ಜಿಲ್ಲೆಯ ಗರ್ಭಧಾರಣಾ ಪೂರ್ವ, ಪ್ರಸವ ಪೂರ್ವ ಪತ್ತೆ ತಂತ್ರ ವಿಧಾನಗಳ ಸಕ್ಷಮ ಪ್ರಾಧಿಕಾರದ ಸಭೆ
ಕನ್ನಡಪ್ರಭ ವಾರ್ತೆ ಕಾರವಾರಗರ್ಭಧಾರಣಾ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆಯನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ನೊಂದಣಿಯಾಗಿರುವ ಎಲ್ಲಾ ಸ್ಕ್ಯಾನಿಂಗ್ ಸೆಂಟರ್‌ಗಳನ್ನು ನಿಯಮಿತ ಮತ್ತು ಸಮಗ್ರವಾಗಿ ಪರಿಶೀಲನೆ ನಡೆಸಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ನಿರ್ದೇಶನ ನೀಡಿದರು.
ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಗರ್ಭಧಾರಣಾ ಪೂರ್ವ ಮತ್ತು ಪ್ರಸವ ಪೂರ್ವ ಪತ್ತೆ ತಂತ್ರ ವಿಧಾನಗಳ ಸಕ್ಷಮ ಪ್ರಾಧಿಕಾರದ ಸಭೆಯ ಆಧ್ಯಕ್ಷತೆ ವಹಿಸಿ ಮಾತನಾಡಿದರು.ಪ್ರಸ್ತುತ ಜಿಲ್ಲೆಯಲ್ಲಿ 82 ಸ್ಕ್ಯಾನಿಂಗ್ ಸೆಂಟರ್ ಗಳಿದ್ದು, ಈ ಸೆಂಟರ್‌ಗಳಿಗೆ ಅಧಿಕಾರಿಗಳು ನಿಯಮಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು, ಪರಿಶೀಲನೆ ಸಂದರ್ಭದಲ್ಲಿ ಕೆಂದ್ರದಲ್ಲಿನ ಅಗತ್ಯ ದಾಖಲಾತಿಗಳು ಮತ್ತು ಈ ಕೇಂದ್ರಗಳಲ್ಲಿ ಗರ್ಭಧಾರಣಾ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ಮಾಡುತ್ತಿಲ್ಲ ಎಂಬುದರ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಭೇಟಿ ನೀಡಿದ ಸಂದರ್ಭದ ಜಿಪಿಎಸ್ ಪೋಟೋಗಳೊಂದಿಗೆ ಸಮಗ್ರ ವರದಿ ಸಿದ್ದಪಡಿಸಿ, ಈ ವರದಿಯನ್ನು ದೃಢೀಕರಿಸಿ ಸಲ್ಲಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಂಜಯ್ ದೊಡ್ಡಮನಿ, ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಕ್ರಿಮ್ಸ್‌ನ ಸ್ತ್ರೀರೋಗ ತಜ್ಞ ಡಾ. ನರೇಶ ಪಾವಸ್ಕರ್, ಸದಸ್ಯರಾದ ಕ್ರಿಮ್ಸ್‌ನ ಮಕ್ಕಳ ವಿಭಾಗದ ಮುಖ್ಯಸ್ಥ ಮತ್ತು ಸಹ ಪ್ರಾಧ್ಯಾಪಕ ಡಾ. ಪವನ ಕುಮಾರ್, ಜಿಲ್ಲಾ ವಾರ್ತಾಧಿಕಾರಿ ಬಿ.ಶಿವಕುಮಾರ್, ವಕೀಲೆ ಸುಧಾರಾಣಿ ಸಾಮಾಜಿಕ ಕಾರ್ಯಕರ್ತೆ ಯಶೋಧ ಹೆಗಡೆ ಮತ್ತು ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷೆ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಿನಿ ಬೋರಕರ, ಸದಸ್ಯರಾದ ರೇಡಿಯಾಲಜಿಸ್ಟ್ ಡಾ. ಆಶಿತಾ, ರೋಟರಿ ಕ್ಲಬ್ ನ ಹೇಮ್ಲಾ ಅಲ್ಫಾನ್ಸೋ ಇದ್ದರು.