ಗೆಜ್ಜಲಗೆರೆ ಗ್ರಾಪಂನ್ನು ನಗರಸಭೆಗೆ ಸೇರಿಸುವ ಮುನ್ನ ಸ್ಥಳೀಯ ಜನರ ಸಭೆ ಕರೆಯಬೇಕು. ಅಭಿಪ್ರಾಯ ಸಂಗ್ರಹಿಸಬೇಕು. ಜನರ ಅಭಿಪ್ರಾಯ ಪರವಾಗಿ ಬಂದರಷ್ಟೇ ನಗರಸಭೆಗೆ ಸೇರಿಸಬೇಕು. ಇಲ್ಲವಾದರೆ ಕೈಬಿಡಬೇಕು. ಆದರೆ, ಶಾಸಕರು ಸಭೆ ಕರೆಯದೆ ಗ್ರಾಮಸ್ಥರ ಭಾವನೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಮದ್ದೂರು
ಗ್ರಾಮ ಪಂಚಾಯ್ತಿಯಾಗಿದ್ದುಕೊಂಡೇ ಸ್ವತಂತ್ರವಾಗಿ ಅಭಿವೃದ್ಧಿ ಮಾಡುವುದಕ್ಕೆ ಸಾಕಷ್ಟು ಅವಕಾಶಗಳಿವೆ. ಅದಕ್ಕೆ ಇಚ್ಛಾಶಕ್ತಿ, ಬದ್ಧತೆ ಮುಖ್ಯ. ನಗರಸಭೆಯಾದ ಮಾತ್ರಕ್ಕೆ ಸಮಗ್ರ ಅಭಿವೃದ್ಧಿಯಾಗಲಿದೆ ಎನ್ನುವುದು ಕೇವಲ ಭ್ರಮೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಟೀಕಿಸಿದರು.ಗೆಜ್ಜಲಗೆರೆ ಗ್ರಾಪಂ ಆಗಿ ಉಳಿಯಬೇಕೆಂದು ಗ್ರಾಮಸ್ಥರು ನಡೆಸುತ್ತಿರುವ ಹೋರಾಟದಲ್ಲಿ ಭಾಗಿಯಾಗಿ ಮಾತನಾಡಿ, ಗೆಜ್ಜಲಗೆರೆ ಗ್ರಾಪಂನ್ನು ನಗರಸಭೆಗೆ ಸೇರಿಸುವ ಮುನ್ನ ಸ್ಥಳೀಯ ಜನರ ಸಭೆ ಕರೆಯಬೇಕು. ಅಭಿಪ್ರಾಯ ಸಂಗ್ರಹಿಸಬೇಕು. ಜನರ ಅಭಿಪ್ರಾಯ ಪರವಾಗಿ ಬಂದರಷ್ಟೇ ನಗರಸಭೆಗೆ ಸೇರಿಸಬೇಕು. ಇಲ್ಲವಾದರೆ ಕೈಬಿಡಬೇಕು. ಆದರೆ, ಶಾಸಕರು ಸಭೆ ಕರೆಯದೆ ಗ್ರಾಮಸ್ಥರ ಭಾವನೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಗ್ರಾಮಸ್ಥರು, ಸದಸ್ಯರು ಜೊತೆ ಚರ್ಚಿಸದೆ ನಿರ್ಧಾರ ಕೈಗೊಂಡಿದ್ದಾರೆ. ಇದು ಏಕಪಕ್ಷೀಯ ನಡೆ ಎಂದು ದೂಷಿಸಿದರು.
ಹೋರಾಟಕ್ಕೆ ಜಗ್ಗುವುದಿಲ್ಲ, ಬಗ್ಗುವುದಿಲ್ಲವೆಂದು ಭಂಡತನ ಪ್ರದರ್ಶಿಸಿದರೆ ನಾವು ಹೋರಾಟ ಮಾಡಿ ಬಗ್ಗಿಸಬೇಕಾಗುತ್ತೆ. ಜನರ ಹೋರಾಟಕ್ಕೆ ನಮ್ಮ ಬೆಂಬಲ ಇದ್ದೆ ಇರುತ್ತದೆ. ಜಯ ಸಿಕ್ಕುವವರೆಗೆ ಹೋರಾಟ ಮುಂದುವರಿಯಲಿದೆ ಎಂದರು.ಜೆಡಿಎಸ್ ಕಾರ್ಯಾಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ, ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ದಿವ್ಯರಾಮಚಂದ್ರಶೆಟ್ಟಿ, ಮುಖಂಡರಾದ ಕೆ.ಟಿ.ರಾಜಣ್ಣ, ಜಿ.ಟಿ.ಪುಟ್ಟಸ್ವಾಮಿ, ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ್, ಜಿ.ಸಿ.ಮಹೇಂದ್ರ ಇದ್ದರು. ಗೆಜ್ಜಲಗೆರೆ ಬಳಿ ಹೆದ್ದಾರಿ ಸರ್ವೀಸ್ ರಸ್ತೆ ಬಂದ್
ಮದ್ದೂರು:ಗೆಜ್ಜಲಗೆರೆ ಗ್ರಾಮ ಪಂಚಾಯ್ತಿಯನ್ನು ಮದ್ದೂರು ನಗರಸಭೆ ವ್ಯಾಪ್ತಿಯಿಂದ ಕೈಬಿಡುವಂತೆ ಒತ್ತಾಯಿಸಿ ರೈತರು, ಗ್ರಾಮಸ್ಥರು ಗೆಜ್ಜಲಗೆರೆ ಗ್ರಾಪಂ ಕಚೇರಿ ಎದುರು ಸರ್ವೀಸ್ ರಸ್ತೆ ಬಂದ್ ಮಾಡಿ ಭಾನುವಾರ ಪ್ರತಿಭಟನೆ ನಡೆಸಿದರು.
ಭಾನುವಾರದ ಪ್ರತಿಭಟನೆಯಲ್ಲಿ ಬಿಜೆಪಿಯ ಹಲವು ನಾಯಕರು ಪಾಲ್ಗೊಂಡ ಹಿನ್ನೆಲೆಯಲ್ಲಿ ಸರ್ವೀಸ್ ರಸ್ತೆಯ ಚೇರ್‌ಗಳನ್ನು ಹಾಕಿ ಕುಳಿತು ಹೋರಾಟಗಾರರು ಪ್ರತಿಭಟನೆ ನಡೆಸಿದರು. ಇದರಿಂದ ಸರ್ವೀಸ್ ರಸ್ತೆಯಲ್ಲಿ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಲ ಬದಿಯ ಒಂದೇ ಸರ್ವೀಸ್ ರಸ್ತೆಯಲ್ಲಿ ಎರಡು ಕಡೆಯ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡಲಾಯಿತು. ಹನಕೆರೆ ಅಂಡರ್ ಪಾಸ್ ಬಳಿಯೇ ವಾಹನಗಳನ್ನು ಡೈವರ್ಟ್ ಮಾಡಿ ಒಂದೇ ಸರ್ವೀಸ್ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.