ಕನ್ನಡಪ್ರಭ ವಾರ್ತೆ ಸಕಲೇಶಪುರ ಊರಿನ ಸ್ವಚ್ಛತೆ ಮಾಡುವ ಪೌರ ಕಾರ್ಮಿಕರ ಶಾಪ ನಮಗೆ ತಟ್ಟುವ ಮೊದಲೇ ಅವರ ಮನೆಗಳ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಹಸ್ತಾಂತರ ಮಾಡಬೇಕು ಎಂದು ಕೊಳಚೆ ನಿರ್ಮೂಲನೆ ಮಂಡಳಿ ಅಧಿಕಾರಿಗಳಿಗೆ ಶಾಸಕ ಸಿಮೆಂಟ್ ಮಂಜು ಕಠಿಣ ಸೂಚನೆಯನ್ನು ನೀಡಿದರು.ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸಕಲೇಶಪುರ ಪುರಸಭಾ ವ್ಯಾಪ್ತಿಯಲ್ಲಿ ಪೌರಕಾರ್ಮಿಕರಿಗಾಗಿ ನಿರ್ಮಿಸಲಾಗುತ್ತಿರುವ ಮನೆಗಳ ಕಾಮಗಾರಿ ಕಳೆದ ಎಂಟು ವರ್ಷಗಳಿಂದ ನಿಧಾನಗತಿಯಲ್ಲಿ ಸಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು. ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಸುಮಾರು 120 ಮನೆಗಳ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, ಎಂಟು ವರ್ಷವಾದರೂ ಇನ್ನೂ ಪೂರ್ಣಗೊಂಡಿಲ್ಲ. ಪೌರಕಾರ್ಮಿಕರು ತಾತ್ಕಾಲಿಕವಾಗಿ ಟಾರ್ಪಲ್ ಹಾಕಿಕೊಂಡು ದುಸ್ಥಿತಿಯಲ್ಲಿ ವಾಸಿಸುತ್ತಿರುವುದನ್ನು ನಾನು ಹಲವು ಬಾರಿ ಗಮನಿಸಿದ್ದೇನೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಈಗಾಗಲೇ ಎರಡು, ಮೂರು ಬಾರಿ ಸಭೆ ನಡೆಸಿದ್ದರೂ ಕಾಮಗಾರಿ ವೇಗ ಪಡೆದುಕೊಂಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದಾಗ 19 ಮನೆಗಳು ಫೌಂಡೇಶನ್ ಹಂತದಲ್ಲಿ, 36 ಮನೆಗಳು ರೂಫಿಂಗ್ ಹಂತದಲ್ಲಿ ಮತ್ತು 65 ಮನೆಗಳು ಆರ್‌ಸಿಸಿ ಪೂರ್ಣಗೊಂಡು ಫಿನಿಶಿಂಗ್ ಹಂತದಲ್ಲಿವೆ ಎಂಬುದು ತಿಳಿದುಬಂದಿದೆ. ಫಿನಿಶಿಂಗ್ ಹಂತದಲ್ಲಿರುವ 65 ಮನೆಗಳನ್ನು ಮೊದಲ ಆದ್ಯತೆಯಾಗಿ ಪೂರ್ಣಗೊಳಿಸಿ ಪೌರಕಾರ್ಮಿಕರಿಗೆ ಹಸ್ತಾಂತರ ಮಾಡಬೇಕು, ಇದರಿಂದ ಅವರು ಟಾರ್ಪಲ್‌ನಲ್ಲಿ ವಾಸಿಸುವ ದುಸ್ಥಿತಿಯಿಂದ ಮುಕ್ತಿ ಪಡೆಯಲು ಸಾಧ್ಯವಾಗುತ್ತದೆ ಎಂದು ಸೂಚಿಸಿದರು. ಸಕಲೇಶಪುರದಲ್ಲಿ ಹೆಚ್ಚಿನ ಮಳೆಯಾಗುವ ಹಿನ್ನೆಲೆಯಲ್ಲಿ ಟಾರ್ಪಲ್ ಕಟ್ಟಿಕೊಂಡು ವಾಸಿಸುವುದು ತುಂಬಾ ಕಷ್ಟಕರ. ಆದ್ದರಿಂದ ಗುತ್ತಿಗೆದಾರರು ತಕ್ಷಣವೇ ಕಾಮಗಾರಿ ಆರಂಭಿಸಬೇಕು. ಸರ್ಕಾರದಿಂದ ಬಾಕಿ ಇರುವ ಹಣ ಬಿಡುಗಡೆಯಾಗಬೇಕಾದರೆ ನಾನು ಸ್ವತಃ ಸಚಿವರೊಂದಿಗೆ ಮಾತನಾಡಿ ಬಿಡುಗಡೆ ಮಾಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.ಈ ಕುರಿತು ಕೊಳಚೆ ನಿರ್ಮೂಲನ ಮಂಡಳಿಯ ಮುಖ್ಯ ಎಂಜಿನಿಯರ್‌ರೊಂದಿಗೆ ದೂರವಾಣಿ ಮೂಲಕವೂ ಮಾತನಾಡಿರುವುದಾಗಿ ತಿಳಿಸಿ, ಕಾಮಗಾರಿಗೆ ನಿಗದಿತ ಗಡುವು ನಿಗದಿ ಮಾಡಲಾಗಿದ್ದು, ಮುಂದಿನ ತಿಂಗಳೊಳಗೆ ಕೆಲಸಗಳನ್ನು ವೇಗಗೊಳಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಈ ವಿಚಾರವನ್ನು ಈಗ ನಡೆಯುತ್ತಿರುವ ಅಧಿವೇಶನದಲ್ಲೂ ಸಚಿವರ ಗಮನಕ್ಕೆ ತಂದು, ಅಗತ್ಯವಾದರೆ ವಿಧಾನಸಭೆಯಲ್ಲೂ ಚರ್ಚೆ ಮಾಡಿ ಪೌರಕಾರ್ಮಿಕರ ಮನೆಗಳ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.ಸಭೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ಮಹೇಶ್ವರಪ್ಪ, ಕೊಳಚೆ ನಿರ್ಮೂಲನೆ ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಕುಮಾರ್ ಈಶ್ವರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಹದೇವ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಪೌರಕಾರ್ಮಿಕರ ಮನೆಗಳ ಕಾಮಗಾರಿ ಮುಗಿಸಿ
ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಸುಮಾರು 120 ಮನೆಗಳ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, ಎಂಟು ವರ್ಷವಾದರೂ ಇನ್ನೂ ಪೂರ್ಣಗೊಂಡಿಲ್ಲ. ಪೌರಕಾರ್ಮಿಕರು ತಾತ್ಕಾಲಿಕವಾಗಿ ಟಾರ್ಪಲ್ ಹಾಕಿಕೊಂಡು ದುಸ್ಥಿತಿಯಲ್ಲಿ ವಾಸಿಸುತ್ತಿರುವುದನ್ನು ನಾನು ಹಲವು ಬಾರಿ ಗಮನಿಸಿದ್ದೇನೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಈಗಾಗಲೇ ಎರಡು, ಮೂರು ಬಾರಿ ಸಭೆ ನಡೆಸಿದ್ದರೂ ಕಾಮಗಾರಿ ವೇಗ ಪಡೆದುಕೊಂಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.