10 ತಿಂಗಳಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಿ

| Published : Nov 13 2024, 12:06 AM IST

ಸಾರಾಂಶ

ದೊಡ್ಡಬಳ್ಳಾಪುರ: ಮಂದಗತಿಯಲ್ಲಿ ಸಾಗುತ್ತಿರುವ ಬೆಂಗಳೂರು- ತುಮಕೂರು ಹೆದ್ದಾರಿ 6 ಪಥದ ರಸ್ತೆ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಮುಗಿಸುವಂತೆ‌ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಕೇಂದ್ರ ಜಲಶಕ್ತಿ, ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಸೂಚಿಸಿದರು.

ದೊಡ್ಡಬಳ್ಳಾಪುರ: ಮಂದಗತಿಯಲ್ಲಿ ಸಾಗುತ್ತಿರುವ ಬೆಂಗಳೂರು- ತುಮಕೂರು ಹೆದ್ದಾರಿ 6 ಪಥದ ರಸ್ತೆ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಮುಗಿಸುವಂತೆ‌ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಕೇಂದ್ರ ಜಲಶಕ್ತಿ, ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಸೂಚಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೋಲ್ ಬಳಿಯಿಂದ ತುಮಕೂರು ಮಾರ್ಗವಾಗಿ ಟಿ.ಬೇಗೂರು, ಕುಲವನಹಳ್ಳಿ, ಹನುಮಂತಪುರ, ಬಿಲ್ಲನಕೋಟೆ ನೆಲಮಂಗಲ ದಾಬಸ್‌ಪೇಟೆ ಭಾಗಗಳಲ್ಲಿ ಮಂಗಳವಾರ ರಸ್ತೆ ಕಾಮಗಾರಿ ವೀಕ್ಷಿಸಿದ ಅವರು ನಿಧಾನಗತಿಯ ಕಾಮಗಾರಿ ಬಗೆಗೆ ತೀವ್ರ ಬೇಸರ ವ್ಯಕ್ತಪಡಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

2016ರಲ್ಲಿ ಆರಂಭವಾದ ಕಾಮಗಾರಿ ಕಳೆದ 8 ವರ್ಷಗಳಿಂದ ಕುಂಟುತ್ತಾ ಸಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೋಲ್‌ನಿಂದ ತುಮಕೂರು ವರೆಗೆ 45 ಕಿಮೀ ಕಾಮಗಾರಿ ನಡೆಯುತ್ತಿದೆ. ಒಟ್ಟು 2048 ಕೋಟಿ ರು. ಕೇಂದ್ರ ಸರ್ಕಾರ ಭರಿಸಿದೆ. ಆದರೂ 6 ತಿಂಗಳಿಂದ ಕಾಮಗಾರಿ ಸ್ಥಗಿತಗೊಂಡಿದ್ದು, ಇಂದಿನಿಂದಲೇ ಚಾಲನೆ ದೊರೆತಿದೆ‌. ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೆಲವೆಡೆ ಕಾಮಗಾರಿ ವಿಳಂಬವಾಗಿದ್ದು ನಿವಾರಣೆಯಾಗಿದೆ. ಪ್ರಸ್ತುತ 4 ಕಡೆ ಮಾತ್ರ ಭೂ ಸ್ವಾಧೀನ ಸಮಸ್ಯೆಯಿದ್ದು ಶೀಘ್ರದಲ್ಲೇ ಬಗೆಹರಿಯಲಿದೆ ಎಂದರು.

ಏನನ್ನು ಕೇಳಿದರೂ ನೋಡ್ತೇವೆ ಮಾಡ್ತೇವೆ ಅನ್ನುತ್ತೀರಿ, ಹಾಗಾದರೆ ಇಷ್ಟುದಿನ ತಾವು ಮಾಡಿರುವುದೇನು? ಇನ್ನು ಮುಂದೆ ಸಬೂಬುಗಳನ್ನು ಸಹಿಸುವುದಿಲ್ಲ. ನಿಮ್ಮ ಇಂತಹ ಕೆಲಸಗಳಿಂದ ರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗಿ ಜನ ಪ್ರಾಣ ಕಳೆದುಕೊಳ್ಳುತಿದ್ದಾರೆ. ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿಗೆ ಕಾಮಗಾರಿ ವಿಳಂಬದ ಬಗ್ಗೆ ಗಮನಕ್ಕೆ ತಂದ ಹಿನ್ನೆಲೆ ಪರಿಶೀಲಿಸಿ ಮಾಹಿತಿ ನೀಡಿದರೆ ಕಾಮಗಾರಿ ಚುರುಕುಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದು ಭರವಸೆ ನೀಡಿದುದರಿಂದ ಕಾಮಗಾರಿಗಳನ್ನು ವೀಕ್ಷಣೆ ಮಾಡಲಾಗುತ್ತಿದೆ ಎಂದರು.

ಹೆದ್ದಾರಿಯ ಗುಣಮಟ್ಟ, ಸುರಕ್ಷತೆ, ಸಾರ್ವಜನಿಕರಿಗೆ ನೀಡುವ ಸೌಲಭ್ಯಗಳು ಬಗೆಗೆ ಮಾಹಿತಿ ಪಡೆದು, ಸರ್ವೀಸ್ ರಸ್ತೆಗಳನ್ನು ಸರಿಯಾಗಿ ನಿರ್ವಹಿಸಲು ಸೂಚಿಸಿದರು. ರಸ್ತೆಯುದ್ದಕ್ಕೂ ಅಕ್ಕಪಕ್ಕದ ನಿವಾಸಿಗಳು ಸಚಿವರ ಬಳಿ ಹೆದ್ದಾರಿಗೆ ಸಂಬಂಧಿಸಿದಂತೆ ತಮ್ಮ ಅಗತ್ಯತೆಗಳನ್ನು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಎಸ್‌ಟಿ ಆರ್ ಆರ್ ರಸ್ತೆಗೆ ಭೂಸ್ವಾಧೀನವಾಗಿರುವ ರೈತರಿಗೆ ಹಣ ಬಿಡುಗಡೆಗೊಳಿಸಲು ಸರ್ಕಾರದ ಮಟ್ಟದಲ್ಲಿ ಚರ್ಚಿಸುವಂತೆ ರೈತರು ಮನವಿ ಮಾಡಿದರು. ನೆಲಮಂಗಲ ಟೋಲ್ ಬಳಿಯಿಂದ ತುಮಕೂರು ಮಾರ್ಗವಾಗಿ ಟಿ.ಬೇಗೂರು, ಕುಲುವನಹಳ್ಳಿ, ಹನುಮಂತಪುರ, ಬಿಲ್ಲನಕೋಟೆ, ಹೊಸನಿಜಗಲ್ ಗ್ರಾಮಗಳಲ್ಲಿ ರಸ್ತೆ ಕಾಮಗಾರಿ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಶಿವಶಂಕರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿದ ಭೂ ಸ್ವಾಧೀನಾಧಿಕಾರಿ ಅಪೇಕ್ಷಾ ಸತೀಶ್ ಪವಾರ್, ಎನ್‌ಡಿಎ ಮಾಜಿ ಅಧ್ಯಕ್ಷ ಮಲ್ಲಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಹಾಜರಿದ್ದರು.

(ಚೆಂದದ ಒಂದು ಫೋಟೋ ಮಾತ್ರ ಬಳಸಿ)

ಪೋಟೋ 1 :

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಟೋಲ್‌ ಬಳಿ ಕೇಂದ್ರ ಸಚಿವ ವಿ.ಸೋಮಣ್ಣ ಹೆದ್ದಾರಿ ಕಾಮಗಾರಿ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.