ಸಾರಾಂಶ
ಬಿ.ಎಚ್.ಎಂ. ಅಮರನಾಥಶಾಸ್ತ್ರಿ
ಕಂಪ್ಲಿ: ತುಂಗಭದ್ರಾ ಜಲಾಶಯದಿಂದ ಅಧಿಕ ಪ್ರಮಾಣದಲ್ಲಿ ನೀರು ಹೊರಬಿಟ್ಟಾಗ ಕಂಪ್ಲಿ- ಗಂಗಾವತಿ ಸಂಪರ್ಕ ಸೇತುವೆ ಮುಳುಗಡೆಗೊಂಡು ಸಂಚಾರಕ್ಕೆ ಸಂಚಕಾರ ಉಂಟಾಗುವುದಲ್ಲದೆ ಸೇತುವೆ ಶಿಥಿಲಾವಸ್ಥೆಗೆ ತಲುಪಿದೆ. ನೂತನ ಸೇತುವೆ ನಿರ್ಮಿಸಬೇಕೆಂಬ ಜನರ ಒತ್ತಾಸೆಗೆ ರಾಜ್ಯ ಬಜೆಟ್‌ನಲ್ಲಿ ಅನುದಾನ ಬಿಡುಗಡೆಗೊಳ್ಳಬಹುದೇ ಎಂಬ ನಿರೀಕ್ಷೆ ತಾಲೂಕಿನ ಜನತೆಯಲ್ಲಿದೆ.ಸೇತುವೆ ನಿರ್ಮಾಣಗೊಂಡು 65 ವರ್ಷಗಳು ಗತಿಸಿವೆ. ತುಂಗಭದ್ರಾ ಜಲಾಶಯದಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಬಿಡುಗಡೆಗೊಳಿಸಿದಾಗ ಸೇತುವೆ ಮುಳುಗಿ ಸಂಪರ್ಕ ಕಡಿತಗೊಂಡು ಸ್ಥಳೀಯ ವ್ಯಾಪಾರ ವಹಿವಾಟಿಗೆ ಸಮಸ್ಯೆಯಾಗುವುದು. ಗಂಗಾವತಿ ಮಾರ್ಗವಾಗಿ ತೆರಳಲು ಬುಕ್ಕಸಾಗರ ಬಳಿಯ ಕಡೆ ಬಾಗಿಲು ಸೇತುವೆ ಮಾರ್ಗವಾಗಿ ಸುತ್ತು ಹಾಕಿಕೊಂಡು ತೆರಳುವ ಸಮಸ್ಯೆ ಉಂಟಾಗುತ್ತದೆ ಹಾಗೂ ನಿತ್ಯ ಸೇತುವೆ ಮೇಲೆ ಬೃಹತ್ ಗಾತ್ರದ ವಾಹನಗಳ ಸಂಚಾರದಿಂದ ಸೇತುವೆ ದಿನೇ ದಿನೇ ಶಿಥಿಲಾವಸ್ಥೆಗೆ ತಲುಪುತ್ತಿದೆ. ಈ ಹಿನ್ನೆಲೆ ನೂತನ ಸೇತುವೆ ನಿರ್ಮಿಸುವಂತೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಅಲ್ಲದೇ ಶಾಸಕರು ಸದನದಲ್ಲಿ ಧ್ವನಿ ಎತ್ತಿದರೂ ಪ್ರಯೋಜನವಾಗಿಲ್ಲ.
ಈ ಹಿಂದೆ ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗಿದ್ದ ಬಿ. ಶ್ರೀರಾಮುಲು ಅವರು ತಮ್ಮ ಸರ್ಕಾರವು ಸೇತುವೆ ನಿರ್ಮಾಣಕ್ಕೆ ₹67.70 ಕೋಟಿ ಅನುದಾನ ಬಿಡುಗಡೆಗೊಳಿಸಿದೆ ಎಂದಿದ್ದರು. ಈ ಕುರಿತು ಯಾವುದೇ ಕಾರ್ಯಗಳು ಜರುಗದಿರುವುದು ಜನತೆಯಲ್ಲಿ ನಿರಾಸೆ ಮೂಡಿಸಿತ್ತು. ಆದರೆ ಶಾಸಕ ಜೆ.ಎನ್. ಗಣೇಶ್ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕೂಡಲೇ ಸೇತುವೆ ನಿರ್ಮಾಣಕ್ಕೆ ಅನುದಾನ ತರುವುದಾಗಿ ಭರವಸೆ ನೀಡಿದ್ದರು. ಅದರಂತೆ ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಬಿಡುಗಡೆಗೊಳ್ಳಬಹುದೇ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.ನುಡಿದಂತೆ ನಡೆಯುತ್ತಾರಾ ಸಿಎಂ?: ವಿಧಾನಸಭಾ ಚುನಾವಣೆಯ ವೇಳೆ ಪ್ರಚಾರಕ್ಕೆಂದು ಕುರುಗೋಡಿಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂಪ್ಲಿಯ ಸಕ್ಕರೆ ಕಾರ್ಖಾನೆಯನ್ನು ಖಾಸಗಿ ಒಡೆತನಕ್ಕೆ ನೀಡಿ 176 ಎಕರೆ ಜಾಗವನ್ನು ಕಬಳಿಸಲು ಬಿಜೆಪಿ ಮುಂದಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಕಾರ್ಖಾನೆಯನ್ನು ಸಹಕಾರಿ ಅಥವಾ ಸರ್ಕಾರಿ ಒಡೆತನದಲ್ಲಿ ಆರಂಭಿಸಿ ರೈತರಿಗೆ ಅನುಕೂಲತೆ ಕಲ್ಪಿಸಿಕೊಡಲಾಗುವುದು. ಅಲ್ಲದೆ ಕಂಪ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ₹5 ಸಾವಿರ ಕೋಟಿ ಅನುದಾನ ನೀಡಲಾಗುವುದು ಎಂದು ಕ್ಷೇತ್ರದ ಜನತೆಗೆ ಭರವಸೆ ನೀಡಿದ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಹಲವು ತಿಂಗಳುಗಳು ಕಳೆದರೂ ಈ ಬಗ್ಗೆ ಶಾಸಕರಾಗಲಿ, ಸಂಬಂಧಪಟ್ಟ ಜನಪ್ರತಿನಿಧಿಗಳಾಗಲಿ ಚಕಾರ ಎತ್ತುತ್ತಿಲ್ಲ.
ಕಚೇರಿಗಳ ಆರಂಭಿಸುವಂತೆ ಒತ್ತಾಯ: ಕಂಪ್ಲಿ ತಾಲೂಕಾಗಿ ಐದು ವರ್ಷ ಪೂರ್ಣಗೊಂಡರೂ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಕಚೇರಿಗಳು ಆರಂಭಗೊಳ್ಳದೆ ನಿತ್ಯ ಹೊಸಪೇಟೆಗೆ ಅಲೆದಾಡುವ ಸಮಸ್ಯೆ ಎದುರಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಬಸ್ ಡಿಪೋ, ಅಗ್ನಿಶಾಮಕ ದಳ, ತಾಲೂಕು ನ್ಯಾಯಾಲಯ ಸೇರಿದಂತೆ ಇನ್ನಿತರೆ ಇಲಾಖೆಗಳಿಗೆ ಸಂಬಂಧಿಸಿದ ತಾಲೂಕು ಮಟ್ಟದ ಕಚೇರಿಗಳನ್ನು ಆರಂಭಿಸಿ ಅನುಕೂಲತೆ ಕಲ್ಪಿಸಬೇಕೆನ್ನುವುದು ತಾಲೂಕಿನ ಜನತೆಯ ಒತ್ತಾಯ. ಅನುದಾನ ನೀಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಈ ಹಿಂದೆ ನೀಡಿದ ಭರವಸೆಯಂತೆ ಕಂಪ್ಲಿಯ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಮುಂದಾಗಬೇಕು. ಕಂಪ್ಲಿ- ಗಂಗಾವತಿ ಸಂಪರ್ಕ ಸೇತುವೆ ನಿರ್ಮಾಣ ಹಾಗೂ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ₹5 ಸಾವಿರ ಕೋಟಿ ಅನುದಾನ ಬಿಡುಗಡೆಗೊಳಿಸಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯ ಕಾರ್ಯಾಧ್ಯಕ್ಷ ರಾಜು ನಾಯಕ ತಿಳಿಸಿದರು.