ಮಣ್ಣಿನ ಆರೋಗ್ಯ ನಿರ್ವಹಣೆಗೆ ಸಮಗ್ರ ಪೋಷಕಾಂಶ ಅತ್ಯವಶ್ಯಕ: ವೀರನಗೌಡ ಪೊಲೀಸಗೌಡ್ರ

| Published : Dec 18 2024, 12:45 AM IST

ಮಣ್ಣಿನ ಆರೋಗ್ಯ ನಿರ್ವಹಣೆಗೆ ಸಮಗ್ರ ಪೋಷಕಾಂಶ ಅತ್ಯವಶ್ಯಕ: ವೀರನಗೌಡ ಪೊಲೀಸಗೌಡ್ರ
Share this Article
  • FB
  • TW
  • Linkdin
  • Email

ಸಾರಾಂಶ

ಕಡಿಮೆ ಖರ್ಚಿನಲ್ಲಿ ರೈತರು ಹೆಚ್ಚಿನ ಆದಾಯವನ್ನು ಪಡೆಯಲು ಸಹಕರಿಸಬೇಕು ಎಂದು ವೀರನಗೌಡ ಪೊಲೀಸಗೌಡ್ರ ಹೇಳಿದರು.

ರಾಣಿಬೆನ್ನೂರು: ರಸ ಗೊಬ್ಬರಗಳ ಬಳಕೆ ಕಡಿಮೆ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಗೊಬ್ಬರ, ಹಸಿರೆಲೆ ಗೊಬ್ಬರ ಹಾಗೂ ಜೈವಿಕ ಗೊಬ್ಬರದ ಬಳಕೆಯಿಂದ ಆಹಾರದಲ್ಲಿ ಪೋಷಕಾಂಶಗಳ ಭದ್ರತೆಯನ್ನು ಮಾಡಬಹುದು ಎಂದು ಧಾರವಾಡ ಕೃಷಿ ವಿವಿ ಆಡಳಿತ ಮಂಡಳಿ ಸದಸ್ಯ ವೀರನಗೌಡ ಪೊಲೀಸಗೌಡ್ರ ಹೇಳಿದರು.

ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹೈದರಾಬಾದ್‌ನ ಮ್ಯಾನೇಜ್, ಧಾರವಾಡ ಕೃಷಿ ವಿಶ್ವವಿದ್ಯಾಲಯ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ “ಸಮಗ್ರ ಪೋಷಕಾಂಶಗಳ ನಿರ್ವಹಣೆ” 15 ದಿನದ ವಸತಿ ಸಹಿತ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟಿಸಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ಕೊಟ್ಟಿಗೆ ಗೊಬ್ಬರದ ಅಭಾವವಿರುವುದರಿಂದ ರೈತರು ಬೆಳೆಯನ್ನು ಕಟಾವು ಮಾಡಿದ ನಂತರ ಉಳಿದ ಕೃಷಿ ತ್ಯಾಜ್ಯ ವಸ್ತುಗಳನ್ನು ಸುಡುವ ಬದಲು ಭೂಮಿಗೆ ಸೇರಿಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸುವುದರ ಜೊತೆಗೆ ಮಾಲಿನ್ಯ ತಡೆಯಬಹುದೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ತರಬೇತಿ ಪಡೆದ ನಂತರ ನೀವು ತಿಳಿದುಕೊಂಡ ವೈಜ್ಞಾನಿಕ ಮಾಹಿತಿಯನ್ನು ಒಬ್ಬರಿಂದ ಒಬ್ಬರಿಗೆ ಪಸರಿಸಬೇಕು ಹಾಗೂ ಕಡಿಮೆ ಖರ್ಚಿನಲ್ಲಿ ರೈತರು ಹೆಚ್ಚಿನ ಆದಾಯವನ್ನು ಪಡೆಯಲು ಸಹಕರಿಸಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಧಾರವಾಡ ಕೃಷಿ ವಿವಿ ವಿಸ್ತರಣಾ ಅಧಿಕಾರಿ ಡಾ. ಆರ್. ಬಸವರಾಜಪ್ಪ ಮಾತನಾಡಿ, ವಿವಿಧ ಪೋಷಕಾಂಶಗಳ ಮೂಲಗಳಾದ ದ್ರವ ರೂಪದ ಗೊಬ್ಬರ, ನ್ಯಾನೋ ಗೊಬ್ಬರ, ನೀರಿನಲ್ಲಿ ಕರಗುವ ಗೊಬ್ಬರಗಳು ಮತ್ತು ಜೈವಿಕ ಗೊಬ್ಬರಗಳ ಬಳಕೆಯನ್ನು ಬೆಳೆಗಳಿಗೆ ಅನುಗುಣವಾಗಿ ಹೇಗೆ ಒದಗಿಸಬೇಕು ಎಂಬುದರ ಕುರಿತು ಮಾಹಿತಿ ನೀಡಿದರು.

