟಿದೆ. ಹೀಗಿದ್ದರೂ ಕಾಮಗಾರಿ ಮಾತ್ರ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ಜಿಲ್ಲಾಧಿಕಾರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಿಗಳು ಮತ್ತು ಗುತ್ತಿಗೆದಾರರ ಇಂತಹ ನಿಧಾನಗತಿಯ ಧೋರಣೆ ಸಾರ್ವಜನಿಕರ ಮತ್ತು ಸ್ಥಳೀಯ ಜನಪ್ರತಿನಿಧಿಗಳ ತೀವ್ರ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಹಂಪಿ ರಸ್ತೆಯು ಹೊಸಪೇಟೆಯ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಇಲ್ಲಿನ ರೈಲ್ವೆ ಗೇಟ್ ಬಳಿ ಸೇತುವೆ ಕೆಲಸ ಅರ್ಧಕ್ಕೆ ನಿಂತಿರುವುದರಿಂದ ನಿತ್ಯ ಸಾವಿರಾರು ವಾಹನ ಸವಾರರು ಹಾಗೂ ಸಾರ್ವಜನಿಕರು ಸಂಚಾರ ದಟ್ಟಣೆಯಲ್ಲಿ ಸಿಲುಕಿ ನರಕಯಾತನೆ ಅನುಭವಿಸುತ್ತಿದ್ದಾರೆ. ಇನ್ಮುಂದೆ ಯಾವುದೇ ರೀತಿಯ ಕುಂಟುನೆಪ ಹೇಳಿದರೂ ಕೇಳುವುದಿಲ್ಲ. ಕಾಮಗಾರಿಯಲ್ಲಿ ಕಂಡುಬರುತ್ತಿರುವ ಸಣ್ಣಪುಟ್ಟ ಲೋಪದೋಷಗಳನ್ನು ತಕ್ಷಣವೇ ಸರಿಪಡಿಸಿಕೊಂಡು ತ್ವರಿತಗತಿಯಲ್ಲಿ ಕೆಲಸ ನಿರ್ವಹಿಸಬೇಕು. ಜೂನ್ ಅಂತ್ಯಕ್ಕೆ ಕಾಮಗಾರಿಯ ಅಭಿವೃದ್ಧಿ ಕಾರ್ಯಗಳ ಪ್ರಗತಿಯ ಸಂಪೂರ್ಣ ವರದಿ ನೀಡಬೇಕು ಎಂದು ತಾಕೀತು ಮಾಡಿದರು.
ನಿಗದಿತ ಆಗಸ್ಟ್ ಅವಧಿಗೆ ಮುಖ್ಯ ಸೇತುವೆಯೊಂದಿಗೆ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅತ್ಯಗತ್ಯವಾಗಿರುವ ಸೇವಾ ರಸ್ತೆಯನ್ನೂ ಪೂರ್ಣಗೊಳಿಸಿ ಬಳಕೆಗೆ ಮುಕ್ತಗೊಳಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಕಾಮಗಾರಿ ಪೂರ್ಣಗೊಳಿಸುವ ಭರದಲ್ಲಿ ಗುಣಮಟ್ಟದಲ್ಲಿ ರಾಜಿಯಿಲ್ಲದೇ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.
ರೈಲ್ವೆ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಧೋರಣೆ ಸಹಿಸುವುದಿಲ್ಲ. ನಿಗದಿಪಡಿಸಿದ ಆಗಸ್ಟ್ ಅಂತ್ಯದ ಗಡುವಿನೊಳಗೆ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಬೇಕು ಎಂದು ಡಿಸಿ ಎಚ್ಚರಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಎಸ್. ಜಾಹ್ನವಿ, ಉಪವಿಭಾಗಾಧಿಕಾರಿ ವಿವೇಕಾನಂದ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ದಾಮೋದರ, ತಹಸೀಲ್ದಾರ್ ಶ್ರುತಿ ಎಂ., ಲೋಕೋಪಯೋಗಿ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್, ರೈಲ್ವೆ ಇಲಾಖೆಯ ಪರವಾಗಿ ನೈಋತ್ಯ ರೈಲ್ವೆ (ಹುಬ್ಬಳ್ಳಿ) ವಿಭಾಗದ ಮುಖ್ಯ ಎಂಜಿನಿಯರ್ ಹಾಗೂ ಕಾಮಗಾರಿಯ ಗುತ್ತಿಗೆದಾರರು ಸಭೆಯಲ್ಲಿ ಉಪಸ್ಥಿತರಿದ್ದರು.