ಸುವರ್ಣ ಕರ್ನಾಟಕ ಕಲಾಭವನ ಶೀಘ್ರ ಪೂರ್ಣಗೊಳಿಸಿ

| Published : Nov 12 2025, 03:15 AM IST

ಸಾರಾಂಶ

ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಲಾಪ್ರತಿಭೋತ್ಸವದಂತಹ ಕಾರ್ಯಕ್ರಮಗಳು ಸಹಕಾರಿಯಾಗಿದೆ ಎಂದು ಅನಿಲ್‌ ಎಚ್‌ ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಯ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಲಾಪ್ರತಿಭೋತ್ಸವದಂತಹ ಕಾರ್ಯಕ್ರಮಗಳು ಸಹಕಾರಿಯಾಗಿದ್ದು, ಜಿಲ್ಲೆಯ ಪ್ರತಿಭಾವಂತ ಕಲಾವಿದರೂ ಸೇರಿದಂತೆ ಕಲಾಪ್ರದರ್ಶನಗಳಿಗೆ ಸೂಕ್ತ ಕಲಾಭವನದ ಕನಸು ಶೀಘ್ರ ಸಾಕಾರಗೊಳ್ಳಬೇಕು ಎಂದು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ಕರೆ ನೀಡಿದ್ದಾರೆ. ನಗರದ ಗಾಂಧಿ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿತ ಕಲಾಪ್ರತಿಭೋತ್ಸವದ ಎರಡನೇ ದಿನದ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೊಡಗಿನಲ್ಲಿ ವರ್ಷದ 5-6 ತಿಂಗಳು ಧಾರಾಕಾರ ಮಳೆಯಿಂದಾಗಿ ಯಾವುದೇ ಸಾಂಸ್ಕೃತಿಕ ಚಟುವಟಿಕೆ ಕೈಗೊಳ್ಳಲು ಕಷ್ಟಸಾಧ್ಯವಾಗಿತ್ತು, ಹೀಗಿದ್ದರೂ ಜಿಲ್ಲೆಯಲ್ಲಿನ ಅನೇಕ ಉದಯೋನ್ಮುಖ ಕಲಾಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 8 ವರ್ಷಗಳ ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾಪ್ರತಿಭೋತ್ಸವದಂತಹ ಕಾರ್ಯಕ್ರಮ ಮರು ಚಾಲನೆಗೊಂಡಿರುವುದು ಶ್ಲಾಘನೀಯ ಎಂದರು. ನೈಜ ಪ್ರತಿಭೆಗಳಿಗೆ ಕೊಡಗು ಎಂದೂ ನಿರಾಶೆ ಉಂಟು ಮಾಡುವುದಿಲ್ಲ. ಕಲಾಸಕ್ತ ಯುವಪೀಳಿಗೆ ಕಲಾಪ್ರತಿಭೋತ್ಸವದಂತಹ ಮತ್ತಷ್ಟು ಕಾರ್ಯಕ್ರಮಗಳನ್ನು ಸದುಪಯೋಗಪಡಿಸಿಕೊಂಡು ತಮ್ಮೊಳಗಿನ ಕಲಾ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕು ಎಂದು ಅನಿಲ್ ಎಚ್.ಟಿ. ಅವರು ಕರೆ ನೀಡಿದರು. ಮಡಿಕೇರಿ ಮತ್ತು ಕುಶಾಲನಗರದಲ್ಲಿ ಕಲಾ ಭವನ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಕಲಾಭವನವನ್ನು ಶೀಘ್ರ ಲೋಕಾರ್ಪಣೆ ಮಾಡಿದ್ದೇ ಆದಲ್ಲಿ ಕಲಾ ಕಾರ್ಯಕ್ರಮಗಳಿಗೆ ಸಾಕಷ್ಟು ನೆರವಾಗುತ್ತದೆ ಎಂದು ಅನಿಲ್ ಸಲಹೆ ಮಾಡಿದರು.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಖಜಾಂಜಿ ಪುದಿಯನೆರವನ ರೇವತಿ ರಮೇಶ್ ಮಾತನಾಡಿ, ವಿದ್ಯಾರ್ಥಿಗಳನ್ನು ಇಂತಹ ಸ್ಪರ್ಧಾ ಕಾರ್ಯಕ್ರಮಗಳಿಗೆ ಕಳುಹಿಸುವ ನಿಟ್ಟಿನಲ್ಲಿ ಆಯಾಯ ಶಾಲಾ ಶಿಕ್ಷಕ ವೃಂದ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಸ್ಪರ್ಧೆಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುವಂತೆ ಕರೆ ನೀಡಿದರು.ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ ಕುಶಾಲಪ್ಪ, ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮ್ಮದ್, ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಹಿರಿಯ ಕಲಾವಿದರಾದ ಬಿ.ಎಸ್.ಶಂಕರಯ್ಯ, ಭರಮಣ್ಣ ಬೆಟಗೇರಿ, ರಾಜು, ಮಂಜುಭಾರ್ಗವಿ, ಉ.ರಾ.ನಾಗೇಶ್, ಸುಶೀಲಾ, ಜಲಜಾ ಹಾಜರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಸ್ವಾಗತಿಸಿ, ಮಣಜೂರು ಮಂಜುನಾಥ್ ನಿರೂಪಿಸಿ ವಂದಿಸಿದರು. ಹಲವು ಶಾಲಾ ವಿದ್ಯಾರ್ಥಿಗಳು ಕಲಾ ಪ್ರತಿಭೋತ್ಸವದಲ್ಲಿ ಪಾಲ್ಗೊಂಡಿದ್ದರು.