ಏಕದಳ, ದ್ವಿದಳ, ಎಣ್ಣೆ ಕಾಳು, ಅಂತರ ಬೆಳೆ ಮತ್ತು ಮಿಶ್ರ ಬೆಳೆ ಪದ್ಧತಿಯನ್ನು ರೈತರು ಅಳವಡಿಸಿಕೊಳ್ಳುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಬಹುದು. ಕೇವಲ ರಾಸಾಯನಿಕ ಗೊಬ್ಬರಗಳಿಗೆ ಒತ್ತು ನೀಡದೆ, ಇನ್ನಿತರ ಪೋಷಕಾಂಶಗಳ ಮೂಲಗಳಾದ ಸಾವಯವ ಗೊಬ್ಬರ, ಹಸಿರೆಲೆ ಗೊಬ್ಬರಗಳನ್ನು ಹಾಕಿ ಮಣ್ಣಿನ ಭೌತಿಕ, ಜೈವಿಕ ಹಾಗೂ ರಾಸಾಯನಿಕ ಗುಣಧರ್ಮಗಳನ್ನು ಕಾಪಾಡಿಕೊಂಡು, ಮಣ್ಣಿನ ಫಲವತ್ತತೆಯನ್ನು ಅಭಿವೃದ್ಧಿಸಿಕೊಂಡು ಸುಸ್ಥಿರ ಕೃಷಿ ಮಾಡಬೇಕು. ಈ ನಿಟ್ಟಿನಲ್ಲಿ ಕೃಷಿ ಪರಿಕರ ಮಾರಾಟಗಾರರಾದ ತಾವು ಸಹ ವಿಸ್ತರಣಾ ಕಾರ್ಯಕರ್ತರಾಗಿ ಕೆಲಸ ಮಾಡಿ ರೈತರಿಗೆ ಆದಾಯ ಹೆಚ್ಚಿಸಲು ಪ್ರೋತ್ಸಾಹಿಸಬೇಕು ಎಂದರು.

ಕೃಷಿ ಇಲಾಖೆ ಉಪ ನಿರ್ದೇಶಕ ಕರಿಯಲ್ಲಪ್ಪ ಕೊರಚರ ಮಾತನಾಡಿ, ಕೃಷಿಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆಯಲ್ಲಿ ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರದ, ಹಸಿರೆಲೆ ಗೊಬ್ಬರ ಮತ್ತು ಜೈವಿಕ ಗೊಬ್ಬರಗಳ ಬಳಕೆಯನ್ನು ರೈತರು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವುದರಿಂದ ಇಳುವರಿ ಹೆಚ್ಚಿಸಬಹುದು ಎಂದರು. ರೈತರು ಎರೆಹುಳು ಘಟಕಗಳನ್ನು ನಿರ್ಮಿಸಿ ಎರೆಹುಳು ಗೊಬ್ಬರವನ್ನು ತಯಾರಿಸಿ ಮಾರಾಟ ಮಾಡುವುದರಿಂದ ಅಧಿಕ ಲಾಭ ಸಹಗಳಿಸಬಹುದು ಎಂದರು. ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಗುರುಪ್ರಸಾದ ಜಿ. ಎಸ್. ಮಾತನಾಡಿದರು.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಮಹೇಶ ಕಡಗಿ, ಡಾ. ಬಸಮ್ಮ ಹಾದಿಮನಿ, ಡಾ. ರಶ್ಮಿ ಸಿ.ಎಂ. ಡಾ. ಸಿದ್ಧಗಂಗಮ್ಮ ಕೆ.ಆರ್., ಡಾ. ಅಕ್ಷತಾ ರಾಮಣ್ಣನವರ, ಹಿರಿಯ ತಾಂತ್ರಿಕ ಅಧಿಕಾರಿಗಳಾದ ಚಂದ್ರಕಾಂತ ಕೊಟಬಾಗಿ, ಕೃಷ್ಣಾನಾಯಕ ಎಲ್., ಶಿವಪ್ಪ ಹಣ್ಣಿ ಹಾಗೂ 27 ಜನ ಕೃಷಿ ಪತ್ತಿನ ಸಹಕಾರಿ ಸಂಘದ ನಿಯಮಿತ ಸದಸ್ಯರು ಪಾಲ್ಗೊಂಡಿದ್ದರು.