ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸರ್ಕಾರ ಕಾಲಮಿತಿಯಲ್ಲಿ 65 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮುಗಿಸುವಂತೆ ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಆಗ್ರಹಿಸಿದರು.

ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿ ಗೊಂದಲದಿಂದ ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿಯಲಾಗಿತ್ತು ಎನ್ನುವ ಮುಖ್ಯಮಂತ್ರಿಗಳ ಹೇಳಿಕೆ ಬಾಲಿಶವಾದದ್ದು. ಮೀಸಲಾತಿ ಹೆಸರಿನಲ್ಲಿ ಸರ್ಕಾರ ಪರಿಶಿಷ್ಟ ಜಾತಿ, ವರ್ಗದವರ ಮೇಲೆ ಸಾಮಾನ್ಯ ವರ್ಗದವರನ್ನು ಎತ್ತಿಕಟ್ಟು ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಮೀಸಲಾತಿ ಪ್ರಮಾಣವನ್ನು ಈ ಹಿಂದೆ ಪರಿಶಿಷ್ಟ ಜಾತಿಗೆ ಶೇ.15 ರಿಂದ 18 ಮತ್ತು ಪರಿಶಿಷ್ಟ ಪಂಗಡಗಳಿಗೆ 3 ರಿಂದ 7 ಕ್ಕೆ ಹೆಚ್ಚಿಸಲಾಗಿತ್ತು. ಸರ್ಕಾರ ಒಳ ಮೀಸಲು ನೀತಿಯಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದೆ ಒಳ ಮೀಸಲು ಹೆಸರಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳನ್ನು ಪರಸ್ಪರ ವಿರುದ್ಧ ಧಿಕ್ಕಿನಲ್ಲಿ ನಿಲ್ಲಿಸುತ್ತಿದೆ ಎಂದು ದೂರಿದರು.

ರಾಜ್ಯದ ಅತ್ಯಂತ ಹಿಂದುಳಿದ ಅಲೆಮಾರಿ ಜನಾಂಗವನ್ನು ಅಸ್ಪೃಶ್ಯ ಜಾತಿಗಳ ಗುಂಪಿಗೆ ಸೇರಿಸಿ ಸಿದ್ದರಾಮಯ್ಯ ಸರ್ಕಾರ ಅಲೆಮಾರಿ ಜಾತಿಗಳಿಗೆ ಅನ್ಯಾಯ ಮಾಡಿದೆ. ಮೀಸಲಾತಿ ಹೆಸರಿನಲ್ಲಿ ಸಿದ್ದರಾಮಯ್ಯ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನಡುವೆ ಒಡೆದು ಆಳುವ ನೀತಿ ಅನುಸರಿಸಿದ್ದಾರೆ ಎಂದು ಆರೋಪಿಸಿದರು.


ಅಹಿಂದ ಹೆಸರಿನಲ್ಲಿ ರಾಜಕೀಯವಾಗಿ ಮುನ್ನೆಲೆಗೆ ಬಂದ ಸಿದ್ದರಾಮಯ್ಯ ಈಗ ಅಹಿಂದ ನಾಯಕರಾಗಿ ಉಳಿದಿಲ್ಲ. ಪರಿಶಿಷ್ಟ ಜಾತಿ ಪಂಗಡಗಳ ಅಭಿವೃದ್ಧಿಗೆ ಮೀಸಲಾದ 40 ಸಾವಿರ ಕೋಟಿ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿ ಶೋಷಿತ ಸಮುದಾಯಗಳಿಗೆ ಕಾಂಗ್ರೆಸ್ ವಂಚನೆ ಮಾಡಿದೆ ಎಂದು ಆಕ್ರೋಶ ಹೊರ ಹಾಕಿದರು.

ರಾಜ್ಯವನ್ನು ಆಳಿದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮನುವಾದಿಗಳ ಹಿಡಿತದಲ್ಲಿಯೇ ಕೆಲಸ ಮಾಡಿವೆ. ತುಟಿ ಮೇಲೆ ಮಾತ್ರ ದಲಿತ ಕಲ್ಯಾಣದ ಮಾತುಗಳನ್ನಾಡಿ ಶೋಷಿತ ಸಮುದಾಯಗಳನ್ನು ಮತ ಬ್ಯಾಂಕ್ ರಾಜಕಾರಣಕ್ಕೆ ಸೀಮಿತಗೊಳಿಸಿವೆ ಎಂದು ವಾಗ್ದಾಳಿ ನಡೆಸಿದರು.

ಬಹುಜನ ಸಮಾಜ ಪಕ್ಷ ಕೇವಲ ದಲಿತರ ಪಕ್ಷವಲ್ಲ. ಅದು ಸರ್ವ ಜನರ ಪಕ್ಷ. ನಾಡಿನ ರೈತರು ಯಾವುದೇ ಜಾತಿಗೆ ಸೇರಿದವರಲ್ಲ. ಸರ್ಕಾರ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗಧಿ ಪಡಿಸಬೇಕು, ರೈತರು ಬೆಳೆದ ಬೆಳೆಗಳ ಸಂರಕ್ಷಣೆಗೆ ಶೀಥಲೀಕರಣ ವ್ಯವಸ್ಥೆ ಹೊಂದಿರುವ ಗೋದಾಮುಗಳನ್ನು ಪ್ರತಿ ತಾಲೂಕು ಕೇಂದ್ರಗಳಲ್ಲಿಯೂ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಎಸ್ಪಿ ರಾಜ್ಯ ಉಸ್ತುವಾರಿ ಗಂಗಾಧರ್, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಚಲುವರಾಜು, ಜಿಲ್ಲಾ ಕಾರ್ಯದರ್ಶಿ ಗೋವಿಂದರಾಜು, ಜಿಲ್ಲಾ ಖಜಾಂಚಿ ಗಂಗಾಧರ್, ತಾಲೂಕು ಘಟಕದ ಅಧ್ಯಕ್ಷ ನವೀನ್, ಉಪಾಧ್ಯಕ್ಷೆ ವನಜಾಕ್ಷಿ, ಮುಖಂಡ ಬಸ್ತಿ ಪ್ರದೀಪ್ ಸೇರಿದಂತೆ ಹಲವರು ಇದ್ದರು.