ಎಲ್ಲಾ ಇಲಾಖೆಗಳ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಕೆಲಸಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಬೇಕು. ಸಾರ್ವಜನಿಕರು ತಮ್ಮ ಸಮಸ್ಯೆ ಹಾಗೂ ಅಹವಾಲುಗಳೊಂದಿಗೆ ಇಲಾಖೆಗಳ ಕಚೇರಿಗಳಿಗೆ ಬಂದಾಗ ಅವರಿಗೆ ಸೂಕ್ತ ರೀತಿಯಲ್ಲಿ ಶೀಘ್ರವಾಗಿ ಸ್ಪಂದನೆ ಮಾಡಬೇಕು ಈ ವಿಚಾರದಲ್ಲಿ ಯಾವುದೇ ವಿಳಂಬ ಧೋರಣೆಯನ್ನು ಅನುಸರಿಸದೇ ಅಗತ್ಯ ಸೇವೆ ಮತ್ತು ನೆರವು ಒದಗಿಸಬೇಕು ಎಂದು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಎಲ್ಲಾ ಇಲಾಖೆಗಳ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಕೆಲಸಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಬೇಕು. ಸಾರ್ವಜನಿಕರು ತಮ್ಮ ಸಮಸ್ಯೆ ಹಾಗೂ ಅಹವಾಲುಗಳೊಂದಿಗೆ ಇಲಾಖೆಗಳ ಕಚೇರಿಗಳಿಗೆ ಬಂದಾಗ ಅವರಿಗೆ ಸೂಕ್ತ ರೀತಿಯಲ್ಲಿ ಶೀಘ್ರವಾಗಿ ಸ್ಪಂದನೆ ಮಾಡಬೇಕು ಈ ವಿಚಾರದಲ್ಲಿ ಯಾವುದೇ ವಿಳಂಬ ಧೋರಣೆಯನ್ನು ಅನುಸರಿಸದೇ ಅಗತ್ಯ ಸೇವೆ ಮತ್ತು ನೆರವು ಒದಗಿಸಬೇಕು ಎಂದು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸ್ಥಳೀಯ ತಾಪಂ ಕಚೇರಿ ಸಭಾಂಗಣದಲ್ಲಿ ರಾಯಚೂರು ತಾಲೂಕು ಪಂಚಾಯಿತಿಯ 9ನೇ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕುಡಿಯುವ ನೀರಿನ ಸಮಸ್ಯೆ ಕುರಿತು ಮಾಹಿತಿ ನೀಡುವುದರ ಬಗ್ಗೆ ಆರ್‌ಡಬ್ಲ್ಯೂಎಸ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ತಿಳಿಸಿದರು. ಈ ವೇಳೆ ಅವರು ಸಭೆಗೆ ಗೈರು ಆಗಿರುವುದನ್ನು ಗಮನಿಸಿದ ಶಾಸಕರು ತಕ್ಷಣ ಅವರಿಗೆ ನೋಟಿಸ್ ಜಾರಿ ಮಾಡಿ, ಜಿಪಂ ಸಿಇಒ ಗಮನಕ್ಕೆ ತಂದು ಅಮಾನತು ಕ್ರಮಕ್ಕೆ ಶಿಫಾರಸು ಮಾಡಲು ಅಧಿಕಾರಿಗಳಿಗೆ ತಿಳಿಸಿದರು.

ತೀವ್ರ ಮಳೆ ಕೊರತೆ, ಬರಗಾಲ ಆವರಿಸಿದ್ದು, ಭವಿಷ್ಯದಲ್ಲಿ ಬೇಸಿಗೆಯು ಶುರುವಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಇದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು, ಗ್ರಾಪಂ ಆಡಳಿತಾಧಿಕಾರಿಗಳು ತಮ್ಮ ವ್ಯಾಪ್ತಿಯ ಹಳ್ಳಿಗಳಿಗೆ ಹೋಗಿ ಪರಿಶೀಲನೆ ನಡೆಸಿ ತೊಂದರೆಯಾಗಿರುವ ಹಳ್ಳಿಗಳ ಗುರುತಿಸಬೇಕು, ಅಲ್ಲಿಯೇ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಳನ್ನು ಅರಿತು ಅವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವರದಿಯನ್ನು ಸಲ್ಲಿಸುವಂತೆ ತಿಳಿಸಿದರು.

ತಾಲೂಕಿನಲ್ಲಿ ಬರಗಾಲದಿಂದಾಗಿ ಮುಂಗಾರು ಹಂಗಾಮಿನಲ್ಲಿ 58 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಹಿಂಗಾರು ಬಿತ್ತನೆಯೂ ಸಾಧ್ಯವಾಗಿಲ್ಲ, ಆದ್ದರಿಂದ ರೈತರಿಗೆ ಸಮರ್ಪಕವಾಗಿ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು, ರಾಷ್ಟ್ರೀಯ ಹೆದ್ದಾರಿ ಅಕ್ಕ-ಪಕ್ಕ ರೈತರ ಜಮೀನುಗಳಿಗೆ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಎನ್ಎಚ್ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮೀಣ ಭಾಗದ ಜನರ ಕುಂದುಕೊರತೆಗಳಿಗೆ ತ್ವರಿತವಾಗಿ ಸ್ಪಂದಿಸುವುದು, ಕುಡಿಯುವ ನೀರು, ರಸ್ತೆ, ಸ್ವಚ್ಛತೆ, ವಿದ್ಯುತ್ ಸೇರಿದಂತೆ ಸಾರ್ವಜನಿಕರಿಗೆ ಸಂಬಂಧಿಸಿದ ಮೂಲಭೂತ ಸಮಸ್ಯೆಗಳಿಗೆ ಆದ್ಯತೆ ನೀಡಿ ಪರಿಹಾರ ಕಂಡುಕೊಳ್ಳಬೇಕು. ಸರ್ಕಾರದ ಅನುದಾನ ಮತ್ತು ಯೋಜನೆಗಳು ಸಮರ್ಪಕವಾಗಿ ಬಳಕೆಯಾಗುವುದರ ಜೊತೆಗೆ ಯಾವುದೇ ಅರ್ಹ ಫಲಾನುಭವಿಗಳು ಸೌಲಭ್ಯಗಳಿಂದ ವಂಚಿತರಾಗದಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು, ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ, ಅಭಿವೃದ್ಧಿ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಂಡು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಯಿತು.

ಸಭೆಯಲ್ಲಿ 2026-27ನೇ ಸಾಲಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ, ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನ, ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಹಾಗೂ ಸಾರ್ವಜನಿಕರಿಗೆ ಒದಗಿಸಲಾಗುತ್ತಿರುವ ಸೇವೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಸಭೆಯಲ್ಲಿ ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ಜಿಪಂ ಯೋಜನಾಧಿಕಾರಿ ಶರಣಬಸವರಾಜ ಕೆಸರಟ್ಟಿ, ತಹಸೀಲ್ದಾರ್ ಸುರೇಶ ವರ್ಮಾ, ಡಿವೈಎಸ್ಪಿ ಶಾಂತವೀರ, ತಾಪಂ ಇಒ ಚಂದ್ರಶೇಖರ್ ಪವಾರ ಸೇರಿ ವಿವಿಧ ಇಲಾಖೆಗಳ ಅಧಿಕಾರಿ-ಸಿಬ್ಬಂದಿ ವರ್ಗದವರು ಹಾಜರಿದ್ದರು.