ಸಾರಾಂಶ
ಕಾರವಾರ: ಜಿಲ್ಲೆಯ ಎಲ್ಲ ನಗರಸ್ಥಳೀಯ ಸಂಸ್ಥೆಗಳಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಅಗತ್ಯವಿರುವ 2024- 25ನೇ ಸಾಲಿನ ಕ್ರಿಯಾಯೋಜನೆಯಲ್ಲಿನ ಎಲ್ಲ ಕಾಮಗಾರಿಗಳಿಗೆ ಅನುಮೋದನೆ ನೀಡಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು, ಈ ಎಲ್ಲ ಕಾಮಗಾರಿಗಳನ್ನು ಶೀಘ್ರದಲ್ಲಿ ಆರಂಭಿಸುವಂತೆ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ 13ನೇ ಹಣಕಾಸು ಯೋಜನೆಯಡಿ ಜಿಲ್ಲೆಯ ಎಲ್ಲ 13 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ₹16.84 ಕೋಟಿ ಮೊತ್ತದ ಕಾಮಗಾರಿಗಳ ಕ್ರಿಯಾಯೋಜನೆ, ಎಸ್‌ಎಫ್‌ಸಿ ಯೋಜನೆಯ ₹7.81 ಕೋಟಿ ಮೊತ್ತದ ಕಾಮಗಾರಿಗಳ ಕ್ರಿಯಾಯೋಜನೆ ಮತ್ತು ಎಂಆರ್‌ಎಫ್ ಘಟಕಗಳ ಸ್ಥಾಪನೆಗೆ ಮತ್ತು 7 ಇಂದಿರಾ ಕ್ಯಾಂಟೀನ್‌ಗಳಲ್ಲಿ ಅಗತ್ಯವಿರುವ ದುರಸ್ತಿ ಕಾಮಗಾರಿಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡಿದರು. ಈ ಎಲ್ಲ ಕಾಮಗಾರಿಗಳಿಗೆ ಕೂಡಲೇ ಟೆಂಡರ್ ಕರೆದು, ನಿಗದಿತ ಅವಧಿಯೊಳಗೆ ವರ್ಕ್ ಆರ್ಡರ್ ನೀಡಿ, ಮಳೆಗಾಲದ ಮುಗಿದ ಕೂಡಲೇ ಈ ಕಾಮಗಾರಿಗಳನ್ನು ಆರಂಭಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದರು.ಕ್ರಿಯಾಯೋಜನೆಯಲ್ಲಿನ ಕಾಮಗಾರಿಗಳು ಮಾತ್ರವಲ್ಲದೇ ಸಾರ್ವಜನಿಕರಿಂದ ಬೇಡಿಕೆ ಬರುವ ಅಗತ್ಯ ತುರ್ತು ಕಾಮಗಾರಿಗಳನ್ನು ಆದ್ಯತೆಯಲ್ಲಿ ಕೈಗೊಳ್ಳಿ. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ನಿರಂತರವಾಗಿ ಪರಿಶೀಲಿಸಿ, ಚರಂಡಿಯಲ್ಲಿ ಕಸ ಸಂಗ್ರಹವಾಗಿ ಮಳೆಯಿಂದ ಯಾವುದೇ ಮನೆಗಳಿಗೆ ನೀರು ನುಗ್ಗದಂತೆ ಎಚ್ಚರಿಕೆ ವಹಿಸಿ, ಎಲ್ಲೆಡೆ ಸ್ವಚ್ಛತೆಗೆ ಪ್ರಥಮಾದ್ಯತೆ ನೀಡಬೇಕು ಎಂದರು.
ಎಲ್ಲ ನಗರಸ್ಥಳೀಯ ಸಂಸ್ಥೆಗಳು ತಮ್ಮ ಅನುದಾನದಲ್ಲಿ, ಪ. ಜಾತಿ, ಪ. ಪಂಗಡ ಮತ್ತು ಅಂಗವಿಕಲರಿಗೆ ಮೀಸಲಿಟ್ಟಿರುವ ಸಂಪೂರ್ಣ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಅವರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವಂತೆ ತಿಳಿಸಿದರು.ಕಾರವಾರ, ಅಂಕೋಲಾ ಮತ್ತು ಭಟ್ಕಳದಲ್ಲಿನ ಇಂದಿರಾ ಕ್ಯಾಂಟೀನ್‌ಗಳಲ್ಲಿ ಸರ್ಕಾರದ ಪರಿಷ್ಕೃತ ಮೆನು ಪ್ರಕಾರ ಸಾರ್ವಜನಿಕರಿಗೆ ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಭೋಜನ ವಿತರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ತೆರಿಗೆ ವಸೂಲಾತಿಗೆ ಆದ್ಯತೆ ನೀಡುವಂತೆ ಹಾಗೂ ನಿಗದಿತ ಅವಧಿಯಲ್ಲಿ ಶೇ. 100ರಷ್ಟು ತೆರಿಗೆ ವಸೂಲಾತಿಯನ್ನು ಮಾಡುವಂತೆ ಕಟುನಿಟ್ಟಿನ ಸೂಚನೆ ನೀಡಿದ ಅವರು, ತೆರಿಗೆ ಸಂಗ್ರಹದಲ್ಲಿ ಗುರಿ ಸಾಧಿಸದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ಸ್ಟೆಲ್ಲಾ ವರ್ಗಿಸ್ ಹಾಗೂ ಎಲ್ಲ ನಗರಸ್ಥಳೀಯ ಸಂಸ್ಥೆಗಳು ಪೌರಾಯುಕ್ತರು, ಮುಖ್ಯಾಧಿಕಾರಿಗಳು ಹಾಗೂ ಅಧಿಕಾರಿಗಳು ಇದ್ದರು.