ಜುಲೈ ಅಂತ್ಯದೊಳಗೆ ಯುಜಿಡಿ ಕಾಮಗಾರಿ ಪೂರ್ಣಗೊಳಿಸಿ

| Published : Jun 12 2024, 12:35 AM IST

ಜುಲೈ ಅಂತ್ಯದೊಳಗೆ ಯುಜಿಡಿ ಕಾಮಗಾರಿ ಪೂರ್ಣಗೊಳಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಯುಜಿಡಿ ಕಾಮಗಾರಿ ಮುಗಿದ ಬಳಿಕ ಸಿಸಿ ರಸ್ತೆ ಕಾಮಗಾರಿ ಕೈಗೊಳ್ಳಬೇಕು. ನಿರಂತರ ನೀರು ಯೋಜನೆಯಡಿ 200 ಮೀಟರ್ ನಷ್ಟು ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಬಾಕಿ ಇದೆ. ಇದನ್ನು ತ್ವರಿತವಾಗಿ ಮಾಡಬೇಕು.

ಹುಬ್ಬಳ್ಳಿ:

ಆ‌ರ್.ಎನ್. ಶೆಟ್ಟಿ ರಸ್ತೆಯಲ್ಲಿ ಕೈಗೊಂಡಿರುವ ಒಳಚರಂಡಿ ಕೊಳವೆ ಮಾರ್ಗ (ಯುಜಿಡಿ) ಅಳವಡಿಕೆ ಕಾಮಗಾರಿಯನ್ನು ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಅವರು ಅಲ್ಲಿನ ಗೋಕುಲ ರಸ್ತೆಯಿಂದ ಶ್ರೀ ಸಿದ್ಧಾರೂಢ ಸ್ವಾಮಿ ಮಠಕ್ಕೆ ಸಂಪರ್ಕ ಕಲ್ಪಿಸುವ ಆರ್‌.ಎನ್‌. ಶೆಟ್ಟಿ ರಸ್ತೆಯಲ್ಲಿ ₹ 77.80 ಲಕ್ಷ ವೆಚ್ಚದಲ್ಲಿ ಕೈಗೊಂಡಿರುವ ಕಾಮಗಾರಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. ಆನಂತರ ಅಕ್ಷಯ ಪಾರ್ಕ್ ಅಪಾರ್ಟ್‌ಮೆಂಟ್ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಈ ಮಾರ್ಗದಲ್ಲಿ ಯುಜಿಡಿ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದೆ ಎಂದು ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿದೆ. ಈಗಾಗಲೇ ಶೇ. 60ರಿಂದ 70 ರಷ್ಟು ಕಾಮಗಾರಿ ಪೂರ್ಣಗೊಂಡಿವೆ. ಇಷ್ಟು ದಿನ ಚುನಾವಣೆ ಸಬೂಬು ಹೇಳಿದ್ದೀರಿ. ಇದೀಗ ಮಳೆಗಾಲ ಶುರುವಾಗಿದ್ದು ಸಬೂಬು ಹೇಳದೆ ನಿಗದಿಗೊಳಿಸಿದ ದಿನಾಂಕದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಶಾಸಕರು ಸೂಚಿಸಿದರು.

ಈ ರಸ್ತೆಯಲ್ಲಿ ಯುಜಿಡಿ ಕಾಮಗಾರಿ ಮುಗಿದ ಬಳಿಕ ಸಿಸಿ ರಸ್ತೆ ಕಾಮಗಾರಿ ಕೈಗೊಳ್ಳಬೇಕು. ನಿರಂತರ ನೀರು ಯೋಜನೆಯಡಿ 200 ಮೀಟರ್ ನಷ್ಟು ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಬಾಕಿ ಇದೆ. ಇದನ್ನು ತ್ವರಿತವಾಗಿ ಮಾಡಬೇಕು ಎಂದು ನಿರ್ದೇಶನ ನೀಡಿದರು.

1,600 ಮೀಟ‌ರ್ ಯುಜಿಡಿ ಕಾಮಗಾರಿಯಲ್ಲಿ 600 ಮೀಟರ್ ಬಾಕಿ ಇದೆ. ಪೈಪ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ವಿಳಂಬವಾಗಿತ್ತು. ಇದೀಗ ನಮ್ಮ ಬಳಿ 150 ಮೀಟರ್ ಪೈಪ್ ಲಭ್ಯವಿದೆ. ಉಳಿದ 450 ಮೀಟರ್ ಪೈಪ್ ಖರೀದಿಸಲು ತ್ವರಿತ ಕ್ರಮಕೈಗೊಳ್ಳಲಿದ್ದೇವೆ. ಜುಲೈ 15ರೊಳಗೆ ಕಾಮಗಾರಿ ಮುಗಿಸಿಕೊಡುತ್ತೇವೆ ಎಂದು ಗುತ್ತಿಗೆದಾರರು ಸಭೆಗೆ ಮಾಹಿತಿ ನೀಡಿದರು. ಜೂ. 20ರೊಳಗೆ ನಿರಂತರ ನೀರು ಯೋಜನೆಯ ಅಡಿ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದು ಎಲ್ ಆ್ಯಂಡ್‌ ಟಿ ಕಂಪನಿಯ ಪ್ರತಿನಿಧಿ ತಿಳಿಸಿದರು.

ಈ ವೇಳೆ ಪಾಲಿಕೆಯ ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ, ಪಾಲಿಕೆ ಸದಸ್ಯರಾದ ಚೇತನ ಹಿರೇಕೆರೂರ, ಎಸ್. ಸಂದಿಲ್ ಕುಮಾರ, ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್ ವಿಠಲ ತುಬಾಕೆ, ಸಹಾಯಕ ಆಯುಕ್ತ ಚಂದ್ರೇಶೇಖರ ಮಾಲಿಪಾಟೀಲ, ಕೃಷ್ಣಾ ಗಂಡಗಾಳೇಕರ, ಹರೀಶ ಜಂಗಲಿ, ಮೋಹನ ಬರೋಡೆ ಸೇರಿದಂತೆ ಸ್ಥಳೀಯರಿದ್ದರು.