ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತವನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಬೇಕು ಹಾಗೂ 524 ಮೀ.ಗೆ ಭೂ ಸ್ವಾಧೀನಪಡಿಸಿಕೊಂಡು ಅಣೆಕಟ್ಟು ಎತ್ತರ ಹೆಚ್ಚಿಸಬೇಕು ಎಂದು ಆಗ್ರಹಿಸಿ ಕೃಷ್ಣಾ ಮೇಲ್ದಂಡೆ ಯೋಜನೆಯ ಬಾಧಿತ ಸಂತ್ರಸ್ತರ ಹೋರಾಟ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಬೃಹತ್ ಅಹೋರಾತ್ರಿ ಧರಣಿ, ಹೋರಾಟ ಮಂಗಳವಾರದಿಂದ ಆರಂಭಿಸಿದೆ.ಬಾಗಲಕೋಟೆ-ವಿಜಯಪುರ ಜಿಲ್ಲೆಯ ಸಂತ್ರಸ್ತರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ ಮತ್ತೆ ಕೃಷ್ಣೆಗಾಗಿ ಹೋರಾಟ ಕಿಚ್ಚು ಮತ್ತೊಮ್ಮೆ ಮೊಳಗಿಸಿದರು. ಪಕ್ಷ ಬೇಧ ಮರೆತು ಪ್ರಮುಖ ನಾಯಕರು, ಕನ್ನಡಪರ ಸಂಘಟನೆಗಳ ಮುಖಂಡರು ಭಾಗವಹಿಸಿ ಬೆಂಬಲ ಸೂಚಿಸಿದರು. ನವನಗರದ ಕಾಳಿದಾಸ ವೃತ್ತದಿಂದ ಆರಂಭವಾದ ಪ್ರತಿಭಟನಾ ರ್‍ಯಾಲಿಯು ಜಿಲ್ಲಾಸ್ಪತ್ರೆ, ನಗರಸಭೆ, ಬಸವೇಶ್ವರ ಬ್ಯಾಂಕ್, ಕೋರ್ಟ್ ಸಂಕೀರ್ಣ, ಎಸ್ಪಿ ಕಚೇರಿ ರಸ್ತೆ ಮೂಲಕ ಜಿಲ್ಲಾಡಳಿತ ಭವನ ತಲುಪಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಸಂತ್ರಸ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ವರ್ಷಕ್ಕೆ ₹40,000 ಕೋಟಿ ನೀಡಿ:
ಮುಖ್ಯಮಂತ್ರಿಗಳು ವಿಜಯಪುರದಲ್ಲಿ ಯುಕೆಪಿ ಸಮಾವೇಶದಲ್ಲಿ ನೀಡಿರುವ 6ನೇ ಗ್ಯಾರಂಟಿಯಾದ ನೀರಾವರಿ ಗ್ಯಾರಂಟಿಯನ್ನು ಅನುಷ್ಠಾನಗೊಳಿಸಿ ವರ್ಷಕ್ಕೆ ₹40,000 ಕೋಟಿಯಂತೆ 5 ವರ್ಷದಲ್ಲಿ ₹2 ಲಕ್ಷ ಕೋಟಿ ಹಣವನ್ನು ಒದಗಿಸಿ ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) 3ನೇ ಹಂತ ಪೂರ್ಣಗೊಳಿಸಿ 130 ಟಿಎಂಸಿ ನೀರನ್ನು ಬಳಸಿಕೊಂಡು 15 ಲಕ್ಷ ಎಕರೆ ಜಮೀನನ್ನು ನೀರಾವರಿಗೆ ಒಳಪಡಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ 2023ನೇ ಸಾಲಿನ ₹40,000 ಕೋಟಿ ಹಾಗೂ 2024ನೇ ಸಾಲಿನ ₹40,000 ಕೋಟಿ ಒಟ್ಟು ₹80, 000 ಕೋಟಿ ಹಣವನ್ನು ನೀರಾವರಿ ಯೋಜನೆಗಳಿಗಾಗಿ ಒದಗಿಸಿ ನುಡಿದಂತೆ ನಡೆದು ಉತ್ತರ ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಯಾದ ಯುಕೆಪಿ 3ನೇ ಹಂತವನ್ನು ಪೂರ್ಣಗೊಳಿಸಬೇಕು ಎಂದು ಸಭೆ ಒತ್ತಾಯಿಸಿತು.ಭೂಸ್ವಾಧೀನ ಪ್ರಕ್ರಿಯೆ ಕಾಲಮಿತಿಯಲ್ಲಿ ಪೂರ್ಣಗೊಳಿಸಿ:
ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗುವ 75,000 ಎಕರೆ ಜಮೀನು ಹಾಗೂ ಮುಳುಗಡೆಯಾಗುವ 20 ಗ್ರಾಮಗಳ ಭೂಸ್ವಾಧೀನ ಪ್ರಕ್ರಿಯೆ ಚಾಲ್ತಿಯಲ್ಲಿ ಇರುವುದರಿಂದ ಈ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ನಿರ್ಬಂಧ ಇರುವುದರಿಂದ ಯೋಜನಾ ಬಾಧಿತರು ತೀವ್ರ ತೊಂದರೆಗೊಳಗಾಗಿದ್ದಾರೆ. ಆದ್ದರಿಂದ ಶೀಘ್ರವಾಗಿ ಈಗಾಗಲೇ ಕೈಗೊಂಡಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು 524.256 ಹಂತಕ್ಕೆ ಏಕಕಾಲಕ್ಕೆ ಸ್ವಾಧೀನಪಡಿಸಿಕೊಂಡು ಅತಂತ್ರ ಸ್ಥಿತಿಯನ್ನು ಹೋಗಲಾಡಿಸಬೇಕು. ಭೂಸ್ವಾಧೀನ ಪ್ರಕ್ರಿಯೆಯನ್ನು ಭೂಕಾಯ್ದೆಯ ನಿಯಮದಂತೆ ಕಾಲಮಿತಿಯಲ್ಲಿ ಪೂರ್ಣಗೊಳಿಸಿ ಸರ್ಕಾರವು ಈಗಾಗಲೇ ಅಧಿಸೂಚನೆ ಹೊರಡಿಸಿರುವ ಹಾಗೂ ಈಗಾಗಲೇ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ಕೊಡುವುದು ಬಾಕಿ ಇದ್ದು, ವಿಳಂಬ ಮಾಡದೆ ತಕ್ಷಣ ಬಿಡುಗಡೆ ಮಾಡಬೇಕು. ಭೂಮಿಯ ಮೂಲ ಬೆಲೆಗೆ ವಿಳಂಬದ ಅವಧಿಯಲ್ಲಿ ಶೇ.15 ಬಡ್ಡಿಯನ್ನು ನೀಡಬೇಕಾಗುತ್ತದೆ. ವಿಳಂಬದಿಂದಾಗಿ ಮೂಲ ಬೆಲೆಗಿಂತ ಬಡ್ಡಿಯೇ ಹೆಚ್ಚಾಗುತ್ತ ಹೋಗುತ್ತಿದೆ. ಯೋಜನಾ ವೆಚ್ಚವು ಬಡ್ಡಿಯ ಕಾರಣದಿಂದ ದ್ವಿಗುಣವಾಗುತ್ತ ಹೋಗುತ್ತಿದೆ. ಭೂಸ್ವಾಧೀನ ಪ್ರಕ್ರಿಯೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ ಯೋಜನಾ ಬಾಧಿತರು ಬೀದಿ ಪಾಲಾಗುವುದನ್ನು ತಡೆಗಟ್ಟಬೇಕು ಎಂಬುದು ಸೇರಿದಂತೆ ಇನ್ನೂ ವಿವಿಧ ಬೇಡಿಕೆಗಳು ಇದ್ದು ತಕ್ಷಣವೇ ಸರ್ಕಾರ ಪರಿಹರಿಸಬೇಕು ಎಂದು ಒತ್ತಾಯಿಸಿದರು.ಈ ವೇಳೆ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಗಿರಿಸಾಗರ, ಮನ್ನಿಕಟ್ಟಿ, ಕಲಾದಗಿ ಶ್ರೀಗಳು ಸೇರಿದಂತೆ ಹಲವು ಮಠಾಧೀಶರ ನೇತೃತ್ವದಲ್ಲಿ ಹೋರಾಟ ನಡೆಯಿತು. ಸಮಿತಿಯ ಗೌರವಾಧ್ಯಕ್ಷ ಅಜಯಕುಮಾರ ಸರನಾಯಕ, ಅಧ್ಯಕ್ಷ ಅದೃಶಪ್ಪ ದೇಸಾಯಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂತರಗೊಂಡ, ಶಾಸಕ ಜಗದೀಶ ಗುಡಗುಂಟಿ, ಜೆ.ಟಿ.ಪಾಟೀಲ, ಮಾಜಿ ಸಚಿವ ಎಸ್.ಆರ್.ಪಾಟೀಲ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಎಸ್.ಕೆ.ಬೆಳ್ಳುಬ್ಬಿ, ಜಿ.ಎಸ್.ನ್ಯಾಮಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಮುಖಂಡರಾದ ಮೋಹನ ಜಾಧವ, ಡಾ.ಎಂ.ಎಸ್.ದಡ್ಡೇನವರ್ ಸೇರಿದಂತೆ ಸಾವಿರಾರು ಸಂತ್ರಸ್ತರು ಭಾಗವಹಿಸಿದ್ದರು.ಪಕ್ಷಾತೀತವಾದ ಹೋರಾಟ:
ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತವನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಬೇಕು ಹಾಗೂ 524 ಮೀ.ಗೆ ಭೂಸ್ವಾಧೀನ ಪಡಿಸಿಕೊಂಡಿಸಿಕೊಂಡು ಅಣೆಕಟ್ಟು ಎತ್ತರ ಹೆಚ್ಚಿಸಬೇಕು ಎಂದು ಆಗ್ರಹಿಸಿ ಕೃಷ್ಣಾ ಮೇಲ್ದಂಡೆ ಯೋಜನೆ ಬಾಧಿತ ಸಂತ್ರಸ್ತರ ಹೋರಾಟ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಆರಂಭಿಸಿರುವ ಬೃಹತ್ ಅಹೋರಾತ್ರಿ ಧರಣಿ, ಹೋರಾಟ ಪಕ್ಷಾತೀತ ಹೋರಾಟವಾಗಿರುವುದು ವಿಶೇಷವಾಗಿದೆ.ಕಾಂಗ್ರೆಸ್ ಪಕ್ಷದ ಶಾಸಕರಾದ ಜೆ.ಟಿ.ಪಾಟೀಲ, ಮಾಜಿ ಸಚಿವ ಎಸ್.ಆರ್.ಪಾಟೀಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಬಿಜೆಪಿ ಶಾಸಕ ಜಗದೀಶ ಗುಡಗುಂಟಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಎಸ್.ಕೆ.ಬೆಳ್ಳುಬ್ಬಿ, ಜಿ.ಎಸ್.ನ್ಯಾಮಗೌಡ ಸೇರಿದಂತೆ ಎಲ್ಲರೂ ಭಾಗವಹಿಸಿದ್ದರು.