ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ

| Published : Sep 18 2025, 01:12 AM IST

ಸಾರಾಂಶ

ಸರ್ಕಾರದಿಂದ ವಿವಿಧ ಕಾಮಗಾರಿಗಳಿಗಾಗಿ ಸಾಕಷ್ಟು ಅನುದಾನ ನೀಡಲಾಗುತ್ತಿದೆ. ವಿನಾಕಾರಣ ಸಬೂಬು ನೀಡದೆ ಬಿಡುಗಡೆಗೊಂಡ ಅನುದಾನದಡಿ ಕಾಮಗಾರಿಗಳನ್ನು ಕಾಲಮಿತಿಯೊಳಗಾಗಿ ಪೂರ್ಣಗೊಳಿಸಿ ಪ್ರಗತಿ ಸಾಧಿಸಲು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಕಾಗವಾಡ ಶಾಸಕ ಭರಮಗೌಡ ಕಾಗೆ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸರ್ಕಾರದಿಂದ ವಿವಿಧ ಕಾಮಗಾರಿಗಳಿಗಾಗಿ ಸಾಕಷ್ಟು ಅನುದಾನ ನೀಡಲಾಗುತ್ತಿದೆ. ವಿನಾಕಾರಣ ಸಬೂಬು ನೀಡದೆ ಬಿಡುಗಡೆಗೊಂಡ ಅನುದಾನದಡಿ ಕಾಮಗಾರಿಗಳನ್ನು ಕಾಲಮಿತಿಯೊಳಗಾಗಿ ಪೂರ್ಣಗೊಳಿಸಿ ಪ್ರಗತಿ ಸಾಧಿಸಲು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಕಾಗವಾಡ ಶಾಸಕ ಭರಮಗೌಡ ಕಾಗೆ ಹೇಳಿದರು.

ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಪ್ರತ್ಯೇಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಗುಣಾತ್ಮಕ ಶಿಕ್ಷಣ ಹೆಚ್ಚಿಸಲು ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ, ಕಲಿಕೆಗಾಗಿ ಅನುಷ್ಠಾನಾಧಿಕಾರಿಗಳು ನಿರಂತರ ಸಭೆ, ಶಾಲಾ ಸಂದರ್ಶನ ನಡೆಸಬೇಕು. ವಿಶೇಷ ತರಗತಿಗಳ ಆಯೋಜನೆ ಮೂಲಕ ಮಕ್ಕಳ ನೈಜ ಕಲಿಕಾ ಕೊರತೆ ಗುರುತಿಸಿ ಮಾರ್ಗದರ್ಶನ ನೀಡಬೇಕು. ಶಾಲೆಗಳಿಗೆ ಬೆಂಚ್ ಹಂಚಿಕೆ ತ್ವರಿತ ಗತಿಯಲ್ಲಿ ಒದಗಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಬೇಕು. ಹೊಸದಾಗಿ ಕಟ್ಟಲಾಗುವ ಶಾಲಾ ಕೊಠಡಿಗಳಲ್ಲಿ ಎಲ್ಲ ದಿನಗಳಲ್ಲಿ ಸಮರ್ಪಕ ಬೆಳಕು ಇರುವಂತೆ ನೀಲನಕ್ಷೆ ತಯಾರಿಸಬೇಕು. ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸದೆ ಇರುವಂತಹ ಶಾಲಾ ಶಿಕ್ಷಕರ ವಿರುದ್ಧ ಕ್ರಮ ವಹಿಸಲು ಸೂಚಿಸಿದರು.ವಿವಿಧ ಇಲಾಖೆಗಳಿಂದ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕ್ರಿಯಾಯೋಜನೆಗೆ ಅನುಮೋದನೆ ಹಾಗೂ ಬದಲಿ ಕಾಮಗಾರಿಗಳ ಅನುಷ್ಠಾನದಲ್ಲಿ ಬಹಳ ವಿಳಂಬವಾಗುತ್ತಿರುವ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಕಾಮಗಾರಿಗಳನ್ನು ಶೀಘ್ರ ಪ್ರಾರಂಭಿಸಿ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು.ನರೇಗಾ ಯೋಜನೆಯಡಿ ಪಾರದರ್ಶಕತೆಯಿಂದ ಕಾರ್ಯನಿರ್ವಹಿಸಬೇಕು. ನರೇಗಾ ಯೋಜನೆಯಡಿ ಕೈಗೊಳ್ಳಬಹುದಾದ ಕಾಮಗಾರಿಗಳನ್ನು ಮಾತ್ರ ಕೈಗೊಳ್ಳಲು ಸೂಚಿಸಿ ಅವುಗಳ ಪಟ್ಟಿಯನ್ನು ಒದಗಿಸಲು ತಿಳಿಸಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿಯಲ್ಲಿ ಬಡತನ, ಕಡು ಬಡವರು, ದುರ್ಬಲ ವರ್ಗದವರನ್ನು ಗುರುತಿಸಿ ಈ ಯೋಜನೆಗೆ ಸೇರ್ಪಡೆಗೊಳಿಸಬೇಕು ಎಂದರು.ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಮಾತನಾಡಿ, ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬಿಡುಗಡೆ ಆಗುವ ಅನುದಾನ ಸಮರ್ಪಕವಾಗಿ ಬಳಕೆ ಮಾಡಿಕೊಂಡು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಔಷಧಗಳ ಕೊರತೆ ಆಗದಂತೆ ನಿಗಾವಹಿಸಲು ಸೂಚಿಸಿದರು. ಯಕ್ಸಂಬಾ ಪ್ರಾಥಮಿಕ ಆರೋಗ್ಯ ಕೇಂದ್ರ ದುರಸ್ತಿಗೆ ಕೂಡಲೆ ಕ್ರಮವಹಿಸಬೇಕು. ಗ್ರಾಮೀಣ ಭಾಗದಲ್ಲಿ ಕಳೆದ ಕೆಲ ತಿಂಗಳಿಂದ ಚಿಕ್ಕ ಮಕ್ಕಳಲ್ಲಿ ಜ್ವರ ಹಾಗೂ ಕೆಮ್ಮು ಬರುತ್ತಿದ್ದು ಯಕ್ಸಂಬಾ ಪ್ರಾಥಮಿಕ ಕೇಂದ್ರಕ್ಕೆ ನುರಿತ ವೈದ್ಯರ ಜೊತೆಗೆ ಮಕ್ಕಳ ತಜ್ಞರನ್ನು ನಿಯೋಜಿಸಬೇಕು. ತಜ್ಞ ವೈದ್ಯರ ವೇತನಕ್ಕೆ ಸಂಬಂಧಿಸಿದಂತೆ ವೈಯಕ್ತಿಕವಾಗಿ ಅಗತ್ಯದ ಅನುದಾನವನ್ನು ನೀಡುವುದಾಗಿ ಅವರು ಭರವಸೆ ನೀಡಿದರು.ಶಿಕ್ಷಣ ಇಲಾಖೆಗೆ ಅಗತ್ಯದ ಅನುದಾನ ಒದಗಿಸಲಾಗುವುದು. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪದವಿ ಪೂರ್ವ ಶಿಕ್ಷ ಇಲಾಖೆ ಕಚೇರಿ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲಾಗಿದ್ದು ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸಬೇಕು. ಸದಲಗಾದಲ್ಲಿನ ಕೇಂದ್ರಿಯ ವಿದ್ಯಾಲಯದಲ್ಲಿ ಮಕ್ಕಳ ಹಾಜರಾತಿಯನ್ನು ಹೆಚ್ಚಿಸಲು ಕ್ರಮ ವಹಿಸಬೇಕು ಎಂದರು.ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷ ಮಹಾಂತೇಶ ಕೌಜಲಗಿ ಮಾತನಾಡಿ, ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹುದ್ದೆಗಳ ಭರ್ತಿಗೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದರು.ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ಮಾತನಾಡಿ, ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಗ್ರಾಪಂ ವತಿಯಿಂದ ಅಂದಾಜು 1000 ಶಾಲೆಗಳಿಗೆ ಇನ್ವರ್ಟರ್‌, ಬ್ಯಾಟರಿಗಳನ್ನು ಪೂರೈಸಲಾಗುತ್ತಿದೆ. ಜಿಲ್ಲೆಯ ಶಾಲಾ ಕಟ್ಟಡಗಳ ಉನ್ನತೀಕರಣಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಶೀಘ್ರವೆ ಕಳುಹಿಸುವುದರ ಜೊತೆಗೆ ಜಿಲ್ಲೆಯ ಆಯಾ ಶಾಸಕರುಗಳ ಗಮನಕ್ಕೆ ತರುವಂತೆ ಅಧಿಕಾರಿಗಳಿಗೆ ತಿಳಿಸಿದರು. ಎಲ್ಲ ತಾಲೂಕುಗಳಲ್ಲಿ ಅಕ್ಕ ಕೆಫೆ ಪ್ರಾರಂಭಿಸಲು ಕ್ರಮವಹಿಸಲಾಗುತ್ತಿದೆ. ದಸರಾ ಕ್ರೀಡಾಕೂಟಗಳನ್ನು ಯಾವುದೇ ದೂರುಗಳಿಗೆ ಆಸ್ಪದ ನೀಡದಂತೆ ಆಯೋಜನೆ ಮಾಡುವಂತೆ ತಿಳಿಸಿದರು.ಸಭೆಯಲ್ಲಿ ಶಾಸಕ ಆಸೀಫ್(ರಾಜು) ಸೇಠ, ಪೊಲೀಸ್‌ ಆಯುಕ್ತ ಭೋರಸೆ ಭೂಷಣ ಗುಲಾಬರಾವ್, ನಾಮನಿರ್ದೇಶಿತ ಸದಸ್ಯರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. ಸಭೆಯ ಬಳಿಕ ಅನುಕಂಪದ ಆಧಾರದಡಿಯಲ್ಲಿ ಗ್ರಾಮ ಪಂಚಾಯತಿಗಳಲ್ಲಿ ನೇಮಕಗೊಂಡ ಫಲಾನುಭವಿಗಳು ನೇಮಕಾತಿ ಆದೇಶ ಪತ್ರ ಹಾಗೂ ತಾಲೂಕು ಸಂಜೀವಿನಿ ಯೋಜನೆಯಡಿ ಎನ್.ಆರ್.ಎಲ್.ಎಂ ಸಿಬ್ಬಂದಿಗೆ ಲ್ಯಾಪ್ ಟಾಪ್‌ಗಳನ್ನು ವಿತರಿಸಲಾಯಿತು.