ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಏಕಮಾತ್ರ ಧ್ಯೇಯ. ತಾಲೂಕಿನ ಎಲ್ಲಾ ರಸ್ತೆಗಳ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡುತ್ತಿದ್ದೇನೆ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.

ತಾಲೂಕಿನ ನಾಟನಹಳ್ಳಿ, ಬಿ.ಬಾಚಹಳ್ಳಿ, ಹೆಮ್ಮಡಹಳ್ಳಿ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಒಂದು ತಾಲೂಕಿನ ಅಭಿವೃದ್ಧಿ ಆಗಿದೆ ಎಂದು ಹೊರಗಿನ ಜನತೆಗೆ ತಿಳಿಯಬೇಕಾದರೆ ಮೊದಲು ರಸ್ತೆಗಳ ಅಭಿವೃದ್ಧಿ ಆಗಬೇಕು. ಆಗ ಮಾತ್ರ ಒಳ್ಳೆಯ ಹೆಸರು ಬರಲು ಸಾಧ್ಯ ಎಂದರು.ತಾಲೂಕಿನಾದ್ಯಂತ ಸಾಕಷ್ಟು ಕಡೆಗಳಲ್ಲಿ ಹತ್ತಾರು ವರ್ಷಗಳಿಂದ ಡಾಂಬರು ಕಾಣದ ಗುಂಡಿ ರಸ್ತೆಗಳೇ ಇವೆ. ಎಲ್ಲಾ ರಸ್ತೆಗಳ ಅಭಿವೃದ್ಧಿಗೆ ಹಾಗೂ ಶಿಥಿಲಗೊಂಡಿರುವ ಸೇತುವೆಗಳನ್ನು ಪುನರ್ ಮಾಡಬೇಕಾದರೆ ಕನಿಷ್ಠ 500 ಕೋಟಿ ರು. ಅಗತ್ಯವಿದೆ ಎಂದು ತಿಳಿಸಿದರು.

ಈಗಿನ ಕಾಂಗ್ರೆಸ್ ಸರ್ಕಾರ ನನ್ನ ಮನವಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಆದರೂ ಸಹ ಸಂಬಂಧಪಟ್ಟ ಸಚಿವರು ಹಾಗೂ ಇಲಾಖೆ ಮುಖ್ಯ ಅಧಿಕಾರಿಗಳಿಗೆ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟು ಅಲ್ಪಸ್ವಲ್ಪ ಅನುದಾನ ಬಿಡುಗಡೆ ಮಾಡಿಸಿಕೊಂಡು ಬಂದು ಪ್ರಮುಖ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಿ ರಸ್ತೆ ಮತ್ತು ಸೇತುವೆಗಳ ಅಭಿವೃದ್ಧಿಗೆ ಕೈಜೋಡಿಸುತ್ತಿದ್ದೇನೆ ಎಂದರು.

ಶಾಸಕರಿಗೆ ನೀಡುತ್ತಿರುವ ಪ್ರದೇಶಾಭಿವೃದ್ಧಿ ನಿಧಿ ಅನುದಾನದಲ್ಲಿ ಪ್ರತಿಯೊಂದು ಗ್ರಾಮಗಳಿಗೂ ತಲಾ 10 ಲಕ್ಷ ರು. ಗಳಂತೆ ಹಂಚಿಕೆ ಮಾಡಿ ಗ್ರಾಮಗಳಲ್ಲಿ ತೀರಾ ಹದಗೆಟ್ಟಿರುವ ರಸ್ತೆ ಹಾಗೂ ಬಾಕ್ಸ್ ಡ್ರೈನೇಜ್ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿದೆ ಎಂದರು.


ಈ ವೇಳೆ ಜೆಡಿಎಸ್ ಮುಖಂಡರಾದ ಬೋರ್‌ವೆಲ್ ಮಹೇಶ್, ಲೋಕೋಪಯೋಗಿ ಇಲಾಖೆ ಎಇಇ ರಾಝಿಕಾ, ಎಂಜಿನಿಯರ್ ಬಸವೇಗೌಡ, ಪ್ರಥಮ ದರ್ಜೆ ಗುತ್ತಿಗೆದಾರರಾದ ಎನ್.ಆರ್.ರಮೇಶ್, ಬಳ್ಳೇಕೆರೆ ಮನು, ಪುರಸಭಾ ಮಾಜಿ ಸದಸ್ಯ ಎಚ್.ಡಿ.ಅಶೋಕ್, ಯುವ ಮುಖಂಡರಾದ ಶರತ್ ಚಂದ್ರ, ಪರಶರಣ್, ಬಳ್ಳೇಕೆರೆ ಕುಮಾರ, ಚೌಡೇನಹಳ್ಳಿ ಕಿಟ್ಟಿ, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಸೇರಿದಂತೆ ವಿವಿಧ ಗ್ರಾಮದ ಮುಖಂಡರು, ಯುವಕರು, ಗ್ರಾಮಸ್ಥರು ಉಪಸ್ಥಿತರಿದ್ದರು.ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧರಾಗಿ: ಎಚ್.ಟಿ.ಮಂಜು ಕರೆ

ಕೆ.ಆರ್.ಪೇಟೆ:

ಜೆಡಿಎಸ್ ಕಾರ್ಯಕರ್ತರು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಈಗಿನಿಂದಲೇ ಸಿದ್ದರಾಗಬೇಕು. ಮುಂಬರುವ ಗ್ರಾಪಂ, ತಾಪಂ, ಜಿಪಂ ಹಾಗೂ ಪುರಸಭೆ ಚುನಾವಣೆಗಳಲ್ಲಿ ಅವಕಾಶ ಮಾಡಿಕೊಟ್ಟು ಗೆಲುವಿಗಾಗಿ ನಾನು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಜೆಡಿಎಸ್ ಕಾರ್ಯಕರ್ತರು ಸೈನಿಕಂತೆ ತಾಲೂಕಿನಲ್ಲಿ ಸದಾ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಇವರಿಗೆ ಗ್ರಾಪಂ, ತಾಪಂ, ಜಿಪಂ ಹಾಗೂ ಪುರಸಭೆ ಚುನಾವಣೆಗಳಲ್ಲಿ ಅವಕಾಶ ಮಾಡಿಕೊಟ್ಟು ಗೆಲುವಿಗಾಗಿ ನಾನು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.

ನನ್ನ ಗೆಲುವಿಗೆ ಕಾರ್ಯಕರ್ತರ ಶ್ರಮವಿದೆ. ನಾನು ಕೂಡ ಸದಾ ನಮ್ಮ ಪಕ್ಷದ ಕಾರ್ಯಕರ್ತರ ಕಷ್ಟ ಸುಖಗಳಿಗೆ ಭಾಗಿಯಾಗಿ ಅವರ ಬೆನ್ನೆಲುಭಾಗಿ ಕೆಲಸ ಮಾಡುತ್ತೇನೆ. ಈಗಿನಿಂದಲೇ ಚುನಾವಣೆಗೆ ಸಜ್ಜಾಗಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಿಮ್ಮ ಗೆಲುವಿಗೆ ಪೂರಕ ವಾತಾವರಣ ಸೃಷ್ಟಿಸಲು ನಾನು ನಿಮ್ಮೊಂದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಭರವಸೆ ನೀಡಿದರು.

ಈ ಬಾರಿ ನಾನು ಶಾಸಕನಾಗಿ ನಿರೀಕ್ಷಿತ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ 2028ಕ್ಕೆ ನಮ್ಮ ಜೆಡಿಎಸ್ - ಬಿಜೆಪಿ‌ ಮೈತ್ರಿ ಸರ್ಕಾರ ಬರುವುದು ಸೂರ್ಯ ಚಂದ್ರ ಉದಯಿಸುವಷ್ಟೇ ಸತ್ಯ. ತಾಲೂಕಿನ ಜನತೆ ನನಗೆ ಮತ್ತೊಮ್ಮೆ ಆಶೀರ್ವಾದ ‌ಮಾಡಿದರೆ ತಾಲೂಕಿನ ಸರ್ವಾಂಗೀಣ ಅಭಿವೃದ್ದಿಗೆ ಸಾವಿರಾರು ಕೋಟಿ ರು ಅನುದಾನ ತಂದು ಅಭಿವೃದ್ಧಿ ಮಾಡುತ್ತೇನೆ ಎಂದು ಭರವಸೆ ನೀಡಿದರು.