ನೀರಾವರಿ ಯೋಜನೆಗಳ ಕಾಮಗಾರಿಗಳನ್ನು ಬೇಗ ಮುಗಿಸಿ: ಶಾಸಕ ಎಚ್.ಟಿ.ಮಂಜು
2 Min read
KannadaprabhaNewsNetwork
Published : Oct 28 2023, 01:15 AM IST
Share this Article
FB
TW
Linkdin
Whatsapp
27ಕೆಎಂಎನ್ ಡಿ13ಕೆ.ಆರ್ .ಪೇಟೆ ತಾಪಂ ಸಭಾಂಗಣದಲ್ಲಿ ಶಾಸಕ ಹೆಚ್.ಟಿ.ಮಂಜು ಹೇಮಾವತಿ ನೀರಾವರಿ ಇಲಾಖೆ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. | Kannada Prabha
Image Credit: KP
ನೀರಾವರಿ ಯೋಜನೆಗಳಿಗೆ ಹಣ ಬಿಡುಗಡೆಯಾಗಿ ನಡೆಯುತ್ತಿರುವ ಕಾಮಗಾರಿಗಳನ್ನು ಆದಷ್ಟು ಬೇಗ ಮುಗಿಸುವಂತೆ ಶಾಸಕ ಎಚ್.ಟಿ.ಮಂಜು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆ.ಆರ್.ಪೇಟೆ: ನೀರಾವರಿ ಯೋಜನೆಗಳಿಗೆ ಹಣ ಬಿಡುಗಡೆಯಾಗಿ ನಡೆಯುತ್ತಿರುವ ಕಾಮಗಾರಿಗಳನ್ನು ಆದಷ್ಟು ಬೇಗ ಮುಗಿಸುವಂತೆ ಶಾಸಕ ಎಚ್.ಟಿ.ಮಂಜು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಹೇಮಾವತಿ ನೀರಾವರಿ ಇಲಾಖೆ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ನಿರ್ಮಾಣ ಹಂತದಲ್ಲಿರುವ ನೀರಾವರಿ ಯೋಜನೆಗಳಿಗೆ ಹಾಗೂ ಮುಂದುವರಿದ ಕಾಮಗಾರಿಗಳಿಗೆ ಅವಕಾಶ ಮಾಡಿಕೊಟ್ಟು ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಬೇಕು ಎಂದರು. ಕಳೆದ ಪ್ರಗತಿ ಪರಿಶೀಲನಾ ಸಭೆಯಲ್ಲಿಯೂ ನಾನು ಕಾಲುವೆಗಳ ಹೂಳು ತೆಗೆಯಲು ಹೇಳಿದ್ದೆ. ಆದರೂ ಈ ಬಗ್ಗೆ ಕ್ರಮ ವಹಿಸಿಲ್ಲ. ಸಾಧುಗೋನಹಳ್ಳಿ, ಮಡುವಿನಕೋಡಿ, ವಿಠಲಾಪುರ ಮುಂತಾದ ಗ್ರಾಮಗಳ ಸಾರ್ವಜನಿಕರು ನಿಮ್ಮ ಕಚೇರಿಗೆ ಬಂದು ಗಲಾಟೆ ಮಾಡುತ್ತಾರೆ ಎಂದರೆ ಏನರ್ಥ ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಈಗ ನೀರು ಬಿಡುಗಡೆಯಾಗಿದೆ. ಈಗ ಹೂಳು ತೆಗೆಯಲು ಹೊರಟಿರುವ ಕ್ರಮ ಸರಿಯಲ್ಲ. ನಾಲ್ಕು ತಿಂಗಳಿಂದಲೂ ಟೆಂಡರ್, ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಸಬೂಬು ಹೇಳಬೇಡಿ. ಸಣ್ಣಪುಟ್ಟ ಕೆಲಸಗಳನ್ನು ಮಾಡಿರುವ ಗುತ್ತಿಗೆದಾರರಿಗೆ ಕೂಡಲೇ ಬಿಲ್ ಮಾಡಿಕೊಡಿ ಎಂದರು. ಕಾಲುವೆಗಳ ತೂಬುಗಳು ಹಳೆಯದಾಗಿದೆ. ತಿರುಗಿಸಲು ಕಷ್ಟವಾಗುತ್ತಿದೆ. ಅದನ್ನು ಬದಲಿಸುವ ಕೆಲಸವನ್ನು ಇಲಾಖೆ ಮಾಡಬೇಕು. ರೈತರು ತೂಬು ಎತ್ತುವಾಗ ಏನಾದರೂ ಅನಾಹುತಗಳು ಸಂಭವಿಸಿದರೆ ಯಾರು ಹೊಣೆ ಎಂದು ಪ್ರಶ್ನೆ ಮಾಡಿದರು. ತಾಲೂಕಿನ ಮುದುಗೆರೆ, ದಳವಾಯಿಕೆರೆ, ಬಲ್ಲೇನಹಳ್ಳಿ, ಮಾವಿನಕೆರೆ. ಬಿ.ಬಾಚಹಳ್ಳಿಕೆರೆ, ಕಾಮನಹಳ್ಳಿಕೆರೆ, ಪುರ, ಸಾಧುಗೋನಹಳ್ಳಿ, ಬಿಲ್ಲರಾಮನಹಳ್ಳಿ, ಬೊಮ್ಮೇನಹಳ್ಳಿ, ಲಿಂಗಾಪುರ, ಮಾಕವಳ್ಳಿ ಸೇರಿದಂತೆ 19 ಕೆರೆಗಳಿಗೆ ನೀರನ್ನು ತುಂಬಿಸಬೇಕು ಎಂದು ಕಾರ್ಯಪಾಲಕ ಇಂಜಿನಿಯರ್ ಕಿಜರ್ ಅಹಮದ್ ರವರಿಗೆ ಸೂಚಿಸಿದರು. ತಾಲೂಕಿನ ಗಡಿಗ್ರಾಮಗಳಾದ ದಡದಹಳ್ಳಿ, ಆಲೇನಹಳ್ಳಿ, ಮೂಢನಹಳ್ಳಿ ಕೆರೆಗಳಿಗೆ ನೀರು ತುಂಬಿಸುವ ಮುಂಚೆಯೇ ಬೇರೆ ಕಡೆಗೆ ಯಾವುದೇ ಕಾರಣಕ್ಕೂ ನೀರನ್ನು ಬಿಡಬೇಡಿ ಎಂದು ದೊಡ್ಡಕಾಡನೂರು ಎಇಇ ಯವರಿಗೆ ಸೂಚನೆ ನೀಡಿದರು. ನಿಮ್ಮ ವರದಿಗಳು ಕೇವಲ ಕಾಗದದ ಮೇಲೆ ಅಂಕಿಅಂಶಗಳಿಗೆ ಮಾತ್ರ ಸೀಮಿತವಾಗಬಾರದು. ನಾನು ನಿಮ್ಮೊಂದಿಗೆ ಕಾಲುವೆ ಮೇಲೆ ಬರುತ್ತೇನೆ. ಬಾಕಿ ಇರುವ ಎಲ್ಲಾ ಕೆರೆಗಳನ್ನು ಅರ್ಧವನ್ನಾದರೂ ತುಂಬಿಸಿ ನೀರು ಬಿಟ್ಟಾಗ ಶ್ರಮವಹಿಸಿ ಕೆಲಸ ಮಾಡಿ. ಬರಗಾಲ, ಸಂಕಷ್ಟದಲ್ಲಿ ಇರುವ ರೈತರ ನೆರವಿಗೆ ನಿಲ್ಲುವ ಕೆಲಸ ಮಾಡಿ ಎಂದು ಸೂಚಿಸಿದರು. ಗೂಡೆಹೊಸಹಳ್ಳಿ ಏತ ನೀರಾವರಿ ಕಾಮಗಾರಿ ನಿಂತಿದ್ದು ಗುತ್ತಿಗೆದಾರನಿಗೆ ನೋಟಿಸ್ ನೀಡಿ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಬೇಕು. 10 ಕೋಟಿಗೂ ಹೆಚ್ವುಹಣ ಮುಂಗಡ ಪಡೆದರೂ ಕಾಮಗಾರಿ ಆರಂಭಿಸಲಿಲ್ಲ. ಪೇಮೆಂಟ್ ಪಡೆದು ಕೆಲಸ ಮಾಡದಿದ್ದರೆ ಆ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಿ. ಸ್ಥಳೀಯರು ಕಾಮಗಾರಿ ಏಕೆ ವಿಳಂಬ ಎಂದು ಪ್ರಶ್ನಿಸುತ್ತಿದ್ದಾರೆ. ನಾನು ಸಾರ್ವಜನಿಕರಿಗೆ ಸಮರ್ಪಕ ಉತ್ತರ ನೀಡಬೇಕು ಎಂದರು. ಇಲಾಖೆ ಪ್ರಗತಿ ಪರಿಶೀಲನೆ ಮಾಡುವಾಗ ಚರ್ಚಿಸಿದ ವಿಷಯಗಳನ್ನು ನೋಟ್ ಮಾಡಿಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ. ಮುಂದಿನ ಸಭೆಯಲ್ಲಿ ಅವುಗಳನ್ನು ಪರಿಶೀಲಿಸಿ ನಂತರ ಮುಂದೆ ಹೋಗಬೇಕು ಎಂದು ಇಇ ಕಿಜರ್ ಅಹಮದ್ ರವರಿಗೆ ಸೂಚಿಸಿದರು. ಸಭೆಯಲ್ಲಿ ಹೇಮಾವತಿ ಜಲಾಶಯ ವ್ಯಾಪ್ತಿಯ ಸೂಪರಿಂಟೆಂಡೆಂಟ್ ಇಂಜಿನಿಯರ್ ಮಂಜುನಾಥ್, ಹೇಮಾವತಿ ಉಪವಿಭಾಗದ ಕಾರ್ಯಪಾಲಕ ಇಂಜಿನಿಯರ್ ಕಿಜರ್‌ಅಹಮದ್, ತಾಪಂ ಯೋಜನಾಧಿಕಾರಿ ಶ್ರೀನಿವಾಸ್, ಎಇಇ ಗಳಾದ ಪಿ.ವಿಶ್ವನಾಥ್, ಆನಂದ್, ಚಂದ್ರೇಗೌಡ, ಸಣ್ಣನರಸಪ್ಪ, ತಾಪಂ ಮಾಜಿ ಸದಸ್ಯ ಮೋಹನ್, ಶಾಸಕರ ಆಪ್ತ ಸಹಾಯಕ ಪ್ರತಾಪ್ ಸೇರಿದಂತೆ ಹಲವರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.