ಮೈಸೂರು ನಗರದಲ್ಲಿ ನಡೆಯುತ್ತಿರುವ ಯುಜಿ ಕೇಬಲ್ ಕಾಮಗಾರಿಗಳನ್ನು ನಿಗದಿತ ಗಡುವಿನೊಳಗೆ ಪೂರ್ಣಗೊಳಿಸುವ ಜೊತೆಗೆ, ಕಾಮಗಾರಿ ನಡೆದಿರುವ ಸ್ಥಳಗಳ ಪುನಶ್ಚೇತನ ಕಾರ್ಯವನ್ನು ಶೇ.100 ರಷ್ಟು ಪೂರ್ಣಗೊಳಿಸಬೇಕು. ಅ.5ರ ಒಳಗೆ ಪುನಶ್ಚೇತನ ಕಾಮಗಾರಿಗಳನ್ನು ಮುಗಿಸಬೇಕು.
ಕನ್ನಡಪ್ರಭ ವಾರ್ತೆ ಮೈಸೂರು
ನಗರದಲ್ಲಿ ಚಾಲ್ತಿಯಲ್ಲಿರುವ ಭೂಗತ ವಿದ್ಯುತ್ ಕೇಬಲ್ (ಯುಜಿ ಕೇಬಲ್) ಅಳವಡಿಕೆ ಕಾಮಗಾರಿಯನ್ನು ಅ.5ರ ಒಳಗೆ ಪೂರ್ಣಗೊಳಿಸುವಂತೆ ಸೆಸ್ಕ್ ಅಧ್ಯಕ್ಷರಾದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ಸಂಬಂಧಪಟ್ಟ ಏಜೆನ್ಸಿಗಳಿಗೆ ಸೂಚಿಸಿದರು.ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ಪ್ರಧಾನ ಕಚೇರಿಯಲ್ಲಿ ಯುಜಿ ಕೇಬಲ್ ಕಾಮಗಾರಿಯ ಪ್ರಗತಿ ಕುರಿತು ಸಂಬಂಧಪಟ್ಟ ಏಜೆನ್ಸಿಗಳು ಹಾಗೂ ಅಧಿಕಾರಿಗಳೊಂದಿಗೆ ಮಂಗಳವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರದಲ್ಲಿ ನಡೆಯುತ್ತಿರುವ ಯುಜಿ ಕೇಬಲ್ ಕಾಮಗಾರಿಗಳನ್ನು ನಿಗದಿತ ಗಡುವಿನೊಳಗೆ ಪೂರ್ಣಗೊಳಿಸುವ ಜೊತೆಗೆ, ಕಾಮಗಾರಿ ನಡೆದಿರುವ ಸ್ಥಳಗಳ ಪುನಶ್ಚೇತನ ಕಾರ್ಯವನ್ನು ಶೇ.100 ರಷ್ಟು ಪೂರ್ಣಗೊಳಿಸಬೇಕು. ಅ.5ರ ಒಳಗೆ ಪುನಶ್ಚೇತನ ಕಾಮಗಾರಿಗಳನ್ನು ಮುಗಿಸಬೇಕು ಎಂದರು.ದಸರಾ ಹಿನ್ನೆಲೆಯಲ್ಲಿ ಹೊಸದಾಗಿ ಕೈಗೊಳ್ಳಬೇಕಾಗಿರುವ ಕಾಮಗಾರಿಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕು. ಕಾಮಗಾರಿ ಮುಗಿಸುವ ವಿಚಾರದಲ್ಲಿ ರಾಜಿಗೆ ಅವಕಾಶವಿಲ್ಲ. ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಗುಂಡಿ ತೆಗೆದು ಹಾಗೇ ಬಿಡಬೇಡಿ:ಯುಜಿ ಕೇಬಲ್ ಅಳವಡಿಕೆ ಕಾಮಗಾರಿಗಾಗಿ ರಸ್ತೆ ಹಾಗೂ ಪಾದಚಾರಿ ಮಾರ್ಗಗಳಲ್ಲಿ ಗುಂಡಿಗಳನ್ನು ತೆಗೆದು ಹಾಗೆಯೇ ಬಿಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಈಗಾಗಲೇ ಗುಂಡಿ ತೆಗೆದು ಮುಚ್ಚದೆ ಬಿಟ್ಟಿರುವ ಎಲ್ಲ ಸ್ಥಳಗಳನ್ನು ಗುರುತಿಸಿ ತಕ್ಷಣ ಸಮರ್ಪಕವಾಗಿ ಮುಚ್ಚಬೇಕು. ಗುಂಡಿಗಳನ್ನು ಮುಚ್ಚಿದ ಬಳಿಕ ಕಾಮಗಾರಿಯಿಂದ ಉಂಟಾಗಿರುವ ಡೆಬ್ರಿಸ್ ಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಕಡ್ಡಾಯವಾಗಿ ಬ್ಯಾರಿಕೇಡ್ ಹಾಗೂ ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿ ವೈಟ್ ಟ್ಯಾಪಿಂಗ್, ಯುಜಿಡಿ ಹಾಗೂ ಯುಜಿ ಕೇಬಲ್ ಅಳವಡಿಕೆ ಕಾಮಗಾರಿಗಳು ನಡೆಯುತ್ತಿವೆ. ಈ ಕಾಮಗಾರಿಗಳ ನಡುವೆ ಸಮನ್ವಯದ ಕೊರತೆಯಾದರೆ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಏಜೆನ್ಸಿಗಳು ಪರಸ್ಪರ ಸಮನ್ವಯದಿಂದ ಕಾಮಗಾರಿ ನಡೆಸಬೇಕು ಎಂದರು.ದಸರಾ ಸಂದರ್ಭದಲ್ಲಿ ನಗರದ ಪಾದಚಾರಿ ಮಾರ್ಗಗಳು ಸೇರಿದಂತೆ ವಿವಿಧೆಡೆ ಇರಿಸಿರುವ ಯುಜಿ ಕೇಬಲ್ ಹಾಗೂ ಸೆಸ್ಕ್ ಗೆ ಸಂಬಂಧಿಸಿದ ಎಲ್ಲ ಮೆಟೀರಿಯಲ್ ಗಳನ್ನು ಕೂಡಲೇ ತೆರವುಗೊಳಿಸಬೇಕು. ನಗರದ ಸೌಂದರ್ಯ ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ವಹಿಸಬೇಕು ಎಂದು ಅವರು ಹೇಳಿದರು.
ಯುಜಿ ಕೇಬಲ್ ಕಾಮಗಾರಿಗೆ ಸಂಬಂಧಿಸಿದಂತೆ ಅ.6 ರಂದು ಮತ್ತೊಮ್ಮೆ ಸಭೆ ನಡೆಸಿ, ಪ್ರಗತಿ ಪರಿಶೀಲನೆ ನಡೆಸಲಾಗುತ್ತದೆ. ಈ ಸಭೆಗೆ ಪ್ರತಿಯೊಂದು ಏಜೆನ್ಸಿಗಳ ಮುಖ್ಯಸ್ಥರು ಕಡ್ಡಾಯವಾಗಿ ಹಾಜರಾಗಬೇಕು. ಸದರಿ ಸಭೆಯ ವೇಳೆಗೆ ಕಾಮಗಾರಿಗಳು ಮುಗಿಯದಿದ್ದರೆ ಮುಂದಿನ ಕ್ರಮ ವಹಿಸುವುದಾಗಿ ಅವರು ಎಚ್ಚರಿಸಿದರು.ಸೆಸ್ಕ್ ತಾಂತ್ರಿಕ ನಿರ್ದೇಶಕ ಎಲ್.ಲೋಕೇಶ್, ಮೈಸೂರು ವೃತ್ತದ ಅಧೀಕ್ಷಕ ಎಂಜಿನಿಯರ್ ಸುನಿಲ್ ಕುಮಾರ್ ಮೊದಲಾದವರು ಇದ್ದರು.