ಸಾರಾಂಶ
ಪಟ್ಟಣದ ಸರ್ಕಾರಿ ಉರ್ದು ಶಾಲೆ ಮತ್ತು ಮೌಲಾನ ಆಜಾದ್ ಶಾಲೆಯ ಆವರಣದಲ್ಲಿ ಶೌಚಾಲಯ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಸೋಮವಾರ ಭಾರತ ವಿದ್ಯಾರ್ಥಿ ಫೆಡರೇಶನ್ ತಾಲೂಕು ಸಮಿತಿ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಯಲಬುರ್ಗಾ ಬಿಇಒ ಕಚೇರಿ ಮುಂದೆ ಎಸ್‌ಎಫ್‌ಐ ನೇತೃತ್ವದಲ್ಲಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಯಲಬುರ್ಗಾಪಟ್ಟಣದ ಸರ್ಕಾರಿ ಉರ್ದು ಶಾಲೆ ಮತ್ತು ಮೌಲಾನ ಆಜಾದ್ ಶಾಲೆಯ ಆವರಣದಲ್ಲಿ ಶೌಚಾಲಯ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಸೋಮವಾರ ಭಾರತ ವಿದ್ಯಾರ್ಥಿ ಫೆಡರೇಶನ್ ತಾಲೂಕು ಸಮಿತಿ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಬಳಿಕ ಬಿಇಒ ಸೋಮಶೇಖರಗೌಡ ಅವರಿಗೆ ಮನವಿ ಸಲ್ಲಿಸಿದರು.
ಬಳಿಕ ಭಾರತ ವಿದ್ಯಾರ್ಥಿ ಫೆಡರೇಶನ್ ತಾಲೂಕು ಸಮಿತಿ ಅಧ್ಯಕ್ಷ ಎಂ. ಸಿದ್ದಪ್ಪ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿ, ಪಟ್ಟಣದಲ್ಲಿರುವ ಸರ್ಕಾರಿ ಉರ್ದು ಶಾಲೆ ಮತ್ತು ಮೌಲಾನಾ ಅಜಾದ್ ಶಾಲೆ ಒಂದೇ ಆವರಣದಲ್ಲಿದ್ದು, ಎರಡು ಶಾಲೆಯಲ್ಲಿ ಸೇರಿ ಸುಮಾರು ೨೫೦ರಿಂದ ೩೦೦ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಈ ಮೊದಲು ಶಾಲೆಯ ಆವರಣದಲ್ಲಿ ಶೌಚಾಲಯವಿತ್ತು. ಕೆಲವು ದಿನಗಳ ಹಿಂದೆ ಅದನ್ನು ತೆರವುಗೊಳಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಶೌಚಕ್ಕೆ ಹೋಗಲು ತೀವ್ರ ತೊಂದರೆಯಾಗುತ್ತಿದೆ. ಶಾಲೆಯಿಂದ ರಸ್ತೆಯ ಪಕ್ಕದಲ್ಲಿರುವ ಸಾರ್ವಜನಿಕರ ಶೌಚಕ್ಕೆ ಹೋಗಬೇಕಾದ ಅನಿವಾರ್ಯವಾಗಿದೆ. ಆದರೆ ವಿದ್ಯಾರ್ಥಿಗಳು ಹೋಗಬಹುದು. ಇನ್ನೂ ವಿದ್ಯಾರ್ಥಿನಿಯರ ಪಾಡೇನು? ಹೀಗಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಕೂಡಲೇ ಶಾಲಾವರಣದಲ್ಲೇ ಶೌಚಾಲಯ ನಿರ್ಮಿಸಿಕೊಡಬೇಕು. ಜತೆಗೆ ಕುಡಿಯುವ ನೀರು ಇನ್ನಿತರ ಸೌಕರ್ಯಗಳನ್ನು ಬಿಇಒ ಅವರು ಒಂದು ವಾರದೊಳಗಾಗಿ ದೊರೆಕಿಸಿಕೊಡಬೇಕು ಎಂದು ಒತ್ತಾಯಿಸಿದರು.ಬಿಇಒ ಸೋಮಶೇಖರಗೌಡ ಮನವಿ ಸ್ವೀಕರಿಸಿ ಮಾತನಾಡಿ, ಶಾಲಾ ಆವರಣದಲ್ಲಿದ್ದ ಶೌಚಾಲಯವನ್ನು ಯಾವ ಕಾರಣಕ್ಕೆ ತೆರವುಗೊಳಿಸಿದ್ದಾರೆ ಎನ್ನುವ ಮಾಹಿತಿ ಪಡೆದುಕೊಂಡು ಆದಷ್ಟು ತ್ವರಿತವಾಗಿ ಶೌಚಾಲಯ ನಿರ್ಮಾಣ ಸೇರಿದಂತೆ ಇನ್ನಿತರ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂದರು.
ಪಾಲಕರಾದ ರಹೀಮನ್‌ಸಾಬ, ಮಹಮ್ಮದ್ ಗೌಸ್, ಅಹಮದ್ ಪಾಷಾ, ಶರಣಪ್ಪ ನಿಡಗುಂದಿ, ಖುರ್ಷಿದ್, ರಿಯಾಜ್ ಖಾಜಿ, ಮಹಮ್ಮದ್ ರಫೀಕ್, ರಾಶೀದ್ ಖಾಜಿ, ಬಾಬುಸಾಬ ವಣಗೇರಿ, ಮೈನುದ್ದೀನ್ ಇದ್ದರು.