ಹನೂರು ತಾಲೂಕಿನ ಸಮಗ್ರ ಅಭಿವೃದ್ಧಿಗೆ ಹರಕೆ: ಗೌಡೆಗೌಡ

| Published : Feb 11 2025, 12:47 AM IST

ಸಾರಾಂಶ

ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿ ಗೃಹದಲ್ಲಿ ರೈತ ಸಂಘಟನೆಯಿಂದ ಪತ್ರಿಕಾಗೋಷ್ಠಿ ನಡೆಯಿತು.

ಕನ್ನಡಪ್ರಭ ವಾರ್ತೆ ಹನೂರು

ಹನೂರು ತಾಲೂಕು ಸಮಗ್ರ ಅಭಿವೃದ್ಧಿಯ ವಿಚಾರವಾಗಿ ಸರ್ಕಾರದ ಕಣ್ತೆರೆಸಲು ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಅಮ್ಜದ್ ಖಾನ್ ತಿಳಿಸಿದರು.

ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಕೊಳ್ಳೇಗಾಲದಿಂದ ಬೇರ್ಪಟ್ಟ ಹನೂರು ತಾಲೂಕು ಪ್ರತ್ಯೇಕವಾಗಿ ಆರು ವರ್ಷಗಳಿಗೆ ಕಳೆಯುತ್ತಿದೆ. ಆದರೆ ಇಂದಿಗೂ ಕೂಡ ಮಿನಿ ವಿಧಾನಸೌಧ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿಲ್ಲ. ತಾಲೂಕಿನಲ್ಲಿ 12 ಪಶು ಆಸ್ಪತ್ರೆಗಳಿದ್ದು ಓರ್ವ ವೈದ್ಯ ಮಾತ್ರ ಕರ್ತವ್ಯದಲ್ಲಿದ್ದು, ಇದರಿಂದ ರೈತರಿಗೆ ನಿತ್ಯ ಸಮಸ್ಯೆ ಎದುರಾಗುತ್ತಿದೆ.

ಶೀಘ್ರವೇ ಪಶು ವೈದ್ಯರನ್ನು ನೇಮಕ ಮಾಡುವಂತೆ, ನೂತನ ತಾಲೂಕು ಕೇಂದ್ರದಲ್ಲಿ ನ್ಯಾಯಲಯ ಕಚೇರಿ ನಿರ್ಮಾಣ ಮಾಡುವಂತೆ, ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿದ್ದು ಸಮಸ್ಯೆ ನೀಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ತಾಲೂಕಿನ ಅನೇಕ ಗ್ರಾಮಗಳ ಸಂಪರ್ಕ ಕಲ್ಪಿಸುವಂತಹ ರಸ್ತೆಯು ತೀರ ಹದಗೆಟ್ಟಿದ್ದು ಕೂಡಲೇ ದುರಸ್ತಿ ಪಡಿಸಬೇಕು ಅರಣ್ಯದಂಚಿನ ಜಮೀನುಗಳಲ್ಲಿ ಕಾಡುಪ್ರಾಣಿಗಳ ಉಪಟಳಕ್ಕೆ ನಿಯಂತ್ರಣ ಮಾಡಲು ಶಾಶ್ವತ ಪರಿಹಾರ ಕಲ್ಪಿಸಬೇಕು. ಕಾಡಂಚಿನ ಗ್ರಾಮಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ಅನುದಾನ ನೀಡಿ ಅಲ್ಲಿನ ಜನರ ಅಭಿವೃದ್ಧಿಗೆ ಮನ್ನಣೆ ನೀಡಬೇಕು. ಸರ್ಕಾರದ ಗಮನ ಸೆಳೆಯಲು ಕ್ಯಾಬಿನೆಟ್ ಸಭೆಯ ಮರುದಿನ ನಮ್ಮ ರೈತ‌ಸಂಘಟನೆಯಿಂದ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗುತ್ತಿದ್ದು ರೈತ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು.

ಜಿಲ್ಲಾ ಉಪಾಧ್ಯಕ್ಷ ಗೌಡೆಗೌಡ ಮಾತನಾಡಿ, ಮಾದಪ್ಪನ ಭಕ್ತರು ಮಹದೇಶ್ವರ ಬೆಟ್ಟಕ್ಕೆ ಹರಕೆ ಹೊತ್ತು ಕಾಲ್ನಡಿಗೆಯಲ್ಲಿ ತೆರೆಳದಿರೆ ನಾವು ತಾಲೂಕಿನ ಅಭಿವೃದ್ಧಿಯ ಹರಕೆ ಹೊತ್ತು ಸರಕಾರದ ಗಮನ ಸೆಳೆಯಲು ಕ್ಯಾಬಿನೆಟ್ ಸಭೆಯ ಸಂದರ್ಭದಲ್ಲಿ ತೆರಳುತ್ತಿದ್ದೇವೆ ಎಂದರು.

ವಿಶ್ವ ರೈತ ಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿ 89ನೇ‌ ವರ್ಷದ ನೆನೆಪಿನ ದಿನವನ್ನು ಮೈಸೂರಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತರ ವಿರೋಧಿ ನೀತಿಗಳನ್ನು ಖಂಡಿಸಿ ಫೆ.13ರಂದು ವಿಶೇಷವಾಗಿ ಆಚರಣೆ ಮಾಡುತ್ತಿದ್ದು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಲೋಕೇಶ್‌, ತಾಲೂಕು ಗೌರವಾಧ್ಯಕ್ಷ ರಾಜಣ್ಣ ಉಪಾಧ್ಯಕ್ಷ ಪಳನಿಸ್ವಾಮಿ, ರೈತ ಮುಖಂಡರಾದ ಶಿವಣ್ಣ, ಶಿವಲಿಂಗ, ರಾಜೇಂದ್ರ, ರಾಮೇಗೌಡ, ನಾಗರಾಜು. ಬಸವರಾಜು ಹಾಜರಿದ್ದರು.