ಯಲಹಂಕ - ದೊಡ್ಡಬಳ್ಳಾಪುರ ರಸ್ತೆಯಲ್ಲಿ ನಿರ್ಮಿಸುತ್ತಿರುವ ಸುಮಾರು ಎರಡು ಕಿ.ಮೀ ಉದ್ದದ ಫ್ಲೈಓವರ್ ಕಾಮಗಾರಿಯನ್ನು ಇದೇ ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಯಲಹಂಕ - ದೊಡ್ಡಬಳ್ಳಾಪುರ ರಸ್ತೆಯಲ್ಲಿ ನಿರ್ಮಿಸುತ್ತಿರುವ ಸುಮಾರು ಎರಡು ಕಿ.ಮೀ ಉದ್ದದ ಫ್ಲೈಓವರ್ ಕಾಮಗಾರಿಯನ್ನು ಇದೇ ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿ ಸ್ಥಳಗಳಿಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ದೊಡ್ಡಬಳ್ಳಾಪುರ ಮುಖ್ಯ ಮೇಲ್ಸೇತುವೆ ಕಾಮಗಾರಿಯು ಶೇ.70 ರಷ್ಟು ಪೂರ್ಣಗೊಂಡಿದೆ. ಮೇಲ್ಸೇತುವೆಗೆ 56 ಕಂಬಗಳು ಬರಲಿದ್ದು, 51 ಕಂಬಗಳು ಸಿದ್ಧವಾಗಿವೆ. ಇನ್ನೂ ಐದು ಕಂಬಗಳನ್ನು ನಿರ್ಮಿಸಬೇಕಿದೆ. 447 ಸೆಗ್ಮೆಂಟ್‌ಗಳ ಪೈಕಿ 351 ಸೆಗ್ಮೆಂಟ್‌ಗಳನ್ನು ಜೋಡಿಸಲಾಗಿದೆ. ಬಾಕಿ 96 ಸೆಗ್ಮೆಂಟ್‌ಗಳನ್ನು ಜೋಡಣೆ ಮಾಡಲಾಗುತ್ತಿದೆ. ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವ ಕಾರಣ ರಾತ್ರಿ ವೇಳೆ ಮಾತ್ರ ಸೆಗ್ಮೆಂಟ್ ಜೋಡಣೆ ಕಾರ್ಯ ನಡೆದಿದೆ. ಕಾಮಗಾರಿ ಸಂಬಂಧಿಸಿದ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಂಡು ತ್ವರಿತವಾಗಿ ಪೂರ್ಣಗೊಳಿಸುವಂತೆ ಆಯುಕ್ತರು ಸೂಚನೆ ನೀಡಿದರು.
ಇನ್ನು ಹೆಣ್ಣೂರು–ಬಾಗಲೂರು ರಸ್ತೆಯಲ್ಲಿ 5 ಕಿ.ಮೀ ಉದ್ದದ ವೈಟ್ ಟಾಪಿಂಗ್ ಕಾಮಗಾರಿ ಪೈಕಿ ರಸ್ತೆಯ ಒಂದು ಬದಿಯ 4 ಕಿ.ಮೀ ಕಾಮಗಾರಿ ಪೂರ್ಣಗೊಂಡಿದೆ. ಬಾಕಿ 1 ಕಿ.ಮೀ ಕೆಲಸವನ್ನು 15 ದಿನಗಳಲ್ಲಿ ಪೂರ್ಣಗೊಳಿಸಿ, ಕ್ಯೂರಿಂಗ್ ಮುಗಿದ ಕೂಡಲೇ ಒಂದು ಭಾಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡುವಂತೆ ಅವರು ನಿರ್ದೇಶನ ನೀಡಿದರು.ಹೆಣ್ಣೂರು ಬಂಡೆ ಬಳಿ ಆಟದ ಮೈದಾನ:
ಹೆಣ್ಣೂರು ಬಂಡೆ ಬಳಿ ಬಿಡಿಎಗೆ ಸೇರಿದ 5 ಎಕರೆ ಜಾಗವನ್ನು ಪಾಲಿಕೆಗೆ ಹಸ್ತಾಂತರ ಮಾಡಿಸಿಕೊಂಡು, ಮೈದಾನದ ಸುತ್ತ ಸಸಿಗಳನ್ನು ನೆಟ್ಟು, ವಾಕಿಂಗ್ ಟ್ರ್ಯಾಕ್ ನಿರ್ಮಿಸಿ ಸುಸಜ್ಜಿತ ಆಟದ ಮೈದಾನ ನಿರ್ಮಾಣ ಮಾಡಬೇಕು. ಹೆಚ್.ಬಿ.ಆರ್ ಬಡಾವಣೆ 1ನೇ ಹಂತದಲ್ಲಿ ಇರುವ ಮೂರು ಎಕರೆ ಬಿಡಿಎ ಜಾಗವನ್ನು ಪಾಲಿಕೆಗೆ ಹಸ್ತಾಂತರ ಮಾಡಿಕೊಳ್ಳಬೇಕು. ಆ ಜಾಗದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ವೆಂಡಿಂಗ್ ಜೋನ್ ನಿರ್ಮಾಣ ಮಾಡಿ, ಮಧ್ಯಭಾಗದಲ್ಲಿ ಉದ್ಯಾನ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದರು.ಭೂ ಸ್ವಾಧೀನ ಸಮಸ್ಯೆ:
ಯಲಹಂಕ ರೈಲ್ವೆ ಕೆಳಸೇತುವೆ ಕಾಮಗಾರಿಯು ಒಂದು ಭಾಗದಲ್ಲಿ ಪೂರ್ಣಗೊಂಡಿದ್ದು, ಬಾಕ್ಸ್ ಫುಷಿಂಗ್ ಕೂಡ ಮಾಡಲಾಗಿದೆ. ಮತ್ತೊಂದು ಭಾಗದಲ್ಲಿ ಭೂಸ್ವಾಧೀನ ಸಮಸ್ಯೆಯಿಂದ ಅರ್ಧಕ್ಕೆ ನಿಂತಿದ್ದು, ರೈಲ್ವೆ ಜಾಗದ ಸಮಸ್ಯೆಯನ್ನು ಬಗೆಹರಿಸಿಕೊಂಡು ಬಾಕಿಯಿರುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪಿ. ಸುನೀಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